Site icon Vistara News

Satyapal Malik: ಸತ್ಯಪಾಲ್‌ ಮಲಿಕ್‌ಗೆ ಸಂಬಂಧಿಸಿದ 9 ಸ್ಥಳಗಳಲ್ಲಿ ಸಿಬಿಐ ದಾಳಿ

Satya Pal Malik

Premises of Satya Pal Malik’s former staff among 12 places raided by CBI

ಹೊಸ ದಿಲ್ಲಿ: ದೇಶದ ಒಂಬತ್ತು ಕಡೆಗಳಲ್ಲಿ ಸಿಬಿಐ ತಂಡ ಬುಧವಾರ ದಾಳಿ (CBI Raid) ನಡೆಸಿದೆ. ಜಮ್ಮು- ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ಗೆ (Satyapal Malik) ಸಂಬಂಧಿಸಿದ ಸ್ಥಿರ- ಚರ ಆಸ್ತಿಗಳ ಅಕ್ರಮಗಳ ಪರಿಶೀಲನೆಗೆ ಸಿಬಿಐ ಮುಂದಾಗಿದೆ ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರ, ದೆಹಲಿ-ಎನ್‌ಸಿಆರ್ ಮತ್ತು ರಾಜಸ್ಥಾನದ ಒಂಬತ್ತು ಸ್ಥಳಗಳಲ್ಲಿ ಸಿಬಿಐ ದಾಳಿಗಳು ನಡೆದಿವೆ. ಇದರಲ್ಲಿ ಸತ್ಯಪಾಲ್ ಮಲಿಕ್ ಅವರ ಪತ್ರಿಕಾ ಕಾರ್ಯದರ್ಶಿಗೆ ಸಂಬಂಧಿಸಿದ ಆಸ್ತಿಗಳು ಸೇರಿವೆ. ಮಲಿಕ್ ಅವರು ಮಾಡಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಶೋಧ ನಡೆಸಲಾಗಿದೆ.

ಸಿಬಿಐ ದಾಖಲಿಸಿರುವ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಲಿಕ್‌ ಅವರ ಪತ್ರಿಕಾ ಕಾರ್ಯದರ್ಶಿ ಸುನಕ್ ಬಾಲಿ ಪ್ರಮುಖ ಶಂಕಿತ. ದಾಳಿ ನಡೆಸಲಾಗಿರುವ ಎಲ್ಲಾ ಸ್ಥಳಗಳೂ ಮಲಿಕ್ ಅವರ ಪ್ರಸ್ತುತ ಮತ್ತು ಮಾಜಿ ಸಹಾಯಕರ ಮಾಲಿಕತ್ವದಲ್ಲಿವೆ.

ಇದರಲ್ಲಿ ಒಂದು ಪ್ರಕರಣವು ವಿಮಾ ಯೋಜನೆಯ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದೆ. ತನಗೆ ಈ ವಿಷಯದಲ್ಲಿ ಲಂಚ ನೀಡಲು ಯತ್ನಿಸಲಾಗಿತ್ತು ಎಂದು ಮಲಿಕ್‌ ಆರೋಪಿಸಿದ್ದರು. ಆ ಬಳಿಕ ಪ್ರಕರಣ ದಾಖಲಿಸಲಾಗಿತ್ತು. 2021ರ ಅಕ್ಟೋಬರ್‌ನಲ್ಲಿ ಆರ್‌ಎಸ್‌ಎಸ್ ನಾಯಕರೊಬ್ಬರಿಗೆ ಸಂಬಂಧಿಸಿದ ಒಂದು ಫೈಲ್ ಸೇರಿದಂತೆ ಎರಡು ಫೈಲ್‌ಗಳನ್ನು ಕ್ಲಿಯರ್‌ ಮಾಡಲು ತನಗೆ 300 ಕೋಟಿ ರೂಪಾಯಿ ಲಂಚದ ಆಫರ್ ನೀಡಲಾಯಿತು ಎಂದು ಮಲಿಕ್ ಹೇಳಿಕೊಂಡಿದ್ದರು.

ಕಳೆದ ವರ್ಷ ಏಪ್ರಿಲ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರದ ಕಿರು ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ 2,200 ಕೋಟಿ ರೂಪಾಯಿ ಮೌಲ್ಯದ ಗುಂಪು ವೈದ್ಯಕೀಯ ವಿಮಾ ಯೋಜನೆಗೆ ಗುತ್ತಿಗೆ ನೀಡುವಲ್ಲಿ ನಡೆಯಲಾಗಿದೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಮಲಿಕ್‌ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಐ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ.‌

ಫೆಬ್ರವರಿ 2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಕೇಂದ್ರ ಸರ್ಕಾರ ತಪ್ಪಿಸಬಹುದಿತ್ತು ಎಂದು ಮಲಿಕ್ ಆಪಾದಿಸಿದ ಬಳಿಕ ಅವರು ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: Satya Pal Malik: ಪುಲ್ವಾಮ ದಾಳಿಗೆ ಮೋದಿ ನಿರ್ಲಕ್ಷ್ಯ ಕಾರಣ; ಸತ್ಯಪಾಲ್‌ ಮಲಿಕ್‌ ಗಂಭೀರ ಆರೋಪ

Exit mobile version