ನವ ದೆಹಲಿ: ದೆಹಲಿ ಸರ್ಕಾರದ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ನಿವಾಸಕ್ಕೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಮುಂಜಾನೆ ದಾಳಿ ನಡೆಸಿದೆ. ದೆಹಲಿ ಸರ್ಕಾರದ ನೂತನ ಅಬಕಾರಿ ನೀತಿ ವಿವಾದಕ್ಕೆ ಸಂಬಂಧಿಸಿದಂತೆ ಈ ರೇಡ್ ನಡೆದಿದೆ ಎನ್ನಲಾಗಿದೆ. ರಾಜಧಾನಿ ಪ್ರದೇಶದ 20 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದೆ.
ಅಬಕಾರಿ ನೀತಿ ವಿವಾದಕ್ಕೆ ಸಂಬಂಧಿಸಿದ ಆರೋಪಗಳನ್ನು ಸಿಸೋಡಿಯಾ ನಿರಾಕರಿಸಿದ್ದು, ಸಿಬಿಐ ತನಿಖೆಗೆ ಎಲ್ಲ ನೆರವೂ ನೀಡುವುದಾಗಿ ತಿಳಿಸಿದ್ದಾರೆ. ದೇಶದಲ್ಲಿ ಉತ್ತಮ ಕೆಲಸ ಮಾಡುತ್ತಿರುವವರ ಮೇಲೆ ನಡೆಸಲಾಗುತ್ತಿರುವ ಇಂಥ ದಾಳಿಗಳು ದುರದೃಷ್ಟಕರ ಎಂದಿದ್ದಾರೆ.
ನಾನು ಸಿಬಿಐ ದಾಳಿಯನ್ನು ಸ್ವಾಗತಿಸುತ್ತೇನೆ. ದೆಹಲಿ ಸರ್ಕಾರದ ಆರೋಗ್ಯ ಮತ್ತು ಶಿಕ್ಷಣ ನೀತಿಗಳು ಜಾಗತಿಕವಾಗಿ ಪ್ರಶಂಸೆಗೆ ಒಳಗಾಗಿವೆ. ಹೀಗಾಗಿ ಈ ವಲಯದ ಸಾಧಕರ ಮೇಲೆ ದಾಳಿ ನಡೆಸಲಾಗುತ್ತಿದೆ. ಈ ಹಿಂದೆಯೂ ದೆಹಲಿ ಸರ್ಕಾರದ ಹಲವು ಮುಖ್ಯಸ್ಥರ ಮೇಲೆ ದಾಳಿಗಳು ನಡೆದಿವೆ. ಆದರೆ ಅದರಿಂದ ಏನೂ ಸಾಬೀತಾಗಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನೂ ಓದಿ: ಸಿಬಿಐ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ದೆಹಲಿ ಸರ್ಕಾರದ ಯೂ ಟರ್ನ್; ನೂತನ ಅಬಕಾರಿ ನೀತಿ ವಾಪಸ್
ಸೆಪ್ಟೆಂಬರ್ 1ರಿಂದ ಹಳೆಯ ಲಿಕ್ಕರ್ ಪಾಲಿಸಿಯನ್ನು ದೆಹಲಿ ಸರ್ಕಾರ ಮರಳಿ ತರುತ್ತಿದೆ. ಅದು ಜಾರಿಗೆ ತಂದಿದ್ದ ನೂತನ ಲಿಕ್ಕರ್ ನೀತಿಯ ಕುರಿತು ಭಾರಿ ವಿವಾದವೆದ್ದಿತ್ತು. ನೂತನ ನೀತಿ ಪ್ರಕಾರ, ಚಿಲ್ಲರೆ ಮದ್ಯ ಮಾರಾಟವನ್ನು ಖಾಸಗಿಯವರಿಗೆ ನೀಡಲಾಗಿತ್ತು. ಅದಕ್ಕೂ ಮುನ್ನ, ರಾಜಧಾನಿ ಪ್ರದೇಶದಲ್ಲಿ ಸರ್ಕಾರವೇ ಮದ್ಯ ಮಾರಾಟದ ಸಂಪೂರ್ಣ ಸ್ವಾಮ್ಯವನ್ನು ಹೊಂದಿತ್ತು. ನೂತನ ನೀತಿ ಪ್ರಕಾರ ಖಾಸಗಿಯವರು ವಹಿಸಿಕೊಂಡಿರುವ ಮದ್ಯ ಮಾರಾಟದ ಮಾಲಿಕತ್ವವು ಆಗಸ್ಟ್ 31ರಂದು ಕೊನೆಗೊಳ್ಳಲಿದೆ. ಇದರಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರವನ್ನು ಆಪ್ ನಡೆಸಿದೆ ಎಂದು ಬಿಜೆಪಿ ಆರೋಪಿಸಿತ್ತು.
ಇದನ್ನೂ ಓದಿ: ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟನೆ, ದಿಲ್ಲಿ ಪೊಲೀಸರಿಂದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿಚಾರಣೆ