ನವದೆಹಲಿ: 100 ಕೋಟಿ ರೂ. ಕ್ರಿಪ್ಟೋ ಹಗರಣ (Crypto Scam) ಸೇರಿದಂತೆ ಸೈಬರ್ ಹಣಕಾಸು ವಂಚನೆಯ (Cyber Fraud) ಐದು ಪ್ರತ್ಯೇಕ ಪ್ರಕರಣಗಳನ್ನು ದಾಖಲಾದ ಬೆನ್ನಲ್ಲೇ, ಕೇಂದ್ರ ತನಿಖಾ ದಳ(CBI) ಆಪರೇಷನ್ ಚಕ್ರ-2 (Operation Chakra-2) ಕಾರ್ಯಾಚರಣೆಯನ್ನು ಕೈಗೊಂಡಿದೆ. ಗುರುವಾರ ದೇಶದ ವಿವಿಧ ಕಡೆಯ 76 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರಿಪ್ಟೋಕರೆನ್ಸಿ ವಂಚನೆಯ ಮೂಲಕ ಭಾರತೀಯ ನಾಗರಿಕರ ಸುಮಾರು 100 ಕೋಟಿ ರೂ. ವಂಚಿಸಿರುವ ದಂಧೆಗೆ ಸಂಬಂಧಿಸಿದಂತೆ ಸಿಬಿಐ ಗಂಭೀರವಾಗಿ ತನಿಖೆಗೆ ಮುಂದಾಗಿದೆ.
ನಕಲಿ ಕ್ರಿಪ್ಟೋ ಮೈನಿಂಗ್ ಕಾರ್ಯಾಚರಣೆಯ ನೆಪದಲ್ಲಿ ಅನುಮಾನಾಸ್ಪದ ಈ ಸ್ಕೀಮ್‌ನ ಭಾರತೀಯರು ಹಣವನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಸುಮಾರು 100 ಕೋಟಿ ರೂ.ಗೂ ಅಧಿಕವನ್ನು ಭಾರತೀಯರಿಗೆ ನಷ್ಟವಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. ಫೈನಾನ್ಷಿಯಲ್ ಗುಪ್ತಚರ ಘಟಕ(ಎಫ್‌ಐಯು) ನೀಡಿದು ಮಹತ್ವದ ಮಾಹಿತಿಯ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಈಗ ತನಿಖೆ ನಡೆಸುತ್ತಿರುವ ಪ್ರಕರಣಗಳ ಪೈಕಿ ಅಮೆಜಾನ್ ಮತ್ತು ಮೈಕ್ರೋಸಾಫ್ಟ್ ನೀಡಿದ ಎರಡು ದೂರುಗಳೂ ಸೇರಿಕೊಂಡಿವೆ. ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಅಮೆಜಾನ್ ಮತ್ತು ಮೈಕ್ರೋಸಾಫ್ಟ್ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ಎರಡೂ ಕಂಪನಿಗಳು ದೂರು ನೀಡಿದ್ದವು. ಆಪರೇಷನ್ ಚಕ್ರ-2 ಕಾರ್ಯಾಚರಣೆ ವೇಳೆ 9 ಕಾಲ್ ಸೆಂಟರ್‌ಗಳನ್ನು ತಪಾಸಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಅಧಿಕಾರಿಗಳು ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕರ್ನಾಟಕ, ಹಿಮಾಚಲ ಪ್ರದೇಶ, ಹರ್ಯಾಣ, ಕೇರಳ, ತಮಿಳು ನಾಡು, ಪಂಜಾಬ್, ದಿಲ್ಲಿ ಮತ್ತು ಪಶ್ಚಿಮ ಬಂಗಾಳದ ವಿವಿಧಡೆ ದಾಳಿ ನಡೆಸಿ, ಶೋಧವನ್ನು ಕೈಗೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Operation Meghchakra | ಮಕ್ಕಳ ಅಶ್ಲೀಲ ವಿಡಿಯೊ ಹಂಚಿಕೆ ಜಾಲ ಭೇದಿಸಿದ ಸಿಬಿಐ, 20 ರಾಜ್ಯದಲ್ಲಿ ದಾಳಿ
ಆಪರೇಷನ್ ಚಕ್ರ-2 ಕಾರ್ಯಾಚರಣೆಯ ವೇಳೆ, 32 ಮೊಬೈಲ್ ಫೋನ್‌ಗಳು, 48 ಲ್ಯಾಪ್‌ಟಾಪ್‌ಗಳು / ಹಾರ್ಡ್ ಡಿಸ್ಕ್‌ಗಳು, ಎರಡು ಸರ್ವರ್‌ಗಳ ಚಿತ್ರಗಳು, 33 ಸಿಮ್ ಕಾರ್ಡ್‌ಗಳು ಮತ್ತು ಪೆನ್ ಡ್ರೈವ್‌ಗಳನ್ನು ಜಪ್ತಿ ಮಾಡಲಾಗಿದೆ ಮತ್ತು ಹಲವಾರು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. 15 ಇಮೇಲ್ ಖಾತೆಗಳ ಡಂಪ್ ಕೂಡ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಆರೋಪಿಗಳು ಹೆಣೆದ ವಂಚನೆಯ ಜಾಲ ಬಯಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ವರ್ಷದ ಹಿಂದೆ ಸಿಬಿಐ ಚಕ್ರ-1 ಆಪರೇಷನ್ ಕೈಗೊಂಡಿತ್ತು. ಇಂಟರ್‌ಪೋಲ್, ಎಫ್‌ಬಿಐ ಮತ್ತು ಬೇರೆ ದೇಶಗಳ ಪೊಲೀಸ್ ಪಡೆಗಳ ಸಮನ್ವಯದ ಮೂಲಕ ವಿವಿಧ ರಾಜ್ಯಗಳಲ್ಲಿ ಪೊಲೀಸ್ ಪಡೆಗಳೊಂದಿಗೆ 115 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.