ನವ ದೆಹಲಿ: ತನ್ನ ಲಿವ್ ಇನ್ ಪಾರ್ಟ್ನರ್ ಶ್ರದ್ಧಾಳನ್ನು ಅತ್ಯಂತ ವಿಕೃತವಾಗಿ ಹತ್ಯೆ ಮಾಡಿರುವ ಅಫ್ತಾಬ್ ಅಮೀನ್ ಪೂನಾವಾಲಾ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಆದರೆ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಅವನಿಗೆ ಮಂಪರು ಪರೀಕ್ಷೆ ನಡೆಸಲು ದೆಹಲಿ ಹೈಕೋರ್ಟ್ ಅನುಮತಿಯನ್ನೂ ನೀಡಿದೆ. ಕೊಲೆ ನಡೆದು ಆರು ತಿಂಗಳುಗಳೇ ಕಳೆದು ಹೋಗಿರುವುದರಿಂದ ಸಾಕ್ಷಿಗಳನ್ನು ಕಲೆಹಾಕುವುದೂ ತುಸು ವಿಳಂಬವೇ ಆಗುತ್ತಿದೆ. ಇವೆಲ್ಲವೂ ತನಿಖೆಗೆ ತಡೆಯೊಡ್ಡುತ್ತಿರುವ ಸಂದರ್ಭದಲ್ಲಿ, ಒಂದು ಮಹತ್ವದ ಪುರಾವೆ ಪೊಲೀಸರಿಗೆ ಸಿಕ್ಕಿದೆ. ಮೆಹ್ರೌಲಿ ಅರಣ್ಯ ಪ್ರದೇಶದ ಬಳಿ ಇದ್ದ ಒಂದು ಸಿಸಿಟಿವಿ ಫೂಟೇಜ್ ಸಿಕ್ಕಿದ್ದು, ಅದು ಅಫ್ತಾಬ್ಗೆ ಸಂಬಂಧಪಟ್ಟಿದ್ದು ಎನ್ನಲಾಗಿದೆ. ಈ ಸಿಸಿಟಿವಿ ಫೂಟೇಜ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ನೀಡಿಲ್ಲ.
ಆರು ತಿಂಗಳ ಹಿಂದೆ ಅಫ್ತಾಬ್ ಅತ್ಯಂತ ಕ್ರೂರವಾಗಿ ಶ್ರದ್ಧಾ ವಾಳ್ಕರ್ಳನ್ನು ಹತ್ಯೆಗೈದಿದ್ದ. ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ಫ್ರಿಜ್ನಲ್ಲಿಟ್ಟುಕೊಂಡಿದ್ದ. ಪ್ರತಿದಿನ ಒಂದೊಂದೇ ತುಂಡುಗಳನ್ನು ತೆಗೆದುಕೊಂಡು ಹೋಗಿ ದೆಹಲಿಯ ವಿವಿಧ ಭಾಗಗಳಲ್ಲಿ ಎಸೆದು ಬರುತ್ತಿದ್ದ. ಶ್ರದ್ಧಾ ಕಾಣೆಯಾಗಿದ್ದಾಳೆಂದು ಆಕೆಯ ಪಾಲಕರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದಾಗ ಆಕೆ ಹತ್ಯೆಯಾಗಿದ್ದು ಗೊತ್ತಾಗಿದೆ. ಆರೋಪಿ ಅಫ್ತಾಬ್ ಬಂಧನವಾಗಿದೆ. ಆದರೆ ಇಡೀ ಘಟನೆಯ ಕೆಲ ಕೊಂಡಿಗಳು ತಪ್ಪಿ ಹೋಗಿದ್ದು, ಪೊಲೀಸರು ಪುರಾವೆ ಹುಡುಕುತ್ತಿದ್ದಾರೆ. ಇದುವರೆಗೂ ಶ್ರದ್ಧಾಳನ್ನು ಹತ್ಯೆ ಮಾಡಲು ಅಫ್ತಾಬ್ ಬಳಸಿದ್ದ ಆಯುಧ, ಆಕೆಯ ಕತ್ತರಿಸಿದ ತಲೆ, ಅವಳ ಮೊಬೈಲ್ ಸಿಕ್ಕಿಲ್ಲ. ಇವು ಮೂರು ಅತ್ಯಂತ ಪ್ರಮುಖವಾದ ಸಾಕ್ಷಿಗಳಾಗಿವೆ.
ಅಫ್ತಾಬ್ ಪೊಲೀಸರ ಯಾವ ಪ್ರಶ್ನೆಗೂ ಸರಿಯಾದ ಉತ್ತರ ನೀಡುತ್ತಿಲ್ಲ. ಮಂಪರು ಪರೀಕ್ಷೆಗೆ ಒಪ್ಪುತ್ತಿಲ್ಲ. ಅಫ್ತಾಬ್ನ ಹಲವು ಫೋಟೋಗಳು ಪೊಲೀಸರಿಗೆ ಸಿಕ್ಕಿದ್ದು, ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಇನ್ನು ಆತ ಅರಣ್ಯ ಪ್ರದೇಶದಲ್ಲಿ ಶ್ರದ್ಧಾ ದೇಹದ ತುಂಡುಗಳನ್ನು ಎಸೆದಿದ್ದಾನೆ. ಆದರೆ ಆ ಅರಣ್ಯ ಪ್ರದೇಶಗಳ ಮಾರ್ಗಗಳನ್ನು ಮ್ಯಾಪ್ ಮಾಡುವುದೂ ಪೊಲೀಸರಿಗೆ ಕಷ್ಟಕರವಾದ ಟಾಸ್ಕ್ ಆಗಿದೆ. ಇನ್ನು ಅಫ್ತಾಬ್ ಸಂಚರಿಸಿದ್ದಾನೆ ಎನ್ನಲಾದ ಮಾರ್ಗ, ಹೋಗಿದ್ದ ಪ್ರದೇಶಗಳ ಸಿಸಿಟಿವಿ ಕ್ಯಾಮರಾ ಫೂಟೇಜ್ಗಳನ್ನು ಪರಿಶೀಲನೆ ಮಾಡೋಣವೆಂದರೆ ಎಷ್ಟೋ ಕ್ಯಾಮರಾಗಳಲ್ಲಿ ಆರುತಿಂಗಳಷ್ಟು ಹಳೇ ಫೂಟೇಜ್ಗಳೇ ಇಲ್ಲ ಎಂದೂ ಹೇಳಲಾಗಿದೆ. ಇದೆಲ್ಲದರ ಮಧ್ಯೆ ಮೆಹ್ರೌಲಿ ಅರಣ್ಯ ಪ್ರದೇಶ ಬಳಿ ಒಂದು ಸಿಸಿಟಿವಿ ಕ್ಯಾಮರಾದಲ್ಲಿ ಅಫ್ತಾಬ್ಗೆ ಸಂಬಂಧಪಟ್ಟ ಮಹತ್ವದ ಫೂಟೇಜ್ಗಳು ಸಿಕ್ಕಿವೆ.
ಇದನ್ನೂ ಓದಿ:Delhi Crime | ವಿಕೃತ ಹಂತಕ ಅಫ್ತಾಬ್ ನಾರ್ಕೊ ಟೆಸ್ಟ್‌ಗೆ ಕೋರ್ಟ್ ಅಸ್ತು, ಏನಿದು ಪರೀಕ್ಷೆ?