ನವ ದೆಹಲಿ: ಗ್ರಾಹಕರನ್ನು ದಾರಿತಪ್ಪಿಸುವ ಜಾಹೀರಾತುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಶುಕ್ರವಾರ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ( CCPA) ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದರ ಪ್ರಕಾರ, ಸೆಲೆಬ್ರಿಟಿಗಳು ತಾವು ಜಾಹೀರಾತುಗಳಲ್ಲಿ ಅನುಮೋದಿಸುತ್ತಿರುವ ಉತ್ಪನ್ನದಲ್ಲಿ ತಮಗೆ ನಿಜಕ್ಕೂ ಆಸಕ್ತಿ ಇದೆಯೇ ಎಂದು ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಮಕ್ಕಳು ಅಥವಾ ಮಕ್ಕಳ ಉತ್ಪನ್ನಗಳನ್ನು ಒಳಗೊಂಡಿರುವ ಜಾಹೀರಾತುಗಳನ್ನು ನಿಯಂತ್ರಿಸುವ ನಿಯಮಗಳನ್ನು ಸಹ ಇದರಲ್ಲಿ ಸೂಚಿಸಲಾಗಿದೆ.
ತಪ್ಪುದಾರಿಗೆಳೆಯುವ ಜಾಹೀರಾತುಗಳು ಮತ್ತು ಜಾಹೀರಾತುಗಳಿಗೆ ಅನುಮೋದನೆಗಳನ್ನು ತಡೆಗಟ್ಟುವ ಈ ಹೊಸ ನಿಯಮಗಳು, 2022- ತಕ್ಷಣದಿಂದಲೇ ಜಾರಿಗೆ ಬಂದಿದ್ದು – ಬೆಟ್ ಜಾಹೀರಾತುಗಳು ಅಥವಾ ಫ್ರೀ-ಕ್ಲೈಮ್ ಜಾಹೀರಾತುಗಳನ್ನು ನೀಡುವಾಗ ಪೂರೈಸಬೇಕಾದ ಷರತ್ತುಗಳನ್ನು ಮಾರ್ಗಸೂಚಿಗಳಲ್ಲಿ ಸೂಚಿಸಲಾಗಿದೆ. ಬೆಟ್ ಜಾಹೀರಾತು ಎಂದರೆ ಗ್ರಾಹಕರನ್ನು ಆಕರ್ಷಿಸಲು ವಸ್ತುಗಳು, ಉತ್ಪನ್ನಗಳು ಅಥವಾ ಸೇವೆಗಳನ್ನು ತುಲನಾತ್ಮಕವಾಗಿ ಕಡಿಮೆ ಬೆಲೆಗೆ ಮಾರಾಟಕ್ಕೆ ನೀಡುವ ಒಂದು ಜಾಹೀರಾತಾಗಿದೆ.
“ಅನೇಕ ಬಾರಿ ಉಚಿತ ಕೊಡುಗೆಗಳನ್ನು ನೀಡುವಾಗ, ಕಂಪನಿಗಳು ಅದನ್ನು ಕೆಲವೇ ವಸ್ತುಗಳಿಗೆ ಸೀಮಿತಗೊಳಿಸುತ್ತವೆ ಅಥವಾ ಕೊಡುಗೆಯನ್ನು ಪಡೆಯಲು ಷರತ್ತುಗಳನ್ನು ವಿಧಿಸುತ್ತವೆ ಎಂದು ಕಂಡುಬಂದಿದ್ದು. ಇದನ್ನು ಪ್ರೊತ್ಸಾಹಿಸಬಾರದು” ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವಾಗ ಹೇಳಿದರು.
ಮಕ್ಕಳು ಅಥವಾ ಮಗುವಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಒಳಗೊಂಡ ಜಾಹೀರಾತುಗಳು ಮಕ್ಕಳಲ್ಲಿ ನಕಾರಾತ್ಮಕವಾದ ಚಿತ್ರಣವನ್ನು ಬೆಳೆಸುವ ಅಥವಾ ಮಗು ಸೇವಿಸುತ್ತಿರುವ ಸಾಂಪ್ರದಾಯಿಕ ಆಹಾರಕ್ಕಿಂತ ಉತ್ಪನ್ನವು ಉತ್ತಮವಾಗಿದೆ ಎಂಬ ಯಾವುದೇ ಭಾವನೆಯನ್ನು ನೀಡುವಂತಿರಬಾರದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ
ಈ ಮಾರ್ಗಸೂಚಿಗಳು ಮುದ್ರಣ, ದೂರದರ್ಶನ ಮತ್ತು ಆನ್ ಲೈನ್‌ನಂಥ ಎಲ್ಲಾ ಮಾಧ್ಯಮ ಪ್ಲಾಟ್ ಫಾರ್ಮ್‌ಗಳಲ್ಲಿ ಪ್ರಕಟಿಸಲಾದ ಜಾಹೀರಾತುಗಳಿಗೆ ಅನ್ವಯವಾಗುತ್ತವೆ. ಸರ್ಕಾರಿ ಮತ್ತು ಖಾಸಗಿ ಜಾಹೀರಾತುಗಳೆರಡೂ ಹೊಸ ನಿಯಮಗಳ ವ್ಯಾಪ್ತಿಗೆ ಒಳಪಡುತ್ತವೆ. “ಮಾರ್ಗಸೂಚಿಗಳು ಮಾರಾಟಗಾರನನ್ನು ವ್ಯಾಖ್ಯಾನಿಸುತ್ತವೆ ಮತ್ತು ಯಾರೇ ಆಗಿರಲಿ – ಸರ್ಕಾರಿ ಸಂಸ್ಥೆ ಅಥವಾ ಖಾಸಗಿ – ಈ ನಿಬಂಧನೆಗಳ ಅಡಿಯಲ್ಲಿ ಒಳಪಡುತ್ತಾರೆ.
ಯಾವುದೇ ತಯಾರಕರು, ಸೇವಾ ಪೂರೈಕೆದಾರರು, ಜಾಹೀರಾತುದಾರರು, ಅಥವಾ ಜಾಹೀರಾತು ಏಜೆನ್ಸಿಗಳು ಅಧ್ಯಯನದ ಆಧಾರದ ಮೇಲೆ ಕ್ಲೇಮ್ ಮಾಡಿದರೆ, ಅದು ಅಂತಹ ಸ್ವತಂತ್ರ ಸಂಶೋಧನೆಯ ಮೂಲ ಮತ್ತು ದಿನಾಂಕವನ್ನು ಸ್ಪಷ್ಟವಾಗಿ ಸೂಚಿಸಬೇಕು, ಇದರಿಂದ ಗ್ರಾಹಕರು ದಾರಿ ತಪ್ಪುವುದಿಲ್ಲ ಎಂದು ಮಾರ್ಗಸೂಚಿಗಳು ಹೇಳುತ್ತವೆ.
ಸೆಲೆಬ್ರಿಟಿ ಅನುಮೋದನೆಗಳ ಮೇಲೆ, ಒಂದು ಉತ್ಪನ್ನವನ್ನು ಅನುಮೋದಿಸುವ ಎಲ್ಲಾ ಸೆಲೆಬ್ರಿಟಿಗಳು ಅದನ್ನು ಅನುಮೋದಿಸಲು ಒಪ್ಪುವ ಮೊದಲು ಅದರ ಬಗ್ಗೆ ಸೂಕ್ತ ತಿಳಿವಳಿಕೆ, ಅಧ್ಯಯನ, ಮಾಡಿ ಅದನ್ನು ನಿರ್ವಹಿಸಬೇಕು ಎಂದು ಮಾರ್ಗಸೂಚಿಗಳು ಹೇಳುತ್ತವೆ.
“ಹಕ್ಕು ನಿರಾಕರಣೆಗಳು ಸಹ ಮುಖ್ಯ ಜಾಹೀರಾತಿನಂತೆಯೇ ಅದೇ ಭಾಷೆಯಲ್ಲಿರಬೇಕು ಮತ್ತು ಸ್ಪಷ್ಟವಾಗಿ ಮತ್ತು ಅರ್ಥಮಾಡಿಕೊಳ್ಳಬಹುದಾದಂತಿರಬೇಕು. ಉದಾಹರಣೆಗೆ, ಮ್ಯೂಚುಯಲ್ ಫಂಡ್‌ಗಳ ವಿಷಯದಲ್ಲಿ, ಹಕ್ಕು ನಿರಾಕರಣೆಗಳನ್ನು ಎಷ್ಟು ವೇಗವಾಗಿ ಹೇಳಲಾಗುತ್ತದೆ ಎಂದರೆ ಯಾವುದೇ ಗ್ರಾಹಕರು ಅವುಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ” ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ (ಸಿಸಿಪಿಎ) ಮುಖ್ಯ ಆಯುಕ್ತ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ:TaTa Motors ವಾಹನಗಳ ಮಾರಾಟ ಮೇನಲ್ಲಿ 3 ಪಟ್ಟು ಹೆಚ್ಚಳ, 76,210 ಕಾರುಗಳ ಸೇಲ್ಸ್