ಹೊಸ ದಿಲ್ಲಿ : ಮರಣದಂಡನೆ ಶಿಕ್ಷೆಯಲ್ಲಿ ಕುತ್ತಿಗೆಗೆ ನೇಣು ಹಾಕುವುದಕ್ಕಿಂತ (execution by hanging) ಕಡಿಮೆ ನೋವಿನ ಮತ್ತು ಹೆಚ್ಚು ಮಾನವೀಯ ವಿಧಾನವನ್ನು ಪರಿಗಣಿಸಲು ಸಮಿತಿಯನ್ನು ರಚಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಹಾಜರಾದ ಅಟಾರ್ನಿ ಜನರಲ್ (ಎಜಿ) ಆರ್. ವೆಂಕಟರಮಣಿ ಅವರು, ಕಡಿಮೆ ನೋವಿನ ಮರಣದಂಡನೆ ವಿಧಾನವನ್ನು ಬಳಸುವ ಕುರಿತು ಪರಿಶೀಲಿಸಲು ತಜ್ಞರ ಸಮಿತಿಯನ್ನು ನೇಮಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು. “ಸಮಸ್ಯೆಯನ್ನು ಪರಿಶೀಲಿಸಲು ಸಮಿತಿ ನೇಮಿಸುವಂತೆ ಸಲಹೆ ನೀಡಲಾಗಿದೆ. ಯಾವ ತಜ್ಞರನ್ನು ಈ ಕುರಿತು ನೇಮಿಸಬಹುದು ಎಂದು ಚಿಂತಿಸಲಾಗುತ್ತಿದೆ” ಎಂದು ವೆಂಕಟರಮಣಿ ಅವರು ನ್ಯಾಯಮೂರ್ತಿ ಜೆ.ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು.
ಕಡಿಮೆ ನೋವಿನಿಂದ ಕೂಡಿದ, ಹೆಚ್ಚು ಮಾನವ ಘನತೆಯಿಂದ ಕೂಡಿದ, ವೈಜ್ಞಾನಿಕವಾದ ಮಾದರಿಯನ್ನು ಅನುಸರಿಸಲು ಸಾಧ್ಯವಾದರೆ, ಕುತ್ತಿಗೆಗೆ ನೇಣು ಹಾಕಿ ಮರಣದಂಡನೆ ವಿಧಿಸುವುದನ್ನು ರದ್ದುಪಡಿಸಬಹುದಾಗಿದೆ ಎಂದು ಮಾರ್ಚ್ 21ರಂದು ಸರ್ವೋನ್ನತ ನ್ಯಾಯಾಲಯ ಹೇಳಿತ್ತು. ಈ ವಿಷಯದ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಲು ಮತ್ತು ಕಳೆದ ನಾಲ್ಕು ದಶಕಗಳಲ್ಲಿ ಜಾರಿಗೊಳಿಸಲಾದ ಮರಣದಂಡನೆಗಳ ಬಗ್ಗೆ ಮಾಹಿತಿಯನ್ನು ನೀಡಲು ಕೇಂದ್ರ ಸರ್ಕಾರವನ್ನು ಪೀಠ ಕೋರಿತ್ತು.
2017ರಲ್ಲಿ ವಕೀಲ ರಿಷಿ ಮಲ್ಹೋತ್ರಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಸಿಆರ್‌ಪಿಸಿಯ ಸೆಕ್ಷನ್ 354(5)ರ ಸಾಂವಿಧಾನಿಕ ಸಿಂಧುತ್ವವನ್ನು ಇದು ಪ್ರಶ್ನಿಸಿದೆ. ಅಪರಾಧಿಗೆ ಮರಣದಂಡನೆ ವಿಧಿಸಿದಾಗ, ಅವನು ಸಾಯುವವರೆಗೂ ಕುತ್ತಿಗೆಗೆ ನೇಣು ಬಿಗಿದು ನೇತುಹಾಕಬೇಕು ಎಂದು ಹೇಳುತ್ತದೆ. ಇದು ಅಪರಾಧಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ; ಅಮಾನವೀಯ ಮತ್ತು ಕ್ರೂರ ಕೃತ್ಯವಾಗಿದೆ ಎಂದು ವಕೀಲರು ವಾದಿಸಿದ್ದಾರೆ.
ಮರಣದಂಡನೆಗೆ ಒಳಗಾದ ಕೈದಿಯು ಗೌರವಯುತವಾದ ಸಾವನ್ನು ಹೊಂದಲು ಹಕ್ಕನ್ನು ಹೊಂದಿದ್ದಾನೆ. ಆದ್ದರಿಂದ ಮರಣದಂಡನೆ ಕಡಿಮೆ ನೋವಿನಿಂದ ಕೂಡಿರಬೇಕು. ಕಾನೂನು ಆಯೋಗದ 187ನೇ ವರದಿಯಲ್ಲಿ ಕೂಡ ಪ್ರಸ್ತುತ ಮರಣದಂಡನೆಯ ವಿಧಾನವನ್ನು ತೆಗೆದುಹಾಕುವುದನ್ನು ಪ್ರತಿಪಾದಿಸಲಾಗಿದೆ ಎಂದಿದ್ದಾರೆ.
ಉನ್ನತ ನ್ಯಾಯಾಲಯದ 2018ರ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ, ನೇಣು ಹಾಕುವಿಕೆಯು ಮರಣದಂಡನೆಯ ಅತ್ಯಂತ ಸುರಕ್ಷಿತ ಮತ್ತು ತ್ವರಿತ ವಿಧಾನವಾಗಿದೆ ಎಂದಿದೆ. ಮಾರಣಾಂತಿಕ ವಿಷದ ಚುಚ್ಚುಮದ್ದನ್ನು ಪರ್ಯಾಯವಾಗಿ ಬಳಸುವ ಸಲಹೆಯನ್ನು ಅದು ತಿರಸ್ಕರಿಸಿದೆ. ಇಲ್ಲಿ ತರಬೇತಿ ಪಡೆದ ವೈದ್ಯಕೀಯ ವೃತ್ತಿಪರರ ಕೊರತೆಯಿದೆ ಹಾಗೂ ಬಳಸುವ ರಾಸಾಯನಿಕದ ವೈಫಲ್ಯದ ಸಾಧ್ಯತೆಯೂ ಇದೆ ಎಂದಿದೆ. ಮೇಲಾಗಿ, ಮರಣದಂಡನೆಯನ್ನು ಹೆಚ್ಚು ಅನುಕೂಲಕರವಾಗಿಸುವುದು, ಆ ಶಿಕ್ಷೆಯನ್ನು ನೀಡುವ ಉದ್ದೇಶವನ್ನೇ ಲಘುವಾಗಿಸಬಹುದು ಎಂದೂ ಹೇಳಿದೆ.
ಇದನ್ನೂ ಓದಿ: Unnatural sex and murder | 1 ವರ್ಷದ ಮಗುವಿನ ಮೇಲೆ ಸಲಿಂಗ ದೌರ್ಜನ್ಯ ನಡೆಸಿ ಕೊಂದ ಕಿರಾತಕನಿಗೆ ಮರಣದಂಡನೆ