ನವದೆಹಲಿ:ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಎನ್‌ಡಿಎ ಸರ್ಕಾರ(NDA Government) ಮೂರನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಜೆಟ್(Central Budget 2024) ಅನ್ನು ಮಂಗಳವಾರ ಮಂಡಿಸಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಸತತ ಏಳನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಆ ಮೂಲಕ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಜಂಟೀ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಾ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು, ಈ ಬಾರಿ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಡಲಿದೆ ಎಂದು ಹೇಳಿದ್ದರು. ಹೀಗಾಗಿ ಈ ಬಾರಿ ಆರ್ಥಿಕ ಅಭಿವೃದ್ಧಿಗೆ ಪೂಕರವಾದ ಬಜೆಟ್ ಮಂಡನೆ ಆಗುವ ನಿರೀಕ್ಷೆ ಇದೆ. ಇನ್ನು ಈ ಕೇಂದ್ರ ಬಜೆಟ್ ತಯಾರಿಯ ಹಿಂದೆ ಯಾರೆಲ್ಲ ಕಾರ್ಯ ನಿರ್ವಹಿಸಿದ್ದಾರೆ ಎನ್ನುವ ಬಗ್ಗೆ ವಿವರ ಇಲ್ಲಿದೆ.
ಟಿ.ವಿ.ಸೋಮನಾಥನ್ (T.V.Somnathan)
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ತಂಡದ ಹಿರಿಯ, ಸನುಭವಿ ಸದಸ್ಯ ಟಿ.ವಿ.ಸೋಮನಾಥನ್. ಇವರು 1987ನೇ ಸಾಲಿನ ಐಎಎಸ್ ಅಧಿಕಾರಿ. ತಮಿಳುನಾಡು ಮೂಲದ ಇವರು ಅರ್ಥಶಾಸ್ತ್ರದಲ್ಲಿ ಪಿ.ಎಚ್.ಡಿ ಪಡೆದಿದ್ದಾರೆ. ಪ್ರಸ್ತುತ ಅವರು ಭಾರತದ ಹಣಕಾಸು ಇಲಾಖೆಯ ಕಾರ್ಯದರ್ಶಿ (ವೆಚ್ಚ ಇಲಾಖೆ) ಆಗಿದ್ದಾರೆ. ಇದಕ್ಕೂ ಮೊದಲು ಅವರು ಪ್ರಧಾನ ಮಂತ್ರಿ ಕಚೇರಿಯಲ್ಲಿ ಹೆಚ್ಚುವರಿ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಯಾಗಿದ್ದರು. ಆರಂಭದಲ್ಲಿ ವಾಷಿಂಗ್ಟನ್ ಡಿ.ಸಿ.ಯ ವಿಶ್ವ ಬ್ಯಾಂಕಿನಲ್ಲಿ ನಿರ್ದೇಶಕರಾಗಿ ಡೆಪ್ಯುಟೇಶನ್ ಮೇಲೆ ಕಾರ್ಯ ನಿರ್ವಹಿಸಿದ್ದಾರೆ.
ಅಜಯ್ ಸೇಥ್ (Ajay Seth)
ಡಿಪಾರ್ಟ್‌ಮೆಂಟ್ ಆಫ್ ಎಕನಾಮಿಕ್ ಅಫೈರ್ಸ್ (DEA)ಯ ಕಾರ್ಯದರ್ಶಿಯಾಗಿರುವ ಅಜಯ್ ಸೇಥ್ 1987ರ ಕರ್ನಾಟಕ ಕೇಡರ್ ಬ್ಯಾಚ್‌ನ ಐಎಎಸ್ ಅಧಿಕಾರಿ. 2021ರಲ್ಲಿ ಅವರು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಅಜಯ್ ಸೇಥ್ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ತುಹಿನ್ ಕಾಂತ್ ಪಾಂಡೆ (Tuhin Kant Pandey)
ಪಂಜಾಬ್ ಕೇಡರ್‌ನ 1988ರ ಐಎಎಸ್ ಅಧಿಕಾರಿ ತುಹಿನ್ ಕಾಂತ ಪಾಂಡೆ. ಪ್ರಸ್ತುತ ಇವರು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM)ನ ಕಾರ್ಯದರ್ಶಿಯಾಗಿದ್ದಾರೆ. ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಪ್ರಯತ್ನ ಮತ್ತು ಜೀವ ವಿಮಾ ನಿಗಮ(ಎಲ್ಐಸಿ)ದ ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ)ಯ ಘೋಷಣೆ ಕಾರಣದಿಂದ ಅವರು ಜನಪ್ರಿಯರಾಗಿದ್ದಾರೆ.
ಸಂಜಯ್ ಮಲ್ಹೋತ್ರ (Sanjay Malhotra)
ರಾಜಸ್ಥಾನ ಕೇಡರ್‌ನ 1990ರ ಬ್ಯಾಚ್ ಅಧಿಕಾರಿ ಸಂಜಯ್ ಮಲ್ಹೋತ್ರಾ ಅವರು ಪ್ರಸ್ತುತ ಕಂದಾಯ ಕಾರ್ಯದರ್ಶಿ. ಇದಕ್ಕೂ ಮುನ್ನ ಅವರು ಹಣಕಾಸು ಸೇವೆಗಳ ವಿಭಾಗದ ಮುಖ್ಯಸ್ಥರಾಗಿದ್ದರು. ಅಲ್ಲದೆ ಅವರು ಹಣಕಾಸು ಸಚಿವರ ಬಜೆಟ್ ಭಾಷಣದ 2ನೇ ಭಾಗದ ಕರಡು ರಚನೆಯಲ್ಲಿಯೂ ತೊಡಗಿಸಿಕೊಂಡಿದ್ದರು.
ವಿವೇಕ್ ಜೋಶಿ (Vivek Joshi)
ನಿರ್ಮಲಾ ಸೀತಾರಾಮನ್ ತಂಡದ ಹೊಸ ಸದಸ್ಯ ವಿವೇಕ್ ಜೋಶಿ. ಇವರು ಹರಿಯಾಣ ಕೇಡರ್‌ನ 1989ರ ಬ್ಯಾಚ್‌ನ ಐಎಎಸ್ ಅಧಿಕಾರಿ. 2022ರ ನವೆಂಬರ್‌ನಲ್ಲಿ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿವೇಕ್ ಜೋಶಿ ಅವರು ಜಿನೀವಾ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ವಿ.ಅನಂತ ನಾಗೇಶ್ವರನ್ (V.Anantha Nageswaran)
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಪ್ತ ಸಲಹೆಗಾರರಲ್ಲಿ ವಿ.ಅನಂತ ನಾಗೇಶ್ವರನ್ ಕೂಡ ಒಬ್ಬರು. ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ಇವರು ಬರಹಗಾರ ಹಾಗೂ ಶಿಕ್ಷಕರೂ ಹೌದು. ಭಾರತದ ಆರ್ಥಿಕತೆಯ ಮೇಲೆ ಜಾಗತಿಕ ಅಂಶಗಳ ಪರಿಣಾಮಗಳನ್ನು ಅವರು ಗಮನಿಸುತ್ತಿರುತ್ತಾರೆ. ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅಹ್ಮದಾಬಾದ್ ಐಐಎಂನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
ಇದನ್ನೂ ಓದಿ:Union Budget 2024: ಸ್ಟಾಂಡರ್ಡ್ ಡಿಡಕ್ಷನ್, 80 ಸಿ ಮೊತ್ತ ಹೆಚ್ಚಳ; ಬಜೆಟ್‌ನಲ್ಲಿ ಏನೆಲ್ಲ ತೆರಿಗೆ ರಿಲೀಫ್?