Site icon Vistara News

Gujarat Election | ಗುಜರಾತ್ ವಿಧಾನಸಭೆಗೆ 2 ಹಂತದಲ್ಲಿ ಎಲೆಕ್ಷನ್! ಡಿ.1, 5ಕ್ಕೆ ವೋಟಿಂಗ್, 8ಕ್ಕೆ ಫಲಿತಾಂಶ

Election Commission

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ(Gujarat Election) ವೇಳಾ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲನೆ ಹಂತದ ಮತದಾನ ಡಿಸೆಂಬರ್ 1 ಹಾಗೂ ಎರಡನೇ ಹಂತದ ಮತದಾನ ಡಿ.5 ರಂದು ನಡೆಯಲಿದ್ದರೆ, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ. ನವೆಂಬರ್ 5 ಮತ್ತು 10ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ.

ಮಹಿಳೆಯರಿಗೆ, ವಿಶೇಷಚೇತನರಿಗೆ ವಿಶೇಷ ಪೋಲಿಂಗ್ ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಹೊಸ ಮತದಾರರಿಗೆ ನೆರವು ನೀಡಲು ಪೋಲಿಂಗ್ ಬೂತ್‌ನಲ್ಲಿ ಕಡಿಮೆ ವಯಸ್ಸಿನ ಅಧಿಕಾರಗಳೇ ಇರಲಿದ್ದಾರೆ. ಯುವಕರನ್ನು ಉತ್ತೇಜಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲ ಪೋಲಿಂಗ್ ಬೂತ್‌ಗಳು ಗ್ರೌಂಡ್‌ ಫ್ಲೋರ್‌ನಲ್ಲೇ ಇರಲಿವೆ. ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಸೌಕರ್ಯಗಳನ್ನು ಮಾನಿಟರಿಂಗ್ ಮಾಡಲು ಒಬ್ಬ ವಿಶೇಷ ಅಧಿಕಾರಿಯನ್ನು ನೇಮಿಸಲಾಗುತ್ತಿದೆ. ಗುಜರಾತ್‌ನಲ್ಲಿ ಈ ಬಾರಿ ಒಟ್ಟು 4.9 ಕೋಟಿ ಜನರು ಮತದಾನ ಮಾಡಲಿದ್ದಾರೆ.

ಬೂತ್‌ಗಳಿಗೆ ಬರಲು ಸಾಧ್ಯವಾಗದ 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರ ಮನೆಗೆ ಬೂತ್‌ಗಳನ್ನು ಕೊಂಡೊಯ್ಯಲಾಗುವುದು. ಕೋವಿಡ್ ಸೋಂಕಿತರ ಮನೆಗೂ ಅಧಿಕಾರಗಳೇ ತೆರಳಿ ಮತಗಳನ್ನು ಪಡೆಯಲಿದ್ದಾರೆ. ಎಲ್ಲವೂ ಪಾರದರ್ಶಕ ರೀತಿಯಲ್ಲಿ ಮಾಡಲಾಗುತ್ತಿದೆ. ಆದರೆ, ಈ ಬಗ್ಗೆ ಮೊದಲೇ ಚುನಾವಣಾ ಆಯೋಗಕ್ಕೆ ತಿಳಿಸಬೇಕು.

ಏಕೆ ಪ್ರಕಟಿಸಲಿಲ್ಲ?
ಈ ಹಿಂದಿನ ನಾಲ್ಕೈದು ಚುನಾವಣೆಗಳನ್ನು ಗಮನಿಸಿದರೆ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕವನ್ನು ಏಕಕಾಲಕ್ಕೆ ಚುನಾವಣಾ ಆಯೋಗವು ಪ್ರಕಟಿಸುತ್ತಿತ್ತು. ಆದರೆ, ಈ ಬಾರಿ ಚುನಾವಣಾ ಆಯೋಗವು, ಅಕ್ಟೋಬರ್ 14ರಂದು ಹಿಮಾಚಲಪ್ರದೇಶದ ಚುನಾವಣಾ ವೇಳಾಪಟ್ಟಿಯನ್ನು ಮಾತ್ರವೇ ಪ್ರಕಟಿಸಿತ್ತು. ಆಯೋಗದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜಕೀಯ ಪಕ್ಷಗಳು ಕೂಡ ಆಳುವ ಪಕ್ಷಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿ ಆಯೋಗ ವಿಳಂಬವಾಗಿ ವೇಳಾಪಟ್ಟಿಯನ್ನು ಪ್ರಕಟಿಸುತ್ತಿದೆ ಎಂದು ದೂರಿದ್ದವು. ಆದರೆ, ಆಯೋಗ ಮಾತ್ರ ತಾನು ನಿಯಮಗಳ ಪ್ರಕಾರ ನಡೆದುಕೊಳ್ಳುತ್ತಿರವುದಾಗಿ ತಿಳಿಸಿತು.

ಹಲವು ಯೋಜನೆ
ಅಕ್ಟೋಬರ್ 14ರಿಂದ ಇಲ್ಲಿ ತನಕ ಅಂದರೆ ಸುಮಾರು ಒಂದೂವರೆ ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳಿಗೆ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಗುಜರಾತ್‌ನಲ್ಲಿ ಸಿಎಎ ಜಾರಿ ಘೋಷಣೆ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಮಿತಿ ರಚನೆ ಸೇರಿದಂತೆ ಭಾವನಾತ್ಮಕವಾಗಿ ಮತದಾರರನ್ನು ಸೆಳೆಯಬಲ್ಲ ಕೆಲವು ಘೋಷಣೆಗಳನ್ನು ಮಾಡಲಾಗಿದೆ. ಜತೆಗೆ, ಸಾವಿರಾರು ಕೋಟಿ ಮೊತ್ತದ ಅನೇಕ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಅಲ್ಲದೇ, ಕಳೆದ ಒಂದೂವರೆ ತಿಂಗಳಲ್ಲಿ ನರೇಂದ್ರ ಮೋದಿ ಅವರು ಸಾಕಷ್ಟು ಬಾರಿ ಗುಜರಾತ್ ಪ್ರವಾಸ ಮಾಡಿ, ವೇದಿಕೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಆ ಬಳಿಕವಷ್ಟೇ ಚುನಾವಣಾ ಆಯೋಗವು ದಿನಾಂಕ ಪ್ರಕಟಣೆ ಮಾಡಲು ಹೊರಟಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ | Election Commission | ಹಿಮಾಚಲ ಪ್ರದೇಶದಲ್ಲಿ ನ.12ರಂದು ವಿಧಾನಸಭೆ ಚುನಾವಣೆ, ಒಂದೇ ಹಂತದಲ್ಲಿ ಮತದಾನ

Exit mobile version