ನವದೆಹಲಿ: ಭಾರತ ಸರ್ಕಾರ (Indian Government) ಮಾಡಿರುವ ಒಟ್ಟು ಸಾಲ ಎಷ್ಟಾಗಿದೆ ಗೊತ್ತಾ? ಬರೋಬ್ಬರಿ 155.8 ಲಕ್ಷ ಕೋಟಿ ರೂಪಾಯಿ. ಅಂದರೆ, ನಮ್ಮ ಒಟ್ಟು ಜಿಡಿಪಿಯ ಶೇ.57.3ರಷ್ಟಾಗುತ್ತದೆ ಈ ಮೊತ್ತ! ಅಂದ ಹಾಗೆ, ಈ ಮಾಹಿತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಸೋಮವಾರ ಲೋಕಸಭೆಗೆ ನೀಡಿದ್ದಾರೆ.
155.8 ಲಕ್ಷ ಕೋಟಿ ರೂಪಾಯಿ ಸಾಲದ ಪೈಕಿ ಬಾಹ್ಯ ಸಾಲದ ಮೊತ್ತ 7.03 ಲಕ್ಷ ಕೋಟಿ ರೂ. ಇದೆ. ಇದು ಜಿಡಿಪಿಯ ಶೇ.7.03ರಷ್ಟಾಗುತ್ತದೆ. ಕೇಂದ್ರ ಸರ್ಕಾರ ಈವರೆಗೆ ಮಾಡಿರುವ ಸಾಲ ಎಷ್ಟು, ಬಾಹ್ಯ ಸಾಲದ ಪ್ರಮಾಣ ಎಷ್ಟು, ಡಾಲರ್ ಮೌಲ್ಯ ಏರಿಕೆಯಿಂದಾಗಿ ಸಾಲದ ಮೇಲಾಗಿರುವ ಪರಿಣಾಮ ಹಾಗೂ ಸಾಲ ನಿಯಂತ್ರಣಕ್ಕೆ ಕೈಗೊಳ್ಳಲಾದ ಕ್ರಮಗಳು ಸೇರಿ ಇತ್ಯಾದಿ ಮಾಹಿತಿಯನ್ನು ಕೋರಿ ಸಂಸದ ನಾಮ ನಾಗೇಶ್ವರ್ ರಾವ್ ಅವರು ವಿತ್ತ ಸಚಿವಾಲಯದಿಂದ ಮಾಹಿತಿ ಕೋರಿದ್ದರು. ಈ ಪ್ರಶ್ನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ಉತ್ತರಿಸಿದ್ದಾರೆ.
2023 ಮಾರ್ಚ್ ಹೊತ್ತಿಗೆ ಕೇಂದ್ರ ಸರ್ಕಾರವು ಒಟ್ಟು 155.8 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿದೆ. ವಿದೇಶಿಗಳಿಂದ 7.03 ಲಕ್ಷ ಕೋಟಿ ರೂ. ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಒಟ್ಟು ಸಾಲದ ಪೈಕಿ ಬಾಹ್ಯ ಸಾಲದ ಪ್ರಮಾಣವು ಶೇ.4.5ರಷ್ಟಿದೆ. ಜಿಡಿಪಿಗೆ ಹೋಲಿಸಿದರೆ ಬಾಹ್ಯ ಸಾಲದ ಅನುಪಾತ ಶೇ.3ರಷ್ಟಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. ಬಾಹ್ಯ ಸಾಲಗಳನ್ನು ಸಾಮಾನ್ಯವಾಗಿ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಏಜೆನ್ಸಿಗಳು ಕಡಿಮೆ ಬಡ್ಡಿದರದಲ್ಲಿ ಒದಗಿಸುತ್ತವೆ. ಹಾಗಾಗಿ ಅಪಾಯ ಕಡಿಮೆ, ಸಾಲ ಸುರಕ್ಷಿತ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವನ್ನು ನಿಯಂತ್ರಿಸಲು ಸರ್ಕಾರದೊಂದಿಗೆ ಸಮಾಲೋಚಿಸಿ ವಿದೇಶಿ ವಿನಿಮಯ ಸಂಗ್ರಹದ ಮೂಲವನ್ನು ವಿಸ್ತರಿಸಲು ರಿಸರ್ವ್ ಬ್ಯಾಂಕ್ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಇದೇ ವೇಳೆ ತಿಳಿಸಿದ್ದಾರೆ.
ಮೋದಿ ಸರ್ಕಾರದಿಂದಲೇ 100 ಲಕ್ಷ ಕೋಟಿ ರೂ. ಸಾಲ?
ಪ್ರಧಾನಿ ನರೇಂದ್ರ ಮೋದಿ ಆಡಳಿತದ ಈ ಎಂಟು ವರ್ಷಗಳಲ್ಲಿ ಸಾಲದ ಪ್ರಮಾಣ ಇನ್ನೂ ಹೆಚ್ಚಾಯಿತೇ? ಹೌದು ಇಂಥದೊಂದು ಪ್ರಶ್ನೆ ಕಾಡತೊಡಗಿದೆ. 2013-14ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತ 58 ಲಕ್ಷ ಕೋಟಿ ರೂ. ಇತ್ತು. ಅಂದರೆ, ಇದು ಜಿಡಿಪಿಯ ಶೇ.52ರಷ್ಟು. ಆದರೆ, 2022-23ರ ವಿತ್ತ ವರ್ಷದ ಮುಕ್ತಾಯದ ಹೊತ್ತಿಗೆ ಈ ಸಾಲದ ಪ್ರಮಾಣದ 155.8 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಒಟ್ಟು ಜಿಡಿಪಿಯ ಶೇ.57.3ರಷ್ಟಾಗುತ್ತದೆ. ಅಂದರೆ, ಈ ಎಂಟು ವರ್ಷದ ಅವಧಿಯಲ್ಲಿ ಹೆಚ್ಚು ಕಡಿಮೆ 97 ಲಕ್ಷ ಕೋಟಿ ರೂ. ಸಾಲವನ್ನು ಮಾಡಲಾಗಿದೆ ಎಂಬ ಚರ್ಚೆಗಳು ಶುರುವಾಗಿವೆ.