Site icon Vistara News

Petrol Diesel Price Cut: ದೀಪಾವಳಿಗೆ ಮೋದಿ ಮತ್ತೊಂದು ಗಿಫ್ಟ್;‌ ಪೆಟ್ರೋಲ್‌ ಬೆಲೆ 5 ರೂ. ಇಳಿಕೆ?

Petrol Diesel Price Cut

Central Government may cut petrol, diesel price by Rs 3-5 a litre around Diwali Festival

ನವದೆಹಲಿ: ಲೋಕಸಭೆ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿರುವ, ಬೆಲೆಯೇರಿಕೆಯ ಹೊರೆಯನ್ನು ಇಳಿಸುವ ಮೂಲಕ ಜನರ ವಿಶ್ವಾಸ ಗಳಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಈಗಾಗಲೇ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 200 ರೂ. ಇಳಿಸಿದೆ. ಇದರ ಬೆನ್ನಲ್ಲೇ, ದೀಪಾವಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಉಡುಗೊರೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ 3 ರೂಪಾಯಿಯಂದ 5 ರೂಪಾಯಿವರೆಗೆ ಇಳಿಕೆ (Petrol Diesel Price Cut) ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್‌ಗೆ 85 ಡಾಲರ್‌ ಇದೆ. ಕಚ್ಚಾ ತೈಲದ ಬೆಲೆಯು ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಹಾಗಾಗಿ, ನವೆಂಬರ್-ಡಿಸೆಂಬರ್‌ ಅವಧಿಯಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಇಳಿಕೆ ಮಾಡಲಿದೆ ಎಂದು ಜೆಎಂ ಫೈನಾನ್ಶಿಯಲ್‌ ಇನ್‌ಸ್ಟಿಟ್ಯೂಷನಲ್‌ ಸೆಕ್ಯುರಿಟೀಸ್‌ ವರದಿ ತಿಳಿಸಿದೆ.

ಲೋಕಸಭೆ, ವಿಧಾನಸಭೆ ಚುನಾವಣೆ ರಣತಂತ್ರ

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸಿಲಿಂಡರ್‌ ಸೇರಿ ಹಲವು ಅಗತ್ಯ ವಸ್ತುಗಳ ಬೆಲೆಯೇರಿಕೆಯಾದ ಕಾರಣ ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶವಿದೆ. ಅದರಲ್ಲೂ, ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ಇದೇ ವರ್ಷಾಂತ್ಯದಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹಾಗಾಗಿ ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್‌ ದರವನ್ನು 200 ರೂ. ಇಳಿಸಿದೆ. ಈಗ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನೂ ಇಳಿಸುವ ಮೂಲಕ ಜನರ ಆಕ್ರೋಶ ತಣಿಸುವ ಜತೆಗೆ ವಿಶ್ವಾಸ ಗಳಿಸುವ ತಂತ್ರ ಅನುಸರಿಸುತ್ತಿದೆ.

ಇದನ್ನೂ ಓದಿ: LPG Price: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯೂ ಭಾರಿ ಇಳಿಕೆ, ಬೆಂಗಳೂರಿನಲ್ಲಿ ಎಷ್ಟಿದೆ ನೋಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಜತೆಗೆ ಮುಂದಿನ ದಿನಗಳಲ್ಲಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಅಡಿಯಲ್ಲಿ ದೇಶದ ಕೋಟ್ಯಂತರ ರೈತರಿಗೆ ವಾರ್ಷಿಕವಾಗಿ ನೀಡುವ 6 ಸಾವಿರ ರೂ. ಸಹಾಯಧನದ ಮೊತ್ತವನ್ನು ಹೆಚ್ಚಿಸುವುದು ಕೂಡ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಆಯಾ ರಾಜ್ಯಗಳಲ್ಲಿ ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಸಾಲು ಸಾಲು ಭರವಸೆಗಳನ್ನು ನೀಡುತ್ತಿವೆ. ರಾಜಸ್ಥಾನ, ಮಧ್ಯಪ್ರದೇಶ ಸರ್ಕಾರಗಳು ಕೂಡ ಚುನಾವಣೆ ಹಿನ್ನೆಲೆಯಲ್ಲಿ ಬೆಲೆ ಇಳಿಕೆಯ ತಂತ್ರ ಅನುಸರಿಸುತ್ತಿವೆ.

Exit mobile version