Site icon Vistara News

ಪಾಕ್‌ಗೆ ಮೋದಿ ಎಚ್ಚರಿಕೆ ಬೆನ್ನಲ್ಲೇ ಗಡಿಯಲ್ಲಿ 2 ಸಾವಿರ ಹೆಚ್ಚುವರಿ ಸೈನಿಕರ ನಿಯೋಜಿಸಿದ ಕೇಂದ್ರ; ಏನಿದರ ಮರ್ಮ?

Indian Army

Central Government orders deployment of 2,000 additional Border Security Force personnel to terror-hit Jammu Kashmir: Sources

ನವದೆಹಲಿ: ಭಯೋತ್ಪಾದನೆಯನ್ನು ನಿಗ್ರಹಿಸುವ ಬದಲು, ಉಗ್ರರಿಗೆ ಆಶ್ರಯ ನಡುತ್ತಿರುವ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾರ್ಗಿಲ್‌ ವಿಜಯ ದಿವಸದಂದೇ (Kargil Vijay Diwas 2024) (ಜುಲೈ 26) ಎಚ್ಚರಿಕೆ ನೀಡಿದ್ದಾರೆ. ಇನ್ನು, ಜಮ್ಮು-ಕಾಶ್ಮೀರ ಗಡಿಯಲ್ಲಿ ಇತ್ತೀಚೆಗೆ ಉಗ್ರರ ದಾಳಿ ಜಾಸ್ತಿಯಾಗಿದ್ದು, ಸೈನಿಕರು, ವಲಸಿಗರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಜಮ್ಮು-ಕಾಶ್ಮೀರ (Jammu Kashmir Border) ಗಡಿಯಲ್ಲಿ ಹೆಚ್ಚುವರಿಯಾಗಿ 2 ಸಾವಿರ ಸೈನಿಕರನ್ನು ನಿಯೋಜಿಸಲು ಕೇಂದ್ರ ಸರ್ಕಾರ (Central Government) ಆದೇಶ ನೀಡಿದೆ ಎಂದು ತಿಳಿದುಬಂದಿದೆ.

ಜಮ್ಮು-ಕಾಶ್ಮೀರದ ಗಡಿಯಲ್ಲಿ ಹೆಚ್ಚುವರಿಯಾಗಿ 2 ಸಾವಿರ ಗಡಿ ಭದ್ರತಾ ಪಡೆಯ (BSF) ಸಿಬ್ಬಂದಿಯನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗೆ, ಗಡಿಯಲ್ಲಿ ಉಗ್ರರ ಉಪಟಳ, ಒಳನುಸುಳುವಿಕೆ, ದಾಳಿ, ಶಸ್ತ್ರಾಸ್ತ್ರ ಸಾಗಣೆ ಸೇರಿ ಹಲವು ಕೃತ್ಯಗಳು ಹೆಚ್ಚಾಗಿರುವ ಕಾರಣ ಹೆಚ್ಚಿನ ಭದ್ರತೆಗಾಗಿ ಬಿಎಸ್‌ಎಫ್‌ ಯೋಧರನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಪಾಕ್‌ನಿಂದಲೂ ಹೆಚ್ಚುವರಿ ಸೈನಿಕರ ನಿಯೋಜನೆ

ಮೋದಿ ಎಚ್ಚರಿಕೆ ಬೆನ್ನಲ್ಲೇ ಪಾಕಿಸ್ತಾನವು ಗಡಿಯಲ್ಲಿ ಎರಡು ಹೆಚ್ಚುವರಿ ಬ್ರಿಗೇಡ್‌ಗಳು, 3 ಪಿಒಕೆ ಬ್ರಿಗೇಡ್‌ ಹಾಗೂ 2 ಹೆಚ್ಚುವರಿ ಪಿಒಕೆ ಬ್ರಿಗೇಡ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪಾಕಿಸ್ತಾನ ಸೈನಿಕರು ಭಾರತದೊಳಗೆ ಉಗ್ರರನ್ನು ನುಸುಳಿಸಲು ಮಾರ್ಗದರ್ಶನ, ನೆರವು ನೀಡುತ್ತಿದೆ ಎಂಬ ಚಿತ್ರಗಳು ಲಭ್ಯವಾದ ಬೆನ್ನಲ್ಲೇ ಮೋದಿ ಎಚ್ಚರಿಕೆ ನೀಡಿದ್ದರು. ಇದಾದ ಕೆಲ ಹೊತ್ತಿನಲ್ಲೇ ಪಾಕಿಸ್ತಾನ ಸೈನಿಕರು ಗಡಿಯಲ್ಲಿ ನಿಯೋಜನೆಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೋದಿ ಎಚ್ಚರಿಕೆ ಏನಾಗಿತ್ತು?

ಕಾರ್ಗಿಲ್‌ ವಿಜಯ ದಿವಸ(Kargil Vijay Diwas 2024)ಕ್ಕೆ ಜುಲೈ 26ಕ್ಕೆ 25ವರ್ಷ ಸಂದಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಡ್ರಾಸ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ಭೇಟಿ ಕೊಟ್ಟು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಕಳೆದ ಯುದ್ಧಗಳಲ್ಲಿ ಸೋಲುಂಡಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದುವರೆಗೆ ಪಾಕಿಸ್ತಾನ ತನ್ನ ತಪ್ಪಿನ ಪಾಠ ಕಲಿತಿಲ್ಲ ಎಂದು ಗುಡುಗಿದ್ದರು.

ಭಯೋತ್ಪಾದನೆ ಮೂಲಕ ಭಾರತವನ್ನು ಗೆಲ್ಲುವ ಪಾಕಿಸ್ತಾನದ ಉದ್ದೇಶ ಎಂದಿಗೂ ಯಶಸ್ವಿ ಆಗುವುದಿಲ್ಲ ಎಂದು ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಇನ್ನು ಇದೇ ವೇಳ ಅಗ್ನಿಪಥ್‌ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸೇನೆಯ ಈ ಸುಧಾರಣೆಯಲ್ಲೂ ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಭಾರತದ ವಿರುದ್ಧ ಪಾಕಿಸ್ತಾನವು ಇದುವರೆಗೆ ನಾಲ್ಕು ಯುದ್ಧಗಳಲ್ಲಿ ಹೀನಾಯವಾಗಿ ಸೋಲನುಭವಿಸಿದೆ. ಅದರಲ್ಲೂ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್‌ ಸ್ಟ್ರೈಕ್‌, ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಯಾಗಿ ಬಾಲಾಕೋಟ್‌ ದಾಳಿ ನಡೆಸಿದೆ. ಹಾಗೆಯೇ, ಪಾಕಿಸ್ತಾನವು ಉಗ್ರ ಪೋಷಣೆಯ ರಾಷ್ಟ್ರವಾಗಿದೆ ಎಂಬುದಾಗಿ ಜಾಗತಿಕ ವೇದಿಕೆಯಲ್ಲಿ ಭಾರತವು ಪ್ರತಿಪಾದಿಸಿದೆ.

ಇದನ್ನೂ ಓದಿ: Kargil Vijay Diwas 2024: ಕಾರ್ಗಿಲ್‌ ಯುದ್ಧಭೂಮಿಗೆ ಅಂದೇ ಕಾಲಿಟ್ಟಿದ್ರು ಮೋದಿ- ಹಳೆಯ ಫೊಟೋ ವೈರಲ್‌

Exit mobile version