ನವದೆಹಲಿ: ಕೇಂದ್ರ ಸರ್ಕಾರವು ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹಾಗೂ ಪರ್ಸನಲ್ ಕಂಪ್ಯೂಟರ್‌ಗಳ (Laptop Import) ಆಮದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಿಸಿದೆ. ಅಲ್ಟ್ರಾ ಸ್ಮಾಲ್ ಫ್ಯಾಕ್ಟರ್ ಕಂಪ್ಯೂಟರ್‌ಗಳ ಆಮದಿಗೂ ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ ಗುರುವಾರ (August 3) ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಭಾರತದಲ್ಲಿ ಇನ್ನು ಡೆಲ್, ಏಸರ್, ಸ್ಯಾಮ್‌ಸಂಗ್‌ನಂತಹ ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳು ಲಭ್ಯವಾಗುವುದಿಲ್ಲ. HSN 8741 ಕೆಟಗರಿಯ ಉತ್ಪನ್ನಗಳ ಆಮದನ್ನು ನಿರ್ಬಂಧಿಸಲಾಗಿದೆ.
ಆಮದು ಪರವಾನಗಿ ಹೊಂದಿರುವವರು ಮಾತ್ರ ಗರಿಷ್ಠ 20 ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಸಂಶೋಧನೆ, ಅಭಿವೃದ್ಧಿ, ತಪಾಸಣೆ, ರಿಪೇರಿ, ಮತ್ತೆ ರಫ್ತು ಮಾಡುವುದು ಹಾಗೂ ಉತ್ಪನ್ನಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪರವಾನಗಿ ಇರುವವರಿಗೆ ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇವರು ಆಮದು ಮಾಡಿಕೊಂಡಾಗ ಕಡ್ಡಾಯವಾಗಿ ಆಮದು ಸುಂಕ ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಮೇಕ್ ಇನ್ ಇಂಡಿಯಾಗೆ ಉತ್ತೇಜನ
ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡುವ ಹಾಗೂ ಭಾರತವು ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಯಲ್ಲಿ ಮಹತ್ವದ ಮುನ್ನಡೆ ಸಾಧಿಸಬೇಕು ಎಂಬ ದೃಷ್ಟಿಯಿಂದ ಇವುಗಳ ಆಮದನ್ನು ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ. ಕಳೆದ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹಾಗೂ ಪರ್ಸನಲ್ ಕಂಪ್ಯೂಟರ್‌ಗಳು ಸೇರಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಆಮದು ಪ್ರಮಾಣ 19.7 ಶತಕೋಟಿ ಡಾಲರ್ ಇದೆ. ಶೇ.6.25ರಷ್ಟು ಆಮದು ಪ್ರಮಾಣ ಏರಿಕೆಯಾಗಿದೆ.
ಇದನ್ನೂ ಓದಿ: Apple import policy : ಆ್ಯಪಲ್ ಆಮದು ನೀತಿ ತಿದ್ದುಪಡಿಯಲ್ಲಿ ಏನಿದೆ? ದರ ಇಳಿಕೆಯಾಗಲಿದೆಯೇ?
ಭಾರತವು ಬೇರೆ ದೇಶಗಳ ವಿದ್ಯುತ್ ಉಪಕರಣಗಳ ಮೇಲೆ ಹೆಚ್ಚಿನ ಅವಲಂಬನೆಯಾಗಿರುವುದರಿಂದ ದೇಶೀಯ ಉತ್ಪಾದನೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಹಾಗಾಗಿ, ಇವುಗಳ ಆಮದು ನಿಷೇಧಿಸಲಾಗಿದೆ. ಆದರೆ, ಭಾರತದ ಮಾರುಕಟ್ಟೆಯಲ್ಲಿ ಡೆಲ್, ಏಸರ್, ಲೆನೋವೊ, ಸ್ಯಾಮ್‌ಸಂಗ್, Apple ಸೇರಿ ಹಲವು ವಿದೇಶಿ ಕಂಪನಿಗಳು ಪಾರಮ್ಯ ಸಾಧಿಸಿವೆ. ಈಗ ಏಕಾಏಕಿ ಆಮದು ನಿರ್ಬಂಧಿಸಿದ ಕಾರಣ ಮುಂದಿನ ದಿನಗಳಲ್ಲಿ ಜನರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಕಷ್ಟವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.