Site icon Vistara News

Bharat Atta: ಕೇಂದ್ರದಿಂದ 27 ರೂ.ಗೆ ‘ಭಾರತ್’‌ ಗೋಧಿ ಹಿಟ್ಟು ಮಾರಾಟ; ಹೀಗೆ ಖರೀದಿಸಿ

Bharat Atta

Central Government to sell 'Bharat Atta' at Rs. 27.50 per kg

ನವದೆಹಲಿ: ದೇಶದಲ್ಲಿ ಗೋಧಿ ಹಿಟ್ಟಿನ ಬೆಲೆ ನಿಯಂತ್ರಣ ಹಾಗೂ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರವು (Central Government) ಭಾರತ್‌ ಆಟಾ (Bharat Atta) ಎಂಬ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟು ಮಾರಾಟ ಮಾಡುವ ಯೋಜನೆಗೆ ಚಾಲನೆ ನೀಡಿದೆ. ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ (Piyush Goyal) ಅವರು ‘ಭಾರತ್‌’ ಬ್ರ್ಯಾಂಡ್‌ ಗೋಧಿ ಹಿಟ್ಟು ಮಾರಾಟ ಮಾಡುವ ವಾಹನಗಳಿಗೆ (ಮೊಬೈಲ್‌ ವ್ಯಾನ್‌) ಚಾಲನೆ ನೀಡಿದ್ದಾರೆ. ಈ ಯೋಜನೆ ಅಡಿಯಲ್ಲಿ ಗ್ರಾಹಕರಿಗೆ 27.50 ರೂ.ಗೆ ಒಂದು ಕೆ.ಜಿ ಗೋಧಿ ಹಿಟ್ಟು ಸಿಗಲಿದೆ.

ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ (NAFED), ನ್ಯಾಷನಲ್ ಕೋ-ಆಪರೇಟಿವ್ ಕನ್ಸೂಮರ್ಸ್ ಫೆಡರೇಷನ್ ಆಫ್ ಇಂಡಿಯಾ (NCCF), ಮದರ್ ಡೇರಿ ಸೇರಿ ಹಲವು ಸಹಕಾರಿ ಸಂಸ್ಥೆಗಳಲ್ಲಿ ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟು ಸಿಗಲಿದೆ. ದೇಶಾದ್ಯಂತ ಎರಡು ಸಾವಿರ ಕಡೆಗಳಲ್ಲಿ ಭಾರತ್‌ ಬ್ರ್ಯಾಂಡ್‌ನ ಗೋಧಿ ಹಿಟ್ಟು ಸಿಗಲಿದೆ.

ಕಳೆದ ಫೆಬ್ರವರಿಯಲ್ಲಿ ಪರೀಕ್ಷಾರ್ಥವಾಗಿ ಕೇಂದ್ರ ಸರ್ಕಾರವು ಕೆ.ಜಿಗೆ 29.50 ರೂ.ನಂತೆ 18 ಸಾವಿರ ಟನ್‌ ಗೋಧಿ ಹಿಟ್ಟು ಮಾರಾಟ ಮಾಡಿತ್ತು. ಇದಕ್ಕಾಗಿ ಭಾರತೀಯ ಆಹಾರ ನಿಗಮವು 2.5 ಲಕ್ಷ ಟನ್‌ ಗೋಧಿಯನ್ನು ನೀಡಲಿದೆ. 800 ಮೊಬೈಲ್‌ ವ್ಯಾನ್‌ಗಳ ಮೂಲಕ ದೇಶಾದ್ಯಂತ ಜನರಿಗೆ ಸಬ್ಸಿಡಿ ದರದಲ್ಲಿ ಗೋಧಿ ಹಿಟ್ಟು ನೀಡಲಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಗೋಧಿ ಹಿಟ್ಟಿನ ಬೆಲೆ 36-70 ರೂ. ಇದೆ.

25 ರೂ.ಗೆ ಕೆ.ಜಿ ಈರುಳ್ಳಿ

ಕಳೆದೊಂದು ಕೆಲ ದಿನಗಳಿಂದ ಈರುಳ್ಳಿ ಬೆಲೆ ದುಪ್ಪಟ್ಟಾಗಿದ್ದು, ಕೆಜಿಗೆ 30-35 ರೂ.ನಿಂದ 60-90 ರೂ.ಗೆ ತಲುಪಿದೆ. ಈಗ ಕೇಂದ್ರ ಸರ್ಕಾರವು ಈರುಳ್ಳಿಯನ್ನು ತನ್ನ ಬಫರ್ ಸ್ಟಾಕ್‌ನಿಂದ ಕೆಜಿಗೆ 25 ರೂಪಾಯಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಇದನ್ನು ಮಾಡಲು ಸರ್ಕಾರ 170ಕ್ಕೂ ಹೆಚ್ಚು ನಗರಗಳು ಮತ್ತು 685 ಕೇಂದ್ರಗಳಲ್ಲಿ ಈರುಳ್ಳಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಿದೆ.

ಇದನ್ನೂ ಓದಿ: Onion Price: ಕೇಂದ್ರ ಸರ್ಕಾರದಿಂದಲೇ ಕಿಲೋ 25 ರೂ.ಗೆ ಈರುಳ್ಳಿ ಮಾರಾಟ; ಎಲ್ಲಿ ನೋಡಿ

ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಸರ್ಕಾರವು ತನ್ನ ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ಬಿಡುಗಡೆ ಮಾಡುವುದು ಮತ್ತು ಆಮದು ಹೆಚ್ಚಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ದೇಶಾದ್ಯಂತದ ಪ್ರಮುಖ ಬಳಕೆ ಕೇಂದ್ರಗಳಲ್ಲಿ ಆಗಸ್ಟ್ ಎರಡನೇ ವಾರದಿಂದ ನಿರಂತರವಾಗಿ ವಿಲೇವಾರಿ ಮಾಡಲಾಗಿದೆ ಮತ್ತು NCCF ಮತ್ತು NAFED ನಿರ್ವಹಿಸುವ ಮೊಬೈಲ್ ವ್ಯಾನ್‌ಗಳ ಮೂಲಕ ಚಿಲ್ಲರೆ ಗ್ರಾಹಕರಿಗೆ ಕೆಜಿಗೆ 25 ರೂ.ಗೆ ಸರಬರಾಜು ಮಾಡಲಾಗುತ್ತಿದೆ.

Exit mobile version