ನವದೆಹಲಿ: ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಆಶಾದಾಯಕವಿದ್ದರೂ ವಿತ್ತೀಯ ಕೊರತೆ ಮಾತ್ರ ಜಾಸ್ತಿಯಾಗುತ್ತಿದೆ. ದೇಶದ ವಿತ್ತೀಯ ಕೊರತೆ (Fiscal Deficit) ಕುರಿತು ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (CGA) ಮಾಹಿತಿ ನೀಡಿದ್ದು, 2023-24ನೇ ಹಣಕಾಸು ವರ್ಷದ (Financial Year) ಮೊದಲಾರ್ಧದಲ್ಲಿ ವಿತ್ತೀಯ ಕೊರತೆಯು ಶೇ.39.3ಕ್ಕೆ ಅಂದರೆ 7.02 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಶೇ.37.3ರಷ್ಟಿತ್ತು.
ಕೇಂದ್ರ ಸರ್ಕಾರವು ಬಜೆಟ್ ಮಂಡಿಸುವ ವೇಳೆ ದೇಶದ ಒಟ್ಟು ಜಿಡಿಪಿಯಲ್ಲಿ ವಿತ್ತೀಯ ಕೊರತೆ ಪ್ರಮಾಣವನ್ನು ಶೇ.5.9ಕ್ಕೆ ಇಳಿಸುವ ಗುರಿ ಹೊಂದಿತ್ತು. 2022-23ರ ಹಣಕಾಸು ವರ್ಷದಲ್ಲಿ ಒಟ್ಟು ಜಿಡಿಪಿಯಲ್ಲಿ ವಿತ್ತೀಯ ಕೊರತೆ ಪ್ರಮಾಣವು ಶೇ.6.4ರಷ್ಟಿತ್ತು.
ಕೇಂದ್ರ ಸರ್ಕಾರದ ತೆರಿಗೆ ಆದಾಯವು 11.60 ಲಕ್ಷ ಕೋಟಿ ರೂ. ಇದೆ. ಇದು ವಾರ್ಷಿಕ ಗುರಿಯ ಶೇ.49.8ರಷ್ಟಿದೆ. 2022-23ರ ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ತೆರಿಗೆ ಸಂಗ್ರಹವು ವರ್ಷದ ಗುರಿಯಲ್ಲಿ ಶೇ.52.3ರಷ್ಟಿತ್ತು. 2023-24ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಖರ್ಚು 21.19 ಲಕ್ಷ ಕೋಟಿ ರೂ. ಇದೆ. ಇದು ಕಳೆದ ಹಣಕಾಸು ವರ್ಷದ ಇದೇ ಅವಧಿಗಿಂತ ಹೆಚ್ಚಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Indian Economy: ಜಪಾನ್‌ಅನ್ನೂ ಹಿಂದಿಕ್ಕಲಿದೆ ಭಾರತದ ಆರ್ಥಿಕತೆ; ಮೋದಿ ಕನಸು ಶೀಘ್ರ ನನಸು
ವಿತ್ತೀಯ ಕೊರತೆ ಎಂದರೇನು?
ಕೇಂದ್ರ ಸರ್ಕಾರ ಸೇರಿ ಯಾವುದೇ ಸರ್ಕಾರದ ಆದಾಯ ಹಾಗೂ ವೆಚ್ಚದ ನಡುವಿನ ವ್ಯತ್ಯಾಸವನ್ನು ವಿತ್ತೀಯ ಕೊರತೆ ಎಂದು ಕರೆಯಲಾಗುತ್ತದೆ. ಸರ್ಕಾರದ ಆದಾಯಕ್ಕಿಂತ ವೆಚ್ಚವೇ ಜಾಸ್ತಿಯಾದರೆ, ಅದು ವಿತ್ತೀಯ ಕೊರತೆ ಎನಿಸುತ್ತದೆ. ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿ, ವಿತ್ತೀಯ ಕೊರತೆಯ ಮೊತ್ತ ಹೆಚ್ಚುತ್ತ ಹೋದಂತೆಲ್ಲ ಅದು ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಪ್ರತಿ ಬಾರಿಯೂ ಮುಂಗಡಪತ್ರ ಮಂಡಿಸುವಾಗ ವಿತ್ತೀಯ ಕೊರತೆ ಸರಿದೂಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.