ನವದೆಹಲಿ: ಸೇವಾ ಶುಲ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ 10 ಕಂಪನಿಗಳ ಹಲವು ಆ್ಯಪ್‌ಗಳನ್ನು ಗೂಗಲ್ ಸಂಸ್ಥೆಯು ಪ್ಲೇಸ್ಟೋರ್‌ನಿಂದ (Play Store) ತೆಗೆದುಹಾಕಿದ್ದು, ಈ ಪ್ರಕರಣವನ್ನು ಕೇಂದ್ರ ಸರ್ಕಾರ (Central Government) ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ, ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ (ಮಾರ್ಚ್ 4) ಗೂಗಲ್ ಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಮಾತುಕತೆ ಮೂಲಕ ಸಮಸ್ಯೆ ಬಗೆಹಿರಿಸಿಕೊಳ್ಳಬೇಕು ಎಂಬುದು ಕೇಂದ್ರ ಸರ್ಕಾರದ ಪ್ರಸ್ತಾಪವಾಗಿದೆ.
“ಭಾರತವು ಭಾರಿ ಬೆಳವಣಿಗೆ ಹೊಂದಿರುವ ಸ್ಟಾರ್ಟಪ್‌ಗಳ ಎಕೋಸಿಸ್ಟಮ್ ಹೊಂದಿದೆ. ಹಾಗಾಗಿ, ಭಾರತೀಯ ಕಂಪನಿಗಳ ಹಿತ ಕಾಪಾಡುವುದು ಮುಖ್ಯವಾಗಿದೆ. ಇದೇ ದಿಸೆಯಲ್ಲಿ, ಸೋಮವಾರ ಗೂಗಲ್ ಕಂಪನಿಯ ಪ್ರತಿನಿಧಿಗಳೊಂದಿಗೆ ಸಭೆ ಕರೆಯಲಾಗಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸಭೆಯ ಉದ್ದೇಶವಾಗಿದೆ” ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಗೂಗಲ್ ತೆಗೆದ ಆ್ಯಪ್‌ಗಳಿವು
- ಭಾರತ್ ಮ್ಯಾಟ್ರಿಮೋನಿ- ಡೇಟಿಂಗ್, ವಧು-ವರರ ವೇದಿಕೆ
- ಟ್ರೂಲಿ ಮ್ಯಾಡ್ಲಿ- ಡೇಟಿಂಗ್
- ಕ್ವ್ಯಾಕ್ ಕ್ವ್ಯಾಕ್ – ಡೇಟಿಂಗ್ ಸೈಟ್
- ಸ್ಟೇಜ್- ಒಟಿಟಿ ಪ್ಲಾಟ್‌ಫಾರ್ಮ್
- ಕುಕು ಎಫ್‌ಎಂ- ಒಟಿಟಿ ಪಾಡ್‌ಕಾಸ್ಟ್
- ಜೀವನ್‌ಸಾಥಿ.ಕಾಮ್- ಡೇಟಿಂಗ್, ಮ್ಯಾಚ್ ಮೇಕಿಂಗ್
- 99 ಎಕರ್ಸ್- ಪ್ರಾಪರ್ಟಿ ಟ್ರೇಡಿಂಗ್
- ನೌಕ್ರಿ.ಕಾಮ್- ಉದ್ಯೋಗ ನೇಮಕಾತಿ
ಏನಿದು ಪ್ರಕರಣ?
ಗೂಗಲ್ ಸಂಸ್ಥೆಯು ಇತ್ತೀಚೆಗೆ ಆ್ಯಪ್‌ಗಳಿಗೆ ಶೇ.11ರಿಂದ ಶೇ.26ರಷ್ಟು ಸೇವಾ ಶುಲ್ಕವನ್ನು ವಿಧಿಸಲು ಮುಂದಾಗಿದ್ದು, ಇದನ್ನು ಭಾರತದ ಕಂಪನಿಗಳು ವಿರೋಧಿಸಿದ್ದವು. ಇದರಿಂದ ಕುಪಿತಗೊಂಡಿದ್ದ ಗೂಗಲ್ ಸಂಸ್ಥೆಯು ಭಾರತದ ಕಂಪನಿಗಳ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಿದೆ. ಇದು ಈಗ ಹೊಸ ವಿವಾದಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಡಿ ಇಟ್ಟಿದೆ.
ಇದನ್ನೂ ಓದಿ: Matrimony Apps: ಮ್ಯಾಟ್ರಿಮೋನಿ ಆ್ಯಪ್ ಇನ್ನಿಲ್ಲ; ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ!
ಗೂಗಲ್ ಕ್ರಮವನ್ನು ಕಂಪನಿಗಳು ಖಂಡಿಸಿದ್ದವು. “ನಿಯಮಗಳ ಉಲ್ಲಂಘನೆಯಾಗಿದೆ ಎಂದು ಗೂಗಲ್ ಕಂಪನಿಯು ನೋಟಿಸ್ ನೀಡುತ್ತಿದೆ. ಮ್ಯಾಟ್ರಿಮೋನಿ ಸರಣಿಯ ಒಂದೊಂದೇ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಡಿಲೀಟ್ ಮಾಡಲಾಗುತ್ತಿದೆ. ಭಾರತದ ಇಂಟರ್‌ನೆಟ್ ಕ್ಷೇತ್ರದಲ್ಲಿ ಇದೊಂದು ಕರಾಳ ದಿನ” ಎಂದು ಮ್ಯಾಟ್ರಿಮೋನಿ ಸಂಸ್ಥಾಪಕ ಮುರುಗಾವೇಲ್ ಜಾನಕಿರಾಮ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ