ನವದೆಹಲಿ: 2019ರ ಲೋಕಸಭೆ ಚುನಾವಣೆಗಾಗಿ (2019 Lok Sabha Election) ಭಾರತೀಯ ರಿಸರ್ವ್ ಬ್ಯಾಂಕಿನಿಂದ (Reserve Bank of India – RBI) ಸುಮಾರು 2ರಿಂದ 3 ಲಕ್ಷ ಕೋಟಿ ರೂಪಾಯಿ ಪಡೆಯಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ (Narendra Modi Government) ಮುಂದಾಗಿತ್ತೇ? ಆಗ ಆರ್‌ಬಿಐನ ಡೆಪ್ಯುಟಿ ಗವರ್ನರ್ ಆಗಿದ್ದ ವಿರಳ್ ಆಚಾರ್ಯ (Viral Acharya) ಅವರ ಪ್ರಕಾರ ಹೌದು. ಸಾರ್ವತ್ರಿಕ ಚುನಾವಣೆಗಳ ಪೂರ್ವಭಾವಿಯಾಗಿ ಜನಪ್ರಿಯ ವೆಚ್ಚವನ್ನು (ಕಲ್ಯಾಣ ಕಾರ್ಯಕ್ರಮಗಳು) ಪೂರೈಸಲು 2018ರಲ್ಲಿ ಆರ್‌ಬಿಐ ಬ್ಯಾಲೆನ್ಸ್ ಶೀಟ್‌ನಿಂದ 2-3 ಲಕ್ಷ ಕೋಟಿ ರೂಪಾಯಿಗಳನ್ನು ಹೊರತೆಗೆಯಲು ಸರ್ಕಾರದಲ್ಲಿ (Central Government) ಕೆಲವರು ಯೋಜಿಸಿದ್ದರು. ಆದರೆ, ಈ ಪ್ರಯತ್ನವನ್ನು ಆರ್‌ಐಬಿ ಕಟುವಾಗಿ ವಿರೋಧಿಸಿತ್ತು ಎಂದು ಅವರು ಬರೆದುಕೊಂಡಿದ್ದಾರೆ. ಬಳಿಕ ಇದು ಸ್ಪಷ್ಟವಾಗಿ ಆರ್‌ಬಿಐ ಮತ್ತು ಸರ್ಕಾರದ ನಡುವಿನ ಭಿನ್ನಾಭಿಪ್ರಾಯಗಳಿಗೆ ಕಾರಣವಾಯಿತು. ಸೆಂಟ್ರಲ್ ಬ್ಯಾಂಕ್‌ಗೆ ನಿರ್ದೇಶನ ನೀಡುವ ಸಂಬಂಧ ಕೇಂದ್ರ ಸರ್ಕಾರವು ಎಂದಿಗೂ ಬಳಕೆಯಾಗದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 7 ಕೂಡ ಬಳಸಲು ಮುಂದಾಗಿತ್ತು ಎಂದು ಹೇಳಿಕೊಂಡಿದ್ದಾರೆ.
2018ರ ಅಕ್ಟೋಬರ್ 26ರಂದು ಎ ಡಿ ಶ್ರಾಫ್ ಸ್ಮಾರಕ್ ಉಪನ್ಯಾಸ ನೀಡುವ ಆಚಾರ್ಯ ಅವರು ಈ ಸಂಗತಿಯ ಬಗ್ಗೆ ಮೊದಲು ಹೇಳಿದ್ದರು. ಈಗ ಅವರು ತಮ್ಮ’ ಕ್ವೆಸ್ಟ್ ಫಾರ್ ರಿಸ್ಟೋರಿಂಗ್ ಫೈನಾನ್ಶಿಯಲ್ ಸ್ಟೆಬಿಲಿಟಿ ಇನ್ ಇಂಡಿಯಾ ಕೃತಿಯ ಮುನ್ನುಡಿಯಲ್ಲಿ ಕೇಂದ್ರ ಸರ್ಕಾರವು ಹೇಗೆ ಆರ್‌ಬಿಐನಿಂದ ದುಡ್ಡು ಎತ್ತಲು ಮುಂದಾಗಿತ್ತು ಎಂದು ಬರೆದಿದ್ದಾರೆ. ಅಲ್ಲದೇ ಸರ್ಕಾರದ ಈ ಕೃತ್ಯವನ್ನು ಕೇಂದ್ರ ಸರ್ಕಾರದ ಹಿಂಬಾಗಿಲ ಮೂಲಕ ಹಣ ಗಳಿಸುವ ನೀತಿ ಎಂದು ಅವರು ಕರೆದಿದ್ದಾರೆ.
ಸರ್ಕಾರ ಮತ್ತು ಅಧಿಕಾರಶಾಹಿಯಲ್ಲಿರುವ ಜಾಣ ತಲೆಗಳು, ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ (2014ಕ್ಕಿಂತ ಮುಂಚಿನ) ಆರ್‌ಬಿಐ ಸಂಗ್ರಹಿಸಿದ್ದ ಹಣವನ್ನು ಹಾಲಿ ಸರ್ಕಾರದ ಖಾತೆಗೆ ಜಮಾ ಮಾಡಿಕೊಳ್ಳುವ ಪ್ಲ್ಯಾನ್ ರೂಪಿಸಿದ್ದವು. ಈ ವಿಷಯವನ್ನು ವಿರಳ್ ಆಚಾರ್ಯ ಅವರು ತಮ್ಮ 2020ರಲ್ಲಿ ಪ್ರಕಟವಾದ ಪುಸ್ತಕದ ಹೊಸ ಆವೃತ್ತಿಯಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ.
ಆರ್‌ಬಿಐ ಪ್ರತಿ ವರ್ಷ ತನ್ನ ಲಾಭದ ಒಂದು ಭಾಗವನ್ನು ಸರ್ಕಾರಕ್ಕೆ ನೀಡುವ ಬದಲು ಮೀಸಲಿಡುತ್ತದೆ. 2016ರ ನೋಟು ಅಮಾನ್ಯೀಕರಣದ ಮೂರು ವರ್ಷಗಳಲ್ಲಿ, ಕೇಂದ್ರೀಯ ಬ್ಯಾಂಕ್ ಸರ್ಕಾರಕ್ಕೆ ದಾಖಲೆಯ ಲಾಭ ವರ್ಗಾವಣೆ ಮಾಡಿದೆ ಎಂದು ಆಚಾರ್ಯ ಹೇಳಿದ್ದಾರೆ. ನೋಟು ಅಮಾನ್ಯೀಕರಣದ ವರ್ಷದಲ್ಲಿ, ಕರೆನ್ಸಿ ಮುದ್ರಣದ ವೆಚ್ಚವು ಕೇಂದ್ರಕ್ಕೆ ಮಾಡಿದ ವರ್ಗಾವಣೆಯನ್ನು ಕಡಿಮೆಗೊಳಿಸಿತು. ಇದರ ಪರಿಣಾಮವಾಗಿ 2019ರ ಚುನಾವಣೆಗೆ ಮುಂಚಿತವಾಗಿ ಸರ್ಕಾರವು ಹಣದ ಬೇಡಿಕೆಯನ್ನು ತೀವ್ರಗೊಳಿಸಿತು ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: RBI New rules: ಮನೆ ಸಾಲದ ಇಎಂಐ ಏರಿಕೆ ಖಚಿತ! ಆರ್‌ಬಿಐ ಹೊಸ ರೂಲ್ ಪ್ರಭಾವ
ಆರ್‌ಬಿಐನಿಂದ ಹೆಚ್ಚಿನ ಲಾಭಾಂಶವನ್ನು ಹೊರತೆಗೆಯುವುದು ಒಂದು ರೀತಿಯಲ್ಲಿ ಹಣಕಾಸಿನ ಕೊರತೆಯ “ಹಿಂದಿನ ಹಣ ಗಳಿಕೆ ಎನಿಸಿಕೊಳ್ಳುತ್ತದೆ. ಬಂಡವಾಳ ಹಿಂಪಡೆಯುವಿಕೆ ಗುರಿ ತಪ್ಪಿದ ನಂತರ ವಿತ್ತೀಯ ಕೊರತೆಯೂ ಹೆಚ್ಚಾಗುತ್ತದೆ. ಕೇಂದ್ರ ಬ್ಯಾಂಕಿನ ಬ್ಯಾಲೆನ್ಸ್‌ಶೀಟ್‌ನಿಂದ ಹಣ ಪಡೆಯಲು ಸಾಧ್ಯವಿರುವಾಗ ಮತ್ತು ಹೆಚ್ಚುತ್ತಿರುವ ವಿತ್ತೀಯ ಕೊರತೆಯನ್ನು ಹಣಗೊಳಿಸುವ ಮಾರ್ಗವಾಗಿ ಸರ್ಕಾರವು ತನ್ನ ಚುನಾವಣಾ ವರ್ಷದಲ್ಲಿ ಜನಪ್ರಿಯ ಯೋಜನೆಗಳಿಗೆ ವೆಚ್ಚ ಮಾಡುವುದನ್ನು ಯಾಕೆ ಕಡಿತ ಮಾಡಲು ಮುಂದಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ತಮ್ಮ ಅವಧಿಯನ್ನು ಪೂರೈಸಲು ಇನ್ನೂ 6 ತಿಂಗಳು ಬಾಕಿ ಇರುವಾಗಲೇ ವಿರಳ್ ಆಚಾರ್ಯ ಅವರು ತಮ್ಮ ಡೆಪ್ಯುಟಿ ಗವರ್ನರ್ ಹುದ್ದೆಗೆ 2019ರಲ್ಲಿ ರಾಜೀನಾಮೆ ನೀಡಿದ್ದರು. ವಿರಳ್ ಆಚಾರ್ಯ ಅವರು ಆರ್‌ಬಿಐನ ವಿತ್ತೀಯ ನೀತಿ, ಹಣಕಾಸು ಮಾರುಕಟ್ಟೆ, ಹಣಕಾಸು ಸ್ಥಿರತೆ ಮತ್ತು ಸಂಶೋಧನೆಗಳ ವಿಭಾಗಗಳ ನೇತೃತ್ವವನ್ನು ವಹಿಸಿಕೊಂಡಿದ್ದರು. ಇದಕ್ಕೂ ಮೊದಲು ಆರ್‌ಬಿಐ ಗವರ್ನರ್ ಆಗಿದ್ದ 2018ರಲ್ಲಿ ಉರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡಿದ್ದರು. ಅವರು ತಮ್ಮ ಹುದ್ದೆ ತೊರೆಯಲು ವೈಯಕ್ತಿಕ ಕಾರಣ ಎಂದು ಹೇಳಿದ್ದರು. ಆದರೆ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಿನ ಭಿನ್ನಾಭಿಪ್ರಾಯವೇ ಅವರ ರಾಜೀನಾಮೆಗೆ ಕಾರಣವಾಗಿತ್ತು ಎಂದು ಹೇಳಲಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.