ನವದೆಹಲಿ: 2022ರ ಗೋದ್ರಾ ಹತ್ಯಾಕಾಂಡಕ್ಕೆ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ಬಿಂಬಿಸಿ ಬಿಬಿಸಿ ಡಾಕ್ಯುಮೆಂಟರಿ (BBC Documentary On Modi) ನಿರ್ಮಿಸಿರುವುದಕ್ಕೆ ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. “ಬಿಬಿಸಿ ನಿರ್ಮಿಸಿರುವ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ (India: The Modi Question) ದುರುದ್ದೇಶ ಹೊಂದಿರುವ ಡಾಕ್ಯುಮೆಂಟರಿ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರುಗೇಟು ನೀಡಿದೆ.
“ಬಿಬಿಸಿ ಡಾಕ್ಯುಮೆಂಟರಿಯು ಪಕ್ಷಪಾತ, ವಸ್ತುನಿಷ್ಠತೆ ಕೊರತೆಯಿಂದ ಕೂಡಿದೆ. ನರೇಂದ್ರ ಮೋದಿ ಅವರ ವಿರುದ್ಧ ನಡೆಸಿದ ಪಿತೂರಿ ಇದಾಗಿದ್ದು, ದುರುದ್ದೇಶದ ಈಡೇರಿಕೆಗಾಗಿಯೇ ನಿರ್ಮಿಸಲಾಗಿದೆ. ಹಾಗಾಗಿ, ಏಕಪಕ್ಷೀಯವಾಗಿ ನಿರೂಪಣೆ ಮಾಡಲಾಗಿದೆ. ಇದನ್ನು ಭಾರತ ಖಂಡಿಸುತ್ತದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ಹಾಗೆಯೇ, ಭಾರತದಲ್ಲಿ ಡಾಕ್ಯುಮೆಂಟರಿಯ ಪ್ರಸಾರ ಮಾಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಯುಟ್ಯೂಬ್‌ನಿಂದ ಡಾಕ್ಯುಮೆಂಟರಿ ಡಿಲೀಟ್
ನರೇಂದ್ರ ಮೋದಿ ಕುರಿತು ಬಿಬಿಸಿ ಬಿಡುಗಡೆ ಮಾಡಿರುವ ಡಾಕ್ಯುಮೆಂಟರಿಯನ್ನು ಯುಟ್ಯೂಬ್‌ನಿಂದ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದ ಆಕ್ರೋಶ, ಬ್ರಿಟನ್‌ನಲ್ಲಿಯೂ ಆಕ್ಷೇಪ ವ್ಯಕ್ತವಾದ ಕಾರಣ ಗೂಗಲ್ ಒಡೆತನದ ಯುಟ್ಯೂಬ್‌ನಿಂದ ಡಾಕ್ಯುಮೆಂಟರಿಯನ್ನು ಬುಧವಾರ ಡಿಲೀಟ್ ಮಾಡಲಾಗಿದೆ.
ಏನಿದು ಪ್ರಕರಣ?
2002ರಲ್ಲಿ ಗುಜರಾತ್‌ನ ಗೋದ್ರಾದಲ್ಲಿ ನಡೆದ ಹತ್ಯಾಕಾಂಡಕ್ಕೆ ಆಗ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ಡಾಕ್ಯುಮೆಂಟರಿಯಲ್ಲಿ ಚಿತ್ರಿಸಿದ ಕಾರಣ ವಿವಾದ ಉಂಟಾಗಿದೆ. ರಿಚರ್ಡ್ ಕುಕ್‌ಸನ್ ಡಾಕ್ಯುಮೆಂಟರಿಯ ನಿರ್ಮಾಪಕರಾಗಿದ್ದು, ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಗೋದ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದೆ.
ಇದನ್ನೂ ಓದಿ | National Youth Festival | ಯುವಶಕ್ತಿಯೇ ಭಾರತದ ಪಯಣದ ಚಾಲಕ ಶಕ್ತಿ: ಪ್ರಧಾನಿ ನರೇಂದ್ರ ಮೋದಿ ಬಣ್ಣನೆ