ನವದೆಹಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿಯಾಗಿರುವ ಕುರಿತು ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಪೆಟ್ರೋಲ್ ಹಾಗೂ ಡೀಸೆಲ್‌ಅನ್ನು ಸರಕು ಮತ್ತು ಸೇವಾ ತೆರಿಗೆ (Fuel Under GST) ವ್ಯಾಪ್ತಿಗೆ ತರಲು ಸಿದ್ಧ ಎಂದು ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಹಾಗೊಂದು ವೇಳೆ, ಜಿಎಸ್‌ಟಿ ವ್ಯಾಪ್ತಿಗೆ ತಂದರೆ ದೇಶಾದ್ಯಂತ ಇಂಧನ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಆದರೆ, ಇದರ ಜಾರಿಗೆ ರಾಜ್ಯ ಸರ್ಕಾರಗಳ ಒಪ್ಪಿಗೆಯೂ ಬೇಕಿರುವುದನ್ನು ಕೇಂದ್ರ ಸರ್ಕಾರ ಒತ್ತಿ ಹೇಳಿದೆ.
“ಪೆಟ್ರೋಲ್ ಹಾಗೂ ಡೀಸೆಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ಇದಕ್ಕೆ ರಾಜ್ಯ ಸರ್ಕಾರಗಳು ಒಪ್ಪಿಗೆ ಸೂಚಿಸಬೇಕು. ಹಾಗೊಂದು ವೇಳೆ ರಾಜ್ಯಗಳು ಸಮ್ಮತಿ ಸೂಚಿಸಿದರೆ, ಜಿಎಸ್‌ಟಿ ವ್ಯಾಪ್ತಿಗೆ ತರಲು ನಾವು ತಯಾರಿದ್ದೇವೆ. ಆದರೆ, ಇದನ್ನು ಹೇಗೆ ಜಾರಿಗೊಳಿಸಬೇಕು ಎಂಬುದೇ ಸದ್ಯದ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವರೇ ಉತ್ತರ ಕಂಡುಕೊಳ್ಳಬೇಕು” ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
“ಜಿಎಸ್‌ಟಿ ವ್ಯಾಪ್ತಿಗೆ ತಂದರೆ ರಾಜ್ಯಗಳು ಹೇಗೆ ಆದಾಯ ಗಳಿಸುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಯಾರು ಆದಾಯ ಪಡೆಯುತ್ತಿದ್ದಾರೋ (ರಾಜ್ಯಗಳು) ಅವರು ಆದಾಯವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದರಲ್ಲೂ, ಮದ್ಯ ಹಾಗೂ ಇಂಧನದಿಂದ ಹೆಚ್ಚಿನ ಆದಾಯ ಲಭಿಸುತ್ತದೆ. ಹಾಗಾಗಿ, ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪಿಗೆ ಸೂಚಿಸುವುದು ಕಷ್ಟಸಾಧ್ಯ. ಸದ್ಯ, ಹಣದುಬ್ಬರ ಸೇರಿ ಹಲವು ವಿಷಯಗಳ ಕುರಿತು ಕೇಂದ್ರ ಸರ್ಕಾರ ಮಾತ್ರ ಹೆಚ್ಚಿನ ಚಿಂತನೆ ನಡೆಸುತ್ತಿದೆ. ಆದರೆ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸಹಕಾರವೂ ಮುಖ್ಯವಾಗುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | GST | ಪರೋಟಾ ಅಂದ್ರೆ ರೋಟಿ, ಚಪಾತಿ ಅಲ್ಲ, 18% ಜಿಎಸ್‌ಟಿ ಪಕ್ಕಾ: ಗುಜರಾತ್ ಎಎಎಆರ್