Site icon Vistara News

IMF Report : ಭಾರತ ಸಾಲ ಮಿತಿಮೀರುತ್ತಿದೆ ಎಂಬ ಐಎಂಎಫ್​ ವರದಿ ಅಸಂಬದ್ಧ, ಕೇಂದ್ರದ ಸ್ಪಷ್ಟನೆ

IMF

ನವದೆಹಲಿ: 2027-28ರ ವೇಳೆಗೆ ಭಾರತದ ಸಾಲ ಜಿಡಿಪಿಯ 100 ಪ್ರತಿಶತ ದಾಟಲಿದೆ ಎಂಬ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF Report) ಅಸಮರ್ಪಕ ಎಂದು ಭಾರತ ಹೇಳಿದೆ. ಈ ಮುನ್ಸೂಚನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬುದಾಗಿ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಐಎಫ್​​ ನುಡಿದಿರುವ ಭವಿಷ್ಯ ಅತ್ಯಂತ ಕೆಟ್ಟ ಸನ್ನಿವೇಶಕ್ಕೆ ಅನುಗುಣವಾಗಿವೆ. ಅದು ಅಸಂಬದ್ಧ ಮತ್ತು ಸರಿಪಡಿಸಲಾಗದ ವಿಷಯವೇನೂ ಅಲ್ಲ ಎಂಬುದಾಗಿಯೂ ಸಚಿವಾಲಯ ಹೇಳಿದೆ.

2028 ರ ಆರ್ಥಿಕ ವರ್ಷದ ವೇಳೆಗೆ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಭಾರತದ ಸಾಮಾನ್ಯ ಸಾಲವು ಅದರ ಜಿಡಿಪಿಯ 100 ಶೇಕಡಾ ಮೀರುತ್ತದೆ ಎಂದು ಐಎಂಎಫ್ ತನ್ನ ವಾರ್ಷಿಕ ವಿಮರ್ಶೆಯಲ್ಲಿ ಹೇಳಿದೆ. ಅಮೆರಿಕ, ಯುಕೆ ಮತ್ತು ಚೀನಾದ ಸಾಲ ಮತ್ತು ಜಿಡಿಪಿ ಅನುಪಾತವು ಕ್ರಮವಾಗಿ 160%, 140% ಮತ್ತು 200% ರಷ್ಟಿದೆ ಎಂದು ಊಹಿಸಲಾಗಿರುವ ಅದೇ ವರದಿಯಲ್ಲಿ ಭಾರತದ ಆರ್ಥಿಕತೆನ್ನು ವಿಮರ್ಶೆ ಮಾಡಲಾಗಿತ್ತು. ಇದನ್ನು ಉಲ್ಲೇಖಿಸಿರುವ ಹಣಕಾಸು ಸಚಿವಾಲಯ ಭಾರತ 100% ಗೆ ಹೋಲಿಸಿದರೆ ಚೀನಾ, ಅಮೆರಿಕಾದಂಥ ದೇಶಗಳ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ ಎಂದು ಹೇಳಿದೆ.

ಅನುಕೂಲಕರ ಪರಿಸ್ಥಿತಿಗಳಲ್ಲಿ ಸಾಮಾನ್ಯ ಸರ್ಕಾರಿ ಸಾಲ ಮತ್ತು ಜಿಡಿಪಿ ಅನುಪಾತವು ಇದೇ ಅವಧಿಯಲ್ಲಿ ಶೇಕಡಾ 70 ಕ್ಕಿಂತ ಕಡಿಮೆಯಾಗಬಹುದು ಎಂಬುದಾಗಿಯೂ ಅದೇ ವರದಿ ಹೇಳಿದೆ ಎಂಬುದನ್ನು ಸಚಿವಾಲಯ ತನ್ನ ಹೇಳಿಕೆಯಲ್ಲಿ ಬೊಟ್ಟು ಮಾಡಿ ಹೇಳಿದೆ.

ಬಾಹ್ಯ ಮೂಲಗಳಿಂದ ಕನಿಷ್ಠ ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಸಾಲಗಳೊಂದಿಗೆ ದೇಶದ ಸಾಮಾನ್ಯ ಸಾಲವು ಪ್ರಾಬಲ್ಯದಲ್ಲಿದೆ ಎಂದು ಸರ್ಕಾರ ಹೇಳಿದೆ. ದೇಶೀಯವಾಗಿ ನೀಡಲಾದ ಸಾಲ (ಸರ್ಕಾರಿ ಬಾಂಡ್​​ಗಳ ರೂಪದಲ್ಲಿ) ಮಧ್ಯಮ ಅಥವಾ ದೀರ್ಘಾವಧಿಯದ್ದಾಗಿದೆ. ಕೇಂದ್ರ ಸರ್ಕಾರದ ಸಾಲಕ್ಕೆ ಸರಿಸುಮಾರು 12 ವರ್ಷಗಳ ಸರಾಸರಿ ಮುಕ್ತಾಯ ಅವಧಿ ಇದೆ. ಆದ್ದರಿಂದ, ದೇಶೀಯ ಸಾಲಕ್ಕೆ ರೋಲ್ಓವರ್ ಅಪಾಯ ಕಡಿಮೆ. ವಿನಿಮಯ ದರಗಳಲ್ಲಿn ಏರುಪೇರುಗಳಿಗೆ ಒಳಗಾಗುವ ಸಾಧ್ಯತೆಗಳೂ ಕನಿಷ್ಠವಾಗಿದೆ ಎಂದು ಸಚಿವಾಲಯ ಹೇಳಿದೆ.

ರಾಜ್ಯಗಳು ಮತ್ತು ಕೇಂದ್ರ ಎರಡನ್ನೂ ಒಳಗೊಂಡ ಸಾಮಾನ್ಯ ಸರ್ಕಾರಿ ಸಾಲವು 2020-21ರ ಹಣಕಾಸು ವರ್ಷದಲ್ಲಿ 88% ರಿಂದ 2022-23ರ ಹಣಕಾಸು ವರ್ಷದಲ್ಲಿ 81% ಕ್ಕೆ ಇಳಿದಿದೆ ಎಂದು ಸಚಿವಾಲಯ ವಿವರಿಸಿದೆ.

ಇದನ್ನೂ ಓದಿ: 70 hour work: ಸುದೀರ್ಘ ಗಂಟೆಗಳ ಕೆಲಸದ ಪರ ಉದ್ಯಮಿ ನೀರಜ್‌ ಶಾ ಬ್ಯಾಟಿಂಗ್‌

“ರಾಜ್ಯಗಳು ವೈಯಕ್ತಿಕವಾಗಿ ತಮ್ಮ ಹಣಕಾಸಿನ ಜವಾಬ್ದಾರಿ ಶಾಸನವನ್ನು ಜಾರಿಗೆ ತಂದಿವೆ. ಇದನ್ನು ಆಯಾ ರಾಜ್ಯ ಶಾಸಕಾಂಗಗಳು ಮೇಲ್ವಿಚಾರಣೆ ಮಾಡುತ್ತವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಏನು ಹೇಳಿತ್ತು ಐಎಂಎಫ್​?

ಭಾರತವು ಅತ್ಯಂತ ವೇಗದಲ್ಲಿ ಆರ್ಥಿಕ ಬೆಳವಣಿಗೆಯನ್ನು(India Economic Development) ಕಾಣುತ್ತಿದೆ ಎಂಬ ಖುಷಿಯ ನಡುವೆಯೇ ಆತಂಕದ ಸುದ್ದಿಯೊಂದು ಹೊರ ಬಿದ್ದಿತ್ತು. ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund – IMF) ಎಚ್ಚರಿಕೆಯ ಟಿಪ್ಪಣಿಯನ್ನು ಬಿಡುಗಡೆ ಮಾಡಿದ್ದು, ಮಧ್ಯಮ ಅವಧಿಯಲ್ಲಿ ಭಾರತದ ಸರ್ಕಾರದ ಸಾಲವು (India’s rising debt) ಒಟ್ಟು ಆಂತರಿಕ ಉತ್ಪನ್ನದ (GDP) 100 ಪ್ರತಿಶತವನ್ನು ಮೀರಬಹುದು ಎಂದು ಎಚ್ಚರಿಸಿತ್ತು.

ಐಎಂಎಫ್‌ನ ವಾರ್ಷಿಕ ವರದಿಯ ನಾಲ್ಕನೇ ಕನ್ಸಲ್ಟೇಷನ್ ರಿಪೋರ್ಟ್‌ನಲ್ಲಿ ಹೈಲೈಟ್ ಮಾಡಲಾದ ಈ ಎಚ್ಚರಿಕೆಯು ಹೊಸ ಹಣಕಾಸು ಮೂಲಗಳು, ಹೆಚ್ಚಿನ ಖಾಸಗಿ ವಲಯದ ಹೂಡಿಕೆ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಕ್ರಮಗಳ ಅಗತ್ಯವನ್ನು ಒತ್ತಿಹೇಳುತ್ತದೆ. ಹವಾಮಾನ ಒತ್ತಡ ಮತ್ತು ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳುವ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲು ಗಣನೀಯ ಹೂಡಿಕೆಯ ಅಗತ್ಯವಿದೆ ಎಂದು ಐಎಂಎಫ್ ತಿಳಿಸಿದೆ.

Exit mobile version