Site icon Vistara News

ಮತಾಂತರಗೊಂಡ ಪರಿಶಿಷ್ಟ ಜಾತಿ ವ್ಯಕ್ತಿಗಳ ಸ್ಥಿತಿಗತಿ ಪರಿಶೀಲನೆಗೆ ಕೇಂದ್ರ ಆಯೋಗ

religion

ನವ ದೆಹಲಿ: ಹಿಂದೂ ಧರ್ಮದಿಂದ ಇತರ ಧರ್ಮಗಳಿಗೆ ಮತಾಂತರಗೊಂಡ ಪರಿಶಿಷ್ಟ ಜಾತಿ ವ್ಯಕ್ತಿಗಳ ಪ್ರಸ್ತುತ ಸ್ಥಿತಿಗತಿ ಅಧ್ಯಯನ ಮಾಡಲು ರಾಷ್ಟ್ರೀಯ ಆಯೋಗವೊಂದರ ರಚನೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಈ ಬಗೆಗೆ ಈಗಾಗಲೇ ಚಿಂತನೆ ನಡೆಸಲಾಗಿದ್ದು, ಸದ್ಯದಲ್ಲೇ ಸರ್ಕಾರ ನಿರ್ಧಾರ ಪ್ರಕಟಿಸಲಿದೆ. ಹಿಂದೂ ಧರ್ಮದಿಂದ ಬೌದ್ಧ, ಸಿಕ್ಖ್‌, ಇಸ್ಲಾಂ, ಕ್ರೈಸ್ತ ಮುಂತಾದ ಧರ್ಮಗಳಿಗೆ ಮತಾಂತರಗೊಂಡವರ ಪ್ರಸ್ತುತ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಪರಿಶೀಲಿಸುವುದು ಈ ಆಯೋಗದ ಉದ್ದೇಶ.

ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿರುವ ಪ್ರಕಾರ ಈ ಕುರಿತು ಪ್ರಸ್ತಾವನೆಗೆ ಈಗಾಗಲೇ ಒಪ್ಪಿಗೆ ದೊರೆತಿದ್ದು, ಗೃಹ, ಕಾನೂನು, ವಿತ್ತ, ಸಮಾಜ ಕಲ್ಯಾಣ ಹೀಗೆ ಇತರ ಸಚಿವಾಲಯಗಳ ಜತೆಗೆ ಪೂರ್ವಭಾವಿ ಮಾತುಕತೆ ನಡೆದಿದೆ.

ಮೂಲಗಳ ಪ್ರಕಾರ ಈ ಆಯೋಗದಲ್ಲಿ ನಾಲ್ಕರಿಂದ ಐದು ಸದಸ್ಯರಿದ್ದು, ಕೇಂದ್ರ ಸಚಿವರೊಬ್ಬರು ಅಧ್ಯಕ್ಷರಾಗಿರಲಿದ್ದಾರೆ. ತನ್ನ ವರದಿಯನ್ನು ಸಲ್ಲಿಸಲು ಅದಕ್ಕೆ ಒಂದು ವರ್ಷ ಸಮಯವಿದೆ.

ಹಿಂದೂ ಧರ್ಮದಿಂದ ಬೌದ್ಧ, ಕ್ರೈಸ್ತ ಧರ್ಮಗಳಿಗೆ ಮತಾಂತರಗೊಂಡವರಿಗೂ ಮೀಸಲಾತಿಯನ್ನು ವಿಸ್ತರಿಸಬೇಕು ಎಂದು ಕೋರಿರುವ ಹಲವು ಅರ್ಜಿಗಳು ಪ್ರಸ್ತುತ ಸುಪ್ರೀಂ ಕೋರ್ಟ್‌ ಮುಂದಿರುವಾಗಲೇ ಈ ಆಯೋಗದ ರಚನೆಯ ಪ್ರಸ್ತಾಪ ಮೂಡಿರುವುದು ಕುತೂಹಲ ಮೂಡಿಸಿದೆ. ಈ ವಿಷಯದ ಬಗೆಗೆ ತನ್ನ ನಿಲುವನ್ನು ಮಂಡಿಸಲು ಅಕ್ಟೋಬರ್‌ 11ರವರೆಗೆ ಸರ್ಕಾರ ಸಮಯವನ್ನು ಕೋರ್ಟ್‌ ನೀಡಿತ್ತು.

ಪ್ರಸ್ತುತ ಇರುವ ಕಾನೂನಿನ ಪ್ರಕಾರ, ಹಿಂದೂ ಅಲ್ಲದ ಇತರ ಧರ್ಮಗಳ ವ್ಯಕ್ತಿಗಳು ತಾವು ಪರಿಶಿಷ್ಟ ಜಾತಿಯವರು ಎಂದು ವಾದಿಸಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಎಸ್‌ಸಿ ಸ್ಥಾನಮಾನವನ್ನು ಹಿಂದೂ ಧರ್ಮಕ್ಕೆ ಮಾತ್ರ ಸೀಮಿತಗೊಳಿಸಬಾರದು ಎಂದು ಈ ಹಿಂದೆ ಹಲವರು ವಾದಿಸಿದ್ದಾರೆ. ಆದರೆ ಅದು ಕಾನೂನು ಮತ್ತು ಕೋರ್ಟ್‌ ಮಾನ್ಯತೆ ಪಡೆದಿಲ್ಲ.

ಇದನ್ನೂ ಓದಿ | Hijab Ban | ಹೈಕೋರ್ಟ್‌ನಿಂದ ಅಂಬೇಡ್ಕರ್ ಹೇಳಿಕೆ ಬಳಕೆ ನೋವು ತಂದಿದೆ: ಸುಪ್ರೀಂನಲ್ಲಿ ಅರ್ಜಿದಾರರ ವಾದ

Exit mobile version