ನವದೆಹಲಿ: ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಗೆ (Supreme Court Collegium) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ನಡುವಿನ ಸಂಘರ್ಷವು ನಿಲ್ಲುವಂತಿಲ್ಲ ಕಾಣುತ್ತಿಲ್ಲ. ಇದೀಗ, ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದು, ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಯಲ್ಲಿ ಸರ್ಕಾರದ ಪ್ರತಿನಿಧಿಗೂ ಅವಕಾಶ ಕಲ್ಪಿಸಬೇಕೆಂದು ಕೋರಿದೆ. ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ಈ ಪತ್ರ ಬರೆದಿದ್ದಾರೆ.
ನ್ಯಾಯಮೂರ್ತಿಗಳ ನೇಮಕದಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವವನ್ನು ಕಾಪಾಡುವುದಕ್ಕಾಗಿ ಕೊಲಿಜಿಯಂ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗೂ ಅವಕಾಶ ಕಲ್ಪಿಸಬೇಕೆಂದು ಕೋರಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ನಡುವಿನ ಹಗ್ಗಜಗ್ಗಾಟ ಮತ್ತೊಂದು ಹಂತಕ್ಕೆ ಬಂದು ನಿಂತಿದೆ.
ಈಗ ಬರೆದಿರುವ ಪತ್ರವು ಈ ಹಿಂದೆ ನ್ಯಾಯಮೂರ್ತಿಗಳಿಗೆ ಬರೆದ ಪತ್ರಗಳ ಮುಂದುವರಿದ ಭಾಗವೇ ಆಗಿದೆ. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ(ಎನ್‌ಜೆಎಸಿ)ವನ್ನು ರದ್ದು ಮಾಡುವಾಗ, ಜಡ್ಜ್ ನೇಮಕ ವ್ಯವಸ್ಥೆಯ ಪುನರ್ ರಚನೆಯ ಬಗ್ಗೆ ಸಂವಿಧಾನಪೀಠವು ತಿಳಿಸಿತ್ತು ಎಂದು ಕಿರೆನ್ ರಿಜಿಜು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ಗೆ ಕಿರೆನ್ ರಿಜಿಜು ಬರೆದಿರುವ ಪತ್ರವು ಈಗ ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿ, ಇದೊಂದು ಅಪಾಯಕಾರಿ ನಡೆ ಎಂದು ಟೀಕಿಸಿದ್ದಾರೆ. ನ್ಯಾಯಾಂಗ ನೇಮಕಾತಿ ಸಂಪೂರ್ಣವಾಗಿ ಸರ್ಕಾರದಿಂದ ಮುಕ್ತವಾಗಿರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ | Judges Appointment | ಕಾನೂನು ಸಚಿವ ರಿಜಿಜು ಹೇಳಿಕೆಗೆ ಸುಪ್ರೀಂ ಗರಂ! ನೇಮಕಾತಿಗೆ ತಡವೇಕೆ?