Site icon Vistara News

Cervical Cancer | ಗರ್ಭಕಂಠದ ಕ್ಯಾನ್ಸರ್‌ ತಡೆಗೆ ದೇಶೀಯ ಲಸಿಕೆ ಸಿದ್ಧ; ಬರುವ ವರ್ಷದಿಂದಲೇ ವ್ಯಾಕ್ಸಿನೇಶನ್?

Cervical Cancer

ನವ ದೆಹಲಿ: ಹ್ಯುಮನ್‌ ಪ್ಯಾಪಿಲೊಮ ವೈರಸ್‌ನಿಂದ (ಎಚ್‌ಪಿವಿ) ಬರುವ ಸರ್ವೈಕಲ್‌ ಕ್ಯಾನ್ಸರ್‌ (ಗರ್ಭಕಂಠದ ಕ್ಯಾನ್ಸರ್​) ತಡೆಗಟ್ಟಲು ದೇಶೀಯವಾಗಿ ಸಿದ್ಧಗೊಂಡಿರುವ ಲಸಿಕೆ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ದುಬಾರಿ ಬೆಲೆಯ ಲಸಿಕೆಗಳಿಗೆ ಪ್ರತಿಯಾಗಿ ಕಡಿಮೆ ಬೆಲೆಯಲ್ಲಿ ದೊರೆಯಲಿರುವ ಈ ವ್ಯಾಕ್ಸಿನ್, ಬರುವ ೨೦೨೩ರ ಮಧ್ಯಭಾಗದಲ್ಲಿ ದೇಶಾದ್ಯಂತ ನಡೆಯಬಹುದಾದ ಲಸಿಕೆ ಅಭಿಯಾನಕ್ಕೆ ಪೂರಕವಾಗಲಿದೆ.

ಭಾರತದ ಸೇರಂ ಇಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಅಭಿವೃದ್ಧಿ ಪಡಿಸಿರುವ ಈ ಲಸಿಕೆಯು ಎಚ್‌ಪಿವಿ- ೧೬, ೮, ೬, ೧೧ ಸ್ಟ್ರೇನ್‌ಗಳ ವಿರುದ್ಧ ಪರಿಣಾಮಕಾರಿಯಾದ ಪ್ರತಿಕಾಯಗಳನ್ನು ದೇಹದಲ್ಲಿ ಸೃಷ್ಟಿಸುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಲಸಿಕೆಗಳು ಪ್ರತಿಡೋಸ್‌ಗೆ ೨,೫೦೦ರಿಂದ ೩,೩೦೦ ರೂ,ಗಳವರೆಗಿದೆ. ಆದರೆ ಈ ದೇಶೀಯ ಲಸಿಕೆ ೨೦೦-೪೦೦ ರೂ.ಗಳವರೆಗೆ ಇರಲಿದೆ ಎಂದು ಲಸಿಕಾಕರಣದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥರಾದ ಡಾ. ಎನ್‌.ಕೆ. ಅರೋರಾ ತಿಳಿಸಿದ್ದಾರೆ. ೯-೧೪ ವರ್ಷ ಪ್ರಾಯದ ಬಾಲಕಿಯರಿಗೆ ಸರ್ವವ್ಯಾಕ್‌ (Cervavac) ಎಂಬ ಈ ಲಸಿಕೆಯನ್ನು ಅಭಿಯಾನದ ಮಾದರಿಯಲ್ಲಿ ದೇಶದೆಲ್ಲೆಡೆ ನೀಡುವುದಕ್ಕೆ ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

೨೦೧೬ರಲ್ಲೇ ಸಿಕ್ಕಿಂ ಸರಕಾರ ಈ ಲಸಿಕೆಯನ್ನು ಅಭಿಯಾನದ ಮಾದರಿಯಲ್ಲಿ ನೀಡಿದ್ದು, ರಾಜ್ಯದ ೯-೧೪ರ ವಯೋಮಾನದ ಶೇ. ೯೭ರಷ್ಟು ಬಾಲಕಿಯರು ಈಗ ಪ್ರತಿರೋಧಕ ಶಕ್ತಿಯನ್ನು ಹೊಂದಿದ್ದಾರೆ. ಈ ಲಸಿಕೆಗಳು ಶೇ. ೯೦ರಷ್ಟು ಪರಿಣಾಮಕಾರಿಯಾಗಿವೆ. ಆದರೆ ದೆಹಲಿಯಲ್ಲೂ ಎಚ್‌ಪಿವಿ ಲಸಿಕೆ ಕಾರ್ಯಕ್ರಮವನ್ನು ಸರ್ಕಾರ ಆರಂಭಿಸಿದರೂ, ಅದು ಸಿಕ್ಕಿಂನಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲಿಲ್ಲ. ಕಾರಣ, ಇಡೀ ಕಾರ್ಯಕ್ರಮದಕ್ಕೆ ಅಭಿಯಾನದ ರೂಪ ನೀಡುವ ಬದಲಾಗಿ ಆಸಕ್ತರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಚುಚ್ಚುಮದ್ದುಗಳು ಲಭ್ಯವಿರುವಂತೆ ಮಾಡಲಾಗಿತ್ತು. ಹಾಗಾಗಿ ಸಿಕ್ಕಿಂನಷ್ಟು ಹೆಚ್ಚು ಜನರನ್ನು ತಲುಪಲು ಆಗಲಿಲ್ಲ ಎಂದು ಡಾ. ಅರೋರ ವಿವರಿಸಿದ್ದಾರೆ.

ಸಿಕ್ಕಿಂ ಮಾದರಿಯನ್ನು ಗಮನದಲ್ಲಿ ಇರಿಸಿಕೊಂಡು, ಮೊದಲಿಗೆ ನಿಗದಿತ ವಯೋಮಾನದ ಬಾಲಕಿಯರಿಗೆ ಅಭಿಯಾನದ ಮೂಲಕ ಲಸಿಕೆಯನ್ನು ನೀಡಬೇಕಾಗುತ್ತದೆ. ನಂತರದ ವರ್ಷಗಳಲ್ಲಿ ಮಕ್ಕಳ ಉಳಿದೆಲ್ಲಾ ಲಸಿಕೆಗಳ ಜೊತೆಯಲ್ಲಿ ಇದನ್ನೂ ಜಾರಿಗೆ ತರುವುದು ಸೂಕ್ತ. ಪ್ರಾಥಮಿಕ ಶಾಲೆಗೆ ಹೋಗುವ ಬಾಲಕಿಯರನ್ನು ನಾವು ತಲುಪುವುದು ಅಗತ್ಯವಾಗಿರುವುದರಿಂದ ಇವುಗಳನ್ನು ಶಾಲೆಗಳ ಮುಖಾಂತರವೂ ಜಾರಿಮಾಡಬಹುದು. ಹೆಚ್ಚಿನ ಪ್ರದೇಶಗಳಲ್ಲಿ ಪ್ರಾಥಮಿಕ ಶಾಲೆಗಳ ದಾಖಲಾಗಿ ಶೇ. ೯೦ರಷ್ಟಿದೆ. ಆದರೆ ಶಾಲೆಗೆ ಹೋಗದ ಹೆಣ್ಣುಮಕ್ಕಳ ಸಂಖ್ಯೆಯೂ ಸಾಕಷ್ಟು ಇರುವುದರಿಂದ, ಶಾಲೆಗಳ ಆಚೆಯೂ ನಾವು ಕೆಲಸ ಮಾಡಬೇಕಾಗುತ್ತದೆ ಎಂಬುದು ಡಾ. ಅರೋರ ಅವರ ಅಭಿಪ್ರಾಯ.

ಇದನ್ನೂ ಓದಿ: Cancer survivor | 12 ಬಾರಿ ಕ್ಯಾನ್ಸರ್‌ ಬಂದರೂ ಎಲ್ಲರಂತೆ ಜೀವನ ನಡೆಸುತ್ತಿರುವ ಗಟ್ಟಿಗಿತ್ತಿ!

Exit mobile version