Site icon Vistara News

Chamoli Landslide: ಭೀಕರ ಭೂ ಕುಸಿತ; ಕೂದಲೆಳೆ ಅಂತರದಿಂದ ಪಾರಾದ ಕಾರ್ಮಿಕರು: ಇಲ್ಲಿದೆ ಮೈ ಜುಮ್ಮೆನಿಸುವ Video

Chamoli Landslide

Chamoli Landslide

ಡೆಹ್ರಾಡೂನ್‌: ಉತ್ತರಾಖಂಡದ ಚಮೋಲಿಯಲ್ಲಿ ಇಂದು (ಗುರುವಾರ) ಭೀಕರ ಭೂಕುಸಿತ ಸಂಭವಿಸಿದ್ದು, ಬದ್ರಿನಾಥ್ (Badrinath) ಹೆದ್ದಾರಿಯನ್ನು ದುರಸ್ತಿ ಪಡಿಸುತ್ತಿದ್ದ ಕಾರ್ಮಿಕರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಸದ್ಯ ಈ ಭೀಕರ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ (Chamoli Landslide).

ಇತ್ತೀಚೆಗೆ ಮಣ್ಣು ಜರಿದು ಬದ್ರಿನಾಥ್ ಹೆದ್ದಾರಿಗೆ ಬಿದ್ದಿದ್ದು, ಇದನ್ನು ತೆರವುಗೊಳಿಸುವ ವೇಳೆ ಈ ಘಟನೆ ನಡೆದಿದೆ. ಬಂಡೆಗಳು ಕೆಳಗೆ ಜಾರುತ್ತಿರುವುದನ್ನು ನೋಡಿದ ಕಾರ್ಮಿಕರು ಬೆಟ್ಟದಿಂದ ಕೆಳಗೆ ಧಾವಿಸಿದ್ದರಿಂದ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಇಂದು ಮಳೆಯಾಗದಿದ್ದರೂ ಬೃಹತ್‌ ಪ್ರಮಾಣದಲ್ಲಿ ಮಣ್ಣು ಜರಿದು ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ವಿಡಿಯೊ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಕಾರ್ಮಿಕರು ಅಕ್ಷರಶಃ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ ಎಂದು ಉದ್ಘರಿಸಿದ್ದಾರೆ.

ಎರಡು ಪ್ರಮುಖ ಭೂಕುಸಿತ

ಈ ಹಿಂದೆ ಭಾರೀ ಮಳೆಯಿಂದಾಗಿ ಚಮೋಲಿಯಲ್ಲಿ ಸಂಭವಿಸಿದ ಎರಡು ಪ್ರಮುಖ ಭೂಕುಸಿತಗಳ ನಂತರ ಯಾತ್ರಾ ಸ್ಥಳವಾದ ಬದ್ರಿನಾಥ್ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು 48 ಗಂಟೆಗಳ ಕಾಲ ಮುಚ್ಚಲಾಗಿದೆ. ಹೀಗಾಗಿ ರಸ್ತೆಯಲ್ಲಿ ಜೆಸಿಬಿ ಮೂಲಕ ಕಾಮಗಾರಿ ನಡೆಸಲಾಗುತ್ತಿತ್ತು. ಪಾತಾಳಗಂಗಾದಲ್ಲಿ ಭೂಕುಸಿತ ಸಂಭವಿಸಿದ ಕಾರಣ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯ ಸುರಂಗದ ಭಾಗ ಹಾನಿಗೊಳಗಾಗಿದೆ ಮತ್ತು ಹೆದ್ದಾರಿ ಮುಚ್ಚಿದೆ.

ಇಂದು ಬೆಳಿಗ್ಗೆ ಪಾತಾಳಗಂಗಾದಲ್ಲಿ ಹೆದ್ದಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಆದರೆ ಜೋಶಿಮಠ್ ಬಳಿಯ ಭೂಕುಸಿತದಿಂದ ಪಾತಾಳಗಂಗಾ ಲಾಂಗ್ಸಿ ಸುರಂಗ ಮುಚ್ಚಿದೆ. “ಜೋಶಿಮಠದ ಭನೇರ್ಪಾನಿಯಲ್ಲಿ ರಸ್ತೆಯ ಮೇಲೆ ಬೆಟ್ಟದಿಂದ ಭಾರಿ ಗಾತ್ರದ ಬಂಡೆಗಳು ಬಿದ್ದ ಕಾರಣ ಬದ್ರಿನಾಥ್‌ ಹೆದ್ದಾರಿ 7ರಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ” ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಹಿಮಾಂಶು ಖುರಾನಾ ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.

ಆದಾಗ್ಯೂ ಪ್ರಯಾಣಿಕರು ಕಾಲ್ನಡಿಗೆಯಲ್ಲಿ ಈ ಪ್ರದೇಶವನ್ನು ದಾಟಬಹುದು. ರಾಜ್ಯ ಪೊಲೀಸರು ಹಂಚಿಕೊಂಡಿರುವ ವಿಡಿಯೊದಲ್ಲಿ ವಿಪತ್ತು ಪ್ರತಿಕ್ರಿಯೆ ಪಡೆಯ ಸಿಬ್ಬಂದಿ ಭಾಗಶಃ ಕೊಚ್ಚಿಹೋದ ರಸ್ತೆಯನ್ನು ದಾಟಲು ಪ್ರಯಾಣಿಕರಿಗೆ ಸಹಾಯ ಮಾಡುತ್ತಿರುವುದು ಕಂಡು ಬಂದಿದೆ. ಈ ಪ್ರದೇಶದಲ್ಲಿ ಪದೇ ಪದೆ ಭೂಕುಸಿತ ಸಂಭವಿಸುತ್ತಿರುವುದರಿಂದ, ಪ್ರಯಾಣಕ್ಕೆ ಅನುಕೂಲವಾಗುವಂತೆ ಕೆಲವು ವರ್ಷಗಳ ಹಿಂದೆ ಸುರಂಗವನ್ನು ನಿರ್ಮಿಸಲಾಯಿತು.

ಭೂಕುಸಿತದಿಂದಾಗಿ ಸದ್ಯ ಬದ್ರಿನಾಥ್‌, ಜೋಶಿಮಠ, ನಿತಿ, ಮಾನಾ, ತಪೋವನ್, ಮಲರಿ, ಲತಾ, ರೈನಿ, ಪಾಂಡುಕೇಶ್ವರ ಮತ್ತು ಹೇಮಕುಂಡ್ ಸಾಹಿಬ್ ಸಂಪರ್ಕ ಕಡಿತಗೊಂಡಿದೆ. ಬದ್ರಿನಾಥ್‌ ಮತ್ತು ಹೇಮಕುಂಡ್ ಸಾಹಿಬ್‌ಗೆ ಹೋಗುವ ಅಥವಾ ಹಿಂದಿರುಗುವ 2,000ಕ್ಕೂ ಹೆಚ್ಚು ಪ್ರಯಾಣಿಕರು ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದಾರೆ. ಜೋಶಿಮಠದಲ್ಲಿ ರಸ್ತೆಯನ್ನು ತೆರವುಗೊಳಿಸುತ್ತಿರುವ ಬಾರ್ಡರ್ ರೋಡ್ ಆರ್ಗನೈಸೇಶನ್ (BRO) ಅವಶೇಷಗಳನ್ನು ತೆಗೆದುಹಾಕಲು 241 ಯಂತ್ರಗಳನ್ನು ನಿಯೋಜಿಸಿದೆ.

ಇದನ್ನೂ ಓದಿ: Heavy Rainfall: ಸಿಕ್ಕಿಂನಲ್ಲಿ ಭಾರೀ ಮಳೆ, ಪ್ರವಾಹ: 6 ಮಂದಿ ಸಾವು, ಭೂಕುಸಿತದಿಂದ ಸಂಪರ್ಕ ಕಡಿತ

ಮಳೆ ಮತ್ತು ಭೂಕುಸಿತದಿಂದಾಗಿ ಉತ್ತರಾಖಂಡದಲ್ಲಿ ಒಟ್ಟು 260ಕ್ಕೂ ಹೆಚ್ಚು ರಸ್ತೆಗಳನ್ನು ಮುಚ್ಚಲಾಗಿದೆ. ಐದು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಚಾರ್‌ಧಾಮ್‌ ಯಾತ್ರಾರ್ಥಿಗಳಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.

Exit mobile version