Site icon Vistara News

Chandrababu Naidu: ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ; ಚಂದ್ರಬಾಬು ನಾಯ್ಡು ಘೋಷಣೆ

Chandrababu Naidu

Chandrababu Naidu

ಅಮರಾವತಿ: ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗು ದೇಶಂ ಪಾರ್ಟಿ (TDP) ಭರ್ಜರಿ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ನಾಳೆ (ಜೂನ್‌ 12) ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕಾಗಿ ಸಿದ್ಧತೆ ನಡೆಸಲಾಗಿದೆ. ಈ ಮಧ್ಯೆ ಮಂಗಳವಾರ ವಿಜಯವಾಡದಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರು, ಅಮರಾವತಿ (Amaravati)ಯನ್ನು ಆಂಧ್ರ ಪ್ರದೇಶದ ರಾಜಧಾನಿಯನ್ನಾಗಿ ಘೋಷಿಸಿದರು. ಈ ಬಾರಿ ಆಂಧ್ರ ಪ್ರದೇಶದಲ್ಲಿ ಟಿಡಿಪಿ, ಬಿಜೆಪಿ ಮತ್ತು ಜೆಎಸ್‌ಪಿ ಒಟ್ಟಾಗಿ ಚುನಾವಣೆ ಎದುರಿಸಿದ್ದವು.

ಎ-ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಟಿಡಿಪಿ, ಬಿಜೆಪಿ ಮತ್ತು ಪವನ್‌ ಕಲ್ಯಾಣ ನೇತೃತ್ವದ ಜನಸೇನಾ ಪಾರ್ಟಿ(JSP)ಯ ಶಾಸಕರು ಪಾಲ್ಗೊಂಡಿದ್ದರು. ಈ ವೇಳೆ ಮುಖ್ಯಮಂತ್ರಿ ಹುದ್ದೆಗೆ ಚಂದ್ರಬಾಬು ನಾಯ್ಡು ಅವರ ಹೆಸರನ್ನು ಪವನ್‌ ಕಲ್ಯಾಣ ಪ್ರಸ್ತಾಪಿಸಿದರು. ಇದಕ್ಕೆ ಬಿಜೆಪಿಯ ಡಿ.ಪುರಂದರೇಶ್ವರಿ ಬೆಂಬಲ ಸೂಚಿಸಿದರು. ಬಳಿಕ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ ಚಂದ್ರಬಾಬು ನಾಯ್ಡು ಅವರು, ʼʼಅಮರಾವತಿ ಆಂಧ್ರ ಪ್ರದೇಶದ ರಾಜಧಾನಿಯಾಗಲಿದೆ. ನಾವು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕೆಲವು ಭಾಗಗಳನ್ನು ಮಾತ್ರವಲ್ಲ ಇಡೀ ರಾಜ್ಯದ ಏಳಿಗೆಗೆ ಕೊಡುಗೆ ನೀಡುತ್ತೇವೆʼʼ ಎಂದು ಅವರು ಭರವಸೆ ನೀಡಿದರು.

ಈ ಮೂಲಕ ನಿರ್ಗಮಿತ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು. ವೈಎಸ್‌ಆರ್‌ಸಿಪಿ ಮುಖಂಡ, ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರು ಈ ಹಿಂದೆ ವಿಶಾಖಪಟ್ಟಣಂ ಅನ್ನು ಆಡಳಿತಾತ್ಮಕ ರಾಜಧಾನಿಯಾಗಿ ಅಭಿವೃದ್ಧಿಪಡಿಸುವುದಾಗಿ ಮತ್ತು ಅಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಹೇಳಿದ್ದರು. ಇದನ್ನು ಪ್ರಸ್ತಾವಿಸಿದ ಚಂದ್ರಬಾಬು ನಾಯ್ಡು, ವಿಶಾಖಪಟ್ಟಣಂನಲ್ಲಿ ವೈಎಸ್‌ಆರ್‌ಸಿಪಿಯನ್ನು ಸೋಲಿಸುವ ಮೂಲಕ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು. ಜಗನ್‌ ಮೋಹನ್‌ ರೆಡ್ಡಿ ಅವರು ಅಮರಾವತಿಯನ್ನು ಶಾಸಕಾಂಗ ರಾಜಧಾನಿಯಾಗಿ, ವಿಶಾಖಪಟ್ಟಣಂ ಅನ್ನು ಆಡಳಿತಾತ್ಮಕ ರಾಜಧಾನಿಯಾಗಿ ಮತ್ತು ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿಯನ್ನಾಗಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ವಿಕೇಂದ್ರೀಕೃತ ಅಭಿವೃದ್ಧಿಯ ಕಲ್ಪನೆಯನ್ನು ಹುಟ್ಟು ಹಾಕಿದ್ದರು.

ಸರ್ಕಾರದ ಧ್ಯೇಯವಾಕ್ಯ ‘ರಾಜ್ಯ ಮೊದಲು’ ಎಂದು ಚಂದ್ರಬಾಬು ನಾಯ್ಡು ತಿಳಿಸಿದರು. “ನಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ನಮಗೆ ತಿಳಿದಿಲ್ಲ. ನಮ್ಮ ರಾಜ್ಯದ ಸಾಲ ಏನು, ಹಣವನ್ನು ಎಲ್ಲಿಂದ ಎರವಲು ಪಡೆಯಲಾಗಿದೆ ಮತ್ತು ಯಾವುದನ್ನು ಅಡಮಾನ ಇಡಲಾಗಿದೆ ಎಂಬುದೂ ತಿಳಿದಿಲ್ಲ. ಆದರೆ ನಾವು ‘ರಾಜ್ಯ ಮೊದಲು’ ಎಂಬ ಧ್ಯೇಯವಾಕ್ಯದೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಸರ್ವಾಂಗೀಣ ಅಭಿವೃದ್ಧಿಯ ಗುರಿಯನ್ನು ಹೊಂದಿದ್ದೇವೆ” ಎಂದು ಭರವಸೆ ನೀಡಿದರು.

ಇದನ್ನೂ ಓದಿ: Modi 3.0 Government: ನರೇಂದ್ರ ಮೋದಿ ಮುಂದೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಇಟ್ಟಿರುವ ಬೇಡಿಕೆಗಳು ಇಷ್ಟು!

ಮೋದಿ ಭಾಗಿ

ಜೂ. 12ರಂದು ಆಯೋಜಿಸಿರುವ ಆಂಧ್ರಪ್ರದೇಶ ಮತ್ತು ಒಡಿಶಾ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 164 ಸ್ಥಾನಗಳನ್ನು ಗೆದ್ದುಕೊಂಡಿದೆ.

Exit mobile version