Site icon Vistara News

Chandrababu Naidu: ಆಂಧ್ರ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಮುಂದೂಡಿಕೆ

Chandrababu Naidu

Chandrababu Naidu

ಅಮರಾವತಿ: ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗು ದೇಶಂ ಪಾರ್ಟಿ (TDP) ಅಭೂತಪೂರ್ವ ಸಾಧನೆ ಮಾಡಿದ್ದು, ಒಟ್ಟು 175 ಸ್ಥಾನಗಳ ಪೈಕಿ 135 ಕಡೆ ಜಯಗಳಿಸಿ ಬಹುಮತ ಗಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜೂನ್‌ 9ರಂದು ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಲು ಚಂದ್ರಬಾಬು ನಾಯ್ಡು ನಿರ್ಧರಿಸಿದ್ದರು. ಆದರೆ ಇದೀಗ ಪ್ರಮಾಣ ವಚನ ಕಾರ್ಯಕ್ರಮವನ್ನು ಮುಂದೂಡಲು ತೀರ್ಮಾನಿಸಲಾಗಿದ್ದು, ಜೂನ್‌ 12ಕ್ಕೆ ಹೊಸ ದಿನಾಂಕವನ್ನು ನಿಗದಿ ಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾರಣವೇನು?

ಚಂದ್ರಬಾಬು ನಾಯ್ಡು ಅವರು ಜೂನ್ 9ರಂದು ಅಮರಾವತಿಯಲ್ಲಿ ಪ್ರಮಾಣವಚನ ಸ್ವೀಕರಿಸಬೇಕಿತ್ತು. ಆದರೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿರುವುದರಿಂದ ಚಂದ್ರಬಾಬು ಪ್ರಮಾಣ ವಚನ ಸ್ವೀಕಾರ ಮೂರು ದಿನ ತಡವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಅಮರಾವತಿಯಲ್ಲಿಯೇ ಕಾರ್ಯಕ್ರಮ ನಡೆಯಲಿದೆ.

ಟಿಡಿಪಿಗೆ ಸೈ ಎಂದ ಮತದಾರರು

ಟಿಡಿಪಿ ಈ ಬಾರಿ ಬಿಜೆಪಿ ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (JSP) ಜತೆಗೂಡಿ ಚುನಾವಣೆ ಎದುರಿಸಿತ್ತು. ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಈ ಮೂರು ಪಕ್ಷಗಳ ನಡುವೆ ಒಪ್ಪಂದ ನಡೆದಿತ್ತು. ಅದರಂತೆ ಟಿಡಿಪಿ 144, ಜನಸೇನಾ ಪಾರ್ಟಿ 21 ಮತ್ತು ಬಿಜೆಪಿ 10 ಕಡೆ ಸ್ಪರ್ಧಿಸಿದ್ದವು. ಈ ಪೈಕಿ ಟಿಡಿಪಿ 135 ಸ್ಥಾನಗಳನ್ನು ಪಡೆದುಕೊಂಡಿದೆ. ಜನಸೇನಾ 21 ಮತ್ತು ಬಿಜೆಪಿ 8 ಕಡೆ ಜಯ ದಾಖಲಿಸಿದೆ. ಒಟ್ಟಿನಲ್ಲಿ ಟಿಡಿಪಿ, ಜನಸೇನೆ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ 164 ಸ್ಥಾನ ಲಭಿಸಿದೆ. ಇತ್ತ ಆಡಳಿತರೂಢ ವೈಎಸ್‌ಆರ್‌ಸಿಪಿ ಕೇವಲ 8 ಸ್ಥಾನಗಳಿಗೆ ಸೀಮಿತವಾಗಿದೆ. ಆಂಧ್ರ ಪ್ರದೇಶ ವಿಧಾನಸಭೆಗೆ ಅಗತ್ಯವಾದ ಮ್ಯಾಜಿಕ್‌ ನಂಬರ್‌ 88.

ಎನ್‌ಡಿಎಗೆ ಬೆಂಬಲ ಸೂಚಿಸಿದ ಟಿಡಿಪಿ

ಇನ್ನು ಆಂಧ್ರ ಪ್ರದೇಶದಲ್ಲಿರುವ 25 ಲೋಕಸಭಾ ಸೀಟುಗಳ ಪೈಕಿ ಟಿಡಿಪಿ 16 ಕಡೆ ಗೆಲುವು ಸಾಧಿಸಿದೆ. ಇಲ್ಲಿ ಟಿಡಿಪಿಯ ಮಿತ್ರಪಕ್ಷಗಳಾದ ಬಿಜೆಪಿ 3 ಮತ್ತು ಜನಸೇನಾ ಪಕ್ಷ 2 ಕ್ರೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿರುವ ಟಿಡಿಪಿ ಕಿಂಗ್‌ ಮೇಕರ್‌ ಆಗಿದ್ದು, ಚಂದ್ರಬಾಬು ನಾಯ್ಡು ಎನ್‌ಡಿಎ ಸರ್ಕಾರ ರಚನೆಗೆ ಬೆಂಬಲ ಸೂಚಿಸಿದ್ದಾರೆ. ಬುಧವಾರ ಬದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಭಾಗವಹಿಸಿದ್ದ ಅವರು ನರೇಂದ್ರ ಮೋದಿ ಅವರೊಂದಿಗೆ ಇರುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: NDA Meeting: ಎನ್‌ಡಿಎಗೆ ಮೋದಿಯೇ ಸಾರಥಿ ಎಂದು ಸಭೆ ತೀರ್ಮಾನ; ಶೀಘ್ರವೇ ಸರ್ಕಾರ ರಚಿಸಲು ಹಕ್ಕುಮಂಡನೆ

ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆಯಿತು. ತೆಲುಗುದೇಶಂ ಪಕ್ಷ, ಸಂಯುಕ್ತ ಜನತಾದಳದ ನಿತೀಶ್‌ ಕುಮಾರ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌, ಆರ್‌ಎಲ್‌ಡಿಯ ಜಯಂತ್‌ ಚೌಧರಿ, ಜನಸೇನಾ ಪಕ್ಷದ ಪವನ್‌ ಕಲ್ಯಾಣ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಎಲ್ಲರೂ ಒಗ್ಗೂಡಿ ಸರ್ಕಾರ ರಚಿಸುವುದು, ಒಗ್ಗಟ್ಟಿನಿಂದ ಇರುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

Exit mobile version