ಹೈದರಾಬಾದ್: ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಬಂಧಿತರಾಗಿ ಜೈಲುಪಾಲಾಗಿದ್ದ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು (Chandrababu Naidu) ಅವರಿಗೆ ಆರೋಗ್ಯದ ಆಧಾರದ ಮೇಲೆ ಆಂಧ್ರಪ್ರದೇಶ ಹೈಕೋರ್ಟ್ (Andhra Pradesh High Court) 4 ವಾರಗಳ ಮಧ್ಯಂತರ ಜಾಮೀನು ನೀಡಿದೆ.
ನಾಯ್ಡು ಪರ ವಕೀಲರು, ಮಾಜಿ ಮುಖ್ಯಮಂತ್ರಿ ಅವರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಲಯವು ಅವರ ಸಾಮಾನ್ಯ ಜಾಮೀನು ಅರ್ಜಿಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.
ಎರಡು ಶ್ಯೂರಿಟಿಗಳೊಂದಿಗೆ ₹1 ಲಕ್ಷದ ಜಾಮೀನು ಬಾಂಡ್ ಅನ್ನು ಟಿಡಿಪಿ ಮುಖ್ಯಸ್ಥರು ಒದಗಿಸುವಂತೆ ಪೀಠವು ನಿರ್ದೇಶಿಸಿದೆ. “ಅವರು ತಮ್ಮ ವೆಚ್ಚದಲ್ಲಿ ತಮ್ಮ ಆಯ್ಕೆಯ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಗಾಗಬೇಕು ಮತ್ತು ಚಿಕಿತ್ಸೆ ಪಡೆಯಬೇಕು” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ. ನಾಯ್ಡು ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ತೆಲುಗು ದೇಶಂ ಪಕ್ಷದ ವಕ್ತಾರ ಕೆ.ಪಟ್ಟಾಭಿ ರಾಮ್ ತಿಳಿಸಿದ್ದಾರೆ. “ಕಳೆದ ಕೆಲವು ದಿನಗಳಿಂದ ಚಂದ್ರಬಾಬು ನಾಯ್ಡು ಅವರ ಆರೋಗ್ಯವು ಕ್ಷೀಣಿಸುತ್ತಿರುವುದು ಕಂಡುಬಂದಿದೆ. ವೈದ್ಯರು ತಕ್ಷಣ ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು ತಕ್ಷಣ ಆಸ್ಪತ್ರೆಗೆ ಸೇರಿಸಲು ಸಲಹೆ ನೀಡಿದ್ದಾರೆ” ಎಂದು ರಾಮ್ ಹೇಳಿದರು.
ನಾಯ್ಡು ಅವರು ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿರುವ ₹3,300 ಕೋಟಿಯ ಆಂಧ್ರಪ್ರದೇಶ ಕೌಶಲ್ಯ ಅಭಿವೃದ್ಧಿ ನಿಗಮ (ಎಪಿಎಸ್‌ಎಸ್‌ಡಿಸಿ) ಹಗರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 9ರಂದು ಅವರನ್ನು ಬಂಧಿಸಲಾಗಿತ್ತು. ಅಂದು ಪೊಲೀಸರು ಮುಂಜಾನೆ 3 ಗಂಟೆಗೆ ನಾಯ್ಡು ಅವರ ಮನೆಗೆ ಬಂದಾಗ ಅವರ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರಿಂದ ಅವರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಸುಮಾರು ಮೂರು ಗಂಟೆಗಳ ನಂತರ ಅವರನ್ನು ವಶಕ್ಕೆ ಪಡೆಯಲಾಯಿತು.
ಈ ವರ್ಷದ ಮಾರ್ಚ್‌ನಲ್ಲಿ ಆಂಧ್ರ ಪ್ರದೇಶ ಪೊಲೀಸ್‌ನ ಅಪರಾಧ ತನಿಖಾ ವಿಭಾಗ (ಸಿಐಡಿ) ಪ್ರಕರಣದ ತನಿಖೆಯನ್ನು ಆರಂಭಿಸಿತ್ತು. ತನಿಖೆಯು 2016ರಲ್ಲಿ ಎಪಿಎಸ್‌ಎಸ್‌ಡಿಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದ ಭಾರತೀಯ ರೈಲ್ವೆ ಸಂಚಾರ ಸೇವೆಯ ಮಾಜಿ ಅಧಿಕಾರಿ ಅರ್ಜಾ ಶ್ರೀಕಾಂತ್‌ಗೆ ನೋಟಿಸ್ ನೀಡಿ, ಆರೋಪಿಯ ಹೇಳಿಕೆಗಳ ಆಧಾರದ ಮೇಲೆ ಮತ್ತು ಮೂವರು ಐಎಎಸ್ ಅಧಿಕಾರಿಗಳ ಹೇಳಿಕೆಗಳ ಆಧಾರದ ಮೇಲೆ ತನಿಖೆ ನಡೆಸಲಾಗಿದೆ.
ನಿರುದ್ಯೋಗಿ ಯುವಕರ ಸಬಲೀಕರಣ ಮತ್ತು ಅವರ ಉದ್ಯೋಗಕೌಶಲ ಹೆಚ್ಚಿಸಲು ಕೌಶಲ್ಯ ತರಬೇತಿ ನೀಡಲು 2016ರಲ್ಲಿ APSSDC ಅನ್ನು ಸ್ಥಾಪಿಸಲಾಯಿತು. ಸಿಐಡಿ ತನಿಖೆಯ ಪ್ರಕಾರ, ಅಂದಿನ ಚಂದ್ರಬಾಬು ನಾಯ್ಡು ಸರ್ಕಾರ ₹3,300 ಕೋಟಿ ಮೌಲ್ಯದ ಯೋಜನೆ ತಿಳಿವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿತ್ತು. ಈ ಒಪ್ಪಂದವು ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಲಿಮಿಟೆಡ್ ಮತ್ತು ಡಿಸೈನ್ ಟೆಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ನಡೆದಿತ್ತು.
ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಲಿಮಿಟೆಡ್ ಕೌಶಲ್ಯ ಅಭಿವೃದ್ಧಿಗಾಗಿ ಆರು ಕೇಂದ್ರಗಳನ್ನು ಸ್ಥಾಪಿಸಲಿದೆ. ಆಂಧ್ರ ಸರ್ಕಾರವು ಒಟ್ಟು ಯೋಜನಾ ವೆಚ್ಚದ ಶೇಕಡಾ ಹತ್ತರಷ್ಟು ಕೊಡುಗೆ ನೀಡಬೇಕಿತ್ತು. ಉಳಿದ ಹಣವನ್ನು ಎರಡು ಕಂಪನಿಗಳು ಸಹಾಯಧನವಾಗಿ ನೀಡುತ್ತವೆ. ಸಿಐಡಿ ತನಿಖೆಯ ಪ್ರಕಾರ, ಪ್ರಮಾಣಿತ ಟೆಂಡರ್ ಪ್ರಕ್ರಿಯೆಯನ್ನು ಅನುಸರಿಸದೆ ಯೋಜನೆಯನ್ನು ಪ್ರಾರಂಭಿಸಲಾಗಿದೆ. ರಾಜ್ಯ ಸಚಿವ ಸಂಪುಟ ಯೋಜನೆಗೆ ಒಪ್ಪಿಗೆ ನೀಡಿರಲಿಲ್ಲ ಎನ್ನಲಾಗಿದೆ.
ಸಿಐಡಿ ತನಿಖೆ ಪ್ರಕಾರ ಸೀಮೆನ್ಸ್ ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ತನ್ನ ಸ್ವಂತ ಸಂಪನ್ಮೂಲಗಳನ್ನು ಯೋಜನೆಯಲ್ಲಿ ಹೂಡಿಕೆ ಮಾಡಲು ವಿಫಲವಾಗಿದೆ. ಮತ್ತು ಅಂದಿನ ಸರ್ಕಾರ ನಕಲಿ ಕಂಪನಿಗಳಿಗೆ ₹371 ಕೋಟಿಯಷ್ಟು ಹಣವನ್ನು ನೀಡಿದೆ ಎಂದು ತೋರಿಸಿದೆ.
ಇದನ್ನೂ ಓದಿ: Koppala News: ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಅ.1ರಂದು ಬೃಹತ್ ವಾಹನ ರ‍್ಯಾಲಿ