ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಎನ್.ಚಂದ್ರಬಾಬು ನಾಯ್ಡು (Chandrababu Naidu) ಅವರು ಬುಧವಾರ (ಜೂನ್ 12) ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಕೂಡ ಭಾಗಿಯಾಗಿದ್ದರು. ನರೇಂದ್ರ ಮೋದಿ ಅವರನ್ನು ವೇದಿಕೆಗೆ ಸ್ವಾಗತಿಸಿದ ಚಂದ್ರಬಾಬು ನಾಯ್ಡು ಅವರು, ಪ್ರಧಾನಿಗೆ ಹೂಗುಚ್ಛ ನೀಡಿದರು. ಇದಾದ ಬಳಿಕ ನರೇಂದ್ರ ಮೋದಿ (Narendra Modi) ಅವರ ಕಾಲು ಮುಟ್ಟಿ ನಮಸ್ಕರಿಸಲು ಮುಂದಾದರು. ಈ ವಿಡಿಯೊ ಈಗ ಭಾರಿ ವೈರಲ್ ಆಗಿದೆ.
ಚಂದ್ರಬಾಬು ನಾಯ್ಡು ಅವರು ನರೇಂದ್ರ ಮೋದಿ ಅವರಿಗಿಂತ ಒಂದು ವರ್ಷ ದೊಡ್ಡವರು. ಹೀಗಿದ್ದರೂ ಮೋದಿ ಅವರ ಮೇಲಿನ ಗೌರವದಿಂದಾಗಿ ಅವರ ಕಾಲು ಮುಟ್ಟಿ ನಮಸ್ಕರಿಸಲು ಚಂದ್ರಬಾಬು ನಾಯ್ಡು ಮುಂದಾದರು. ಆದರೆ, ಇದಕ್ಕೆ ನರೇಂದ್ರ ಮೋದಿ ಅವರು ಅವಕಾಶ ಕೊಡದೆ, ಚಂದ್ರಬಾಬು ನಾಯ್ಡು ಅವರನ್ನು ತಬ್ಬಿಕೊಂಡು, ನೂತನ ಸರ್ಕಾರಕ್ಕೆ ಶುಭ ಹಾರೈಸಿದರು. ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಚಂದ್ರಬಾಬು ನಾಯ್ಡು ಅವರ ಟಿಡಿಪಿಯು ಬೆಂಬಲ ಸೂಚಿಸಿದೆ.
#WATCH | Vijayawada: Andhra Pradesh Chief Minister, N Chandrababu Naidu hugs Prime Minister Narendra Modi, after taking the oath. pic.twitter.com/35NLmYvF0q
— ANI (@ANI) June 12, 2024
ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ನಟ, ಪವನ್ ಕಲ್ಯಾಣ್ ಸಹೋದರ ಚಿರಂಜೀವಿ, ತಮಿಳು ನಟ ರಜನಿಕಾಂತ್, ನಂದಮೂರಿ ಬಾಲಕೃಷ್ಣ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.
ನಿತೀಶ್ ಕೂಡ ಹೀಗೆಯೇ ಮಾಡಿದ್ದರು
ಕೆಲ ದಿನಗಳ ಹಿಂದೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಕೂಡ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸಲು ಮುಂದಾಗಿದ್ದರು. ಸಂಸದೀಯ ಪಕ್ಷದ ಸಭೆಯಲ್ಲಿ ರಾಜನಾಥ್ ಸಿಂಗ್ ಅವರು ನರೇಂದ್ರ ಮೋದಿ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕ ಎಂಬುದಾಗಿ ಪ್ರಸ್ತಾಪಿಸಿದರು. ಇದಕ್ಕೆ, ಎನ್‌ಡಿಎ ಮೈತ್ರಿಕೂಟದ ಸದಸ್ಯರೆಲ್ಲರೂ ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಇದಾದ ಬಳಿಕ ನಿತೀಶ್ ಕುಮಾರ್ ಅವರು ನರೇಂದ್ರ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸಲು ಮುಂದಾದರು. ಆಗ ಮೋದಿ ಅವರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ನರೇಂದ್ರ ಮೋದಿ ಅವರಿಗೆ 73 ವರ್ಷ ವಯಸ್ಸಾಗಿದ್ದರೆ, ನಿತೀಶ್ ಕುಮಾರ್ ಅವರು ವಯಸ್ಸು ಕೂಡ 73 ವರ್ಷವಾಗಿದೆ. ಇಬ್ಬರೂ ಸಮಕಾಲೀನ ನಾಯಕರಾಗಿದ್ದಾರೆ.
ಇದನ್ನೂ ಓದಿ: Shah Rukh Khan: ಶಾರುಖ್ ಖಾನ್ ಕಾಲು ಮುಟ್ಟಿ ನಮಸ್ಕರಿಸಿದ ಖ್ಯಾತ ನಿರ್ದೇಶಕ!