| ಮಧು ವೈ ಎನ್
ಭಾರತದ ಚಂದ್ರಯಾನ 3 (Chandrayaan 3) ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವವನ್ನು ಚುಂಬಿಸಿದೆ. ಆದರೆ, ದಕ್ಷಿಣ ಧ್ರುವಕ್ಕೆ ಯಾಕೆ ಲ್ಯಾಂಡರ್ ಇಳಿಸಲಾಯಿತು ಎಂಬ ಪ್ರಶ್ನೆ ಸಹಜ. ಬಹುತೇಕ ರಾಷ್ಟ್ರಗಳು ಚಂದ್ರನ ಈ ದಕ್ಷಿಣ ಧ್ರುವದ ಮೇಲೆಯ ಆಸಕ್ತಿಯನ್ನು ಹೊಂದಿವೆ. ಅದಕ್ಕೆ ಕಾರಣಗಳೂ ಉಂಟು. ಚಂದ್ರನನ್ನು ನಾವು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಹತ್ತಿರದ ಭಾಗ(near side), ದೂರದ ಭಾಗ(far side), ಉತ್ತರ ಧ್ರುವ (north pole) ಮತ್ತು ದಕ್ಷಿಣ ಧ್ರುವ (south pole). ಈ ನಾಲ್ಕರಲ್ಲಿ ಮನುಷ್ಯರಿಗೆ ಅರ್ಥಾತ್ ಭೂಮಿಗೆ ಕಾಣಿಸುವುದು ಹತ್ತಿರದ ಭಾಗ ಮಾತ್ರ. ಅದಕ್ಕಾಗಿಯೇ ಆ ಹೆಸರು. ಚಂದ್ರ ಭೂಮಿಯೊಂದಿಗೆ ‘ಲಾಕ್’ ಆಗಿದ್ದಾನೆ. ನಮಗೆ ಆತನ ಇನ್ನೊಂದು ಭಾಗ ಎಂದಿಗೂ ಕಾಣಿಸೋದೇ ಇಲ್ಲ. ಇದನ್ನು ಟೈಡಲ್ ಲಾಕ್ ಎಂದು ಕರೆಯುತ್ತಾರೆ. ಇದು ಯಾಕಂದರೆ ಚಂದ್ರ ಭೂಮಿಯ ಸುತ್ತ ಸುತ್ತಲು ತಗೊಳ್ಳುವ ಸಮಯ ಇಪ್ಪತ್ತೇಳು ದಿವಸ(ಅಂದಾಜಿಗೆ ಒಂದು ತಿಂಗಳು ಅಂದುಕೊಳ್ಳಿ). ಹೆಚ್ಚೂಕಮ್ಮಿ ಇಷ್ಟೇ ಸಮಯದಲ್ಲಿ ತನ್ನನ್ನು ತಾನೇ ಒಂದು ಸುತ್ತು ತಿರುಗಿಸಿಕೊಂಡಿರುತ್ತಾನೆ.
ಇದು ಹೇಗೆ ಎಂದು ಕಲ್ಪಿಸಿಕೊಳ್ಳುವುದು ಬಹಳ ಸುಲಭ ಮತ್ತು ಗೊತ್ತಾದಾಗ ರೋಮಾಂಚನ. ಭೂಮಿಯನ್ನು ದೇವರಗುಡಿ ಅಂದುಕೊಳ್ಳಿ. ನೀವು ಅದರ ಸುತ್ತ ಪ್ರದಕ್ಷಿಣೆ ಹಾಕ್ತಿದೀರಿ ಅಂದ್ಕೊಳ್ಳಿ, ಗಡಿಯಾರ ಉಲ್ಟಾ ತಿರುಗಿದ ದಿಕ್ಕಿನಲ್ಲಿ. ನೀವು ಪ್ರದಕ್ಷಿಣೆ ಹಾಕ್ತಿರುವಾಗ ನೀವು ಸಹ ತಿರುಗ್ತಾ ಇರ್ತೀರಿ. ನೀವು ಹಾಗೆ ತಿರುಗದೇ ಇದ್ದಲ್ಲಿ ನೀವು ಪ್ರದಕ್ಷಿಣೆ ಹಾಕ್ತಾ ಆರಂಭದಲ್ಲಿ ಗುಡಿಯ ಕಡೆಗಿದ್ದ ನಿಮ್ಮ ಎಡ ಭುಜ ಗುಡಿಯ ಹಿಂದೆ ಹೋಗುವಷ್ಟರಲ್ಲಿ ವಿರುದ್ಧ ಆಗಿಬಿಟ್ಟು ನಿಮ್ಮ ಬಲ ಭುಜ ಗುಡಿಯ ಕಡೆಗೆ ಇದ್ದುಬಿಡುತ್ತಿತ್ತು!. ಇದೆಲ್ಲ ಆಯಾಚಿತವಾಗಿ ಜರುಗೋದರಿಂದ ನಿಮಗೆ ಗೊತ್ತೇ ಆಗದ ಹಾಗೆ ನೀವೂ ಸಹ ಒಂದು ಸುತ್ತು ನಿಮ್ಮನ್ನು ತಿರುಗಿಸಿಕೊಂಡಿರುತ್ತೀರಿ. ಹೀಗೆ ಚಂದ್ರನ ಬೆನ್ನು (ನಿಮ್ಮ ಬಲ ಭುಜ) ಭೂಮಿಗೆ(ಗುಡಿಗೆ) ಎಂದಿಗೂ ಕಾಣೋದೇ ಇಲ್ಲ. ಇದನ್ನು ತಪ್ಪಾಗಿ dark side ಎಂದು ಸಹ ಕರೆಯುತ್ತಾರೆ. ಅದರ ಅರ್ಥ ಚಂದ್ರನ ಬೆನ್ನು ಕತ್ತಲೆಯಲ್ಲೇ ಇರುತ್ತೆ ಎಂದಲ್ಲ.
ಭೂಮಿ ಸೂರ್ಯನ ಸುತ್ತ ಸುತ್ತಲು ಒಂದು ವರುಷ ತಗೊಳ್ತಾಳೆ ಅಲ್ವ. ಹಾಗಾಗಿ ನೀವು ಗುಡಿಯನ್ನು ಸುತ್ತಲು ಶುರು ಮಾಡಿದಾಗ ಸೂರ್ಯ ಗುಡಿಯ ಎಡಕ್ಕೆ ಇದ್ದಲ್ಲಿ ನೀವು ಒಂದು ಸುತ್ತು ಬರುವುದರೊಳಗೆ ಸೂರ್ಯ ಹೆಚ್ಚೂ ಕಮ್ಮಿ ಅಲ್ಲಿಯೇ ಇರುತ್ತಾನೆ. ಹಂಗಾಗಿ ನಿಮ್ಮ ಪ್ರದಕ್ಷಿಣೆಯ ಕಡೆಯ ಅರ್ಧದಲ್ಲಿ ನಿಮ್ಮ ಬಲಭುಜಕ್ಕೆ ಬಿಸಿಲು ತಾಕುತ್ತದೆ. ಒಂದು ಪ್ರದಕ್ಷಿಣೆ ಹಾಕಲು ನೀವು ಒಂದು ತಿಂಗಳು ತಗೊಂಡಲ್ಲಿ ನಿಮ್ಮ ಎಡಭುಜಕ್ಕೆ ಹದಿನೈದು ದಿವಸ ಬಲಭುಜಕ್ಕೆ ಹದಿನೈದು ದಿವಸ ಬಿಸಿಲು ಸಿಗುತ್ತೆ. ಸೋ ಚಂದ್ರನ ಎರಡೂ ಭಾಗಗಳಿಗೆ ಸಮನಾಗಿ ಬಿಸಿಲು ಬೀಳತ್ತೆ.
ಈಗ ಇನ್ನೊಂದು ಅಂಶ ಸೇರಿಸಿಕೊಳ್ಳಿ. ಗುಡಿ ನಿಂತಲ್ಲೇ ನಿಂತಿದ್ದಲ್ಲಿ ಅದರ ಬಲ ಗೋಡೆ ಯಾವಾಗಲೂ ನೆರಳಲ್ಲಿದ್ದು ಎಡಗೋಡೆ ಯಾವಾಗಲೂ ಬಿಸಿಲಲ್ಲಿರುತ್ತಿತ್ತು ಅಲ್ವ. ಈಗ ಕಲ್ಪಿಸಿಕೊಳ್ಳಿ ನೀವು ಗುಡಿಯ ಸುತ್ತ ಪ್ರದಕ್ಷಿಣೆ ಹಾಕ್ತಿರುವಾಗ ಗುಡಿ ಸಹ ತಿರುಗ್ತಾ ಇರುತ್ತೆ ಅಂತ! ಆದರೆ ಅದು ಎಷ್ಟು ಫಾಸ್ಟಾಗಿ ತಿರುಗುತ್ತೆ ಅಂದರೆ ಇಪ್ಪತ್ನಾಲ್ಕು ಗಂಟೆ ಒಳಗೆ ಒಂದು ರೌಂಡು ತಿರುಗಿಬಿಟ್ಟಿರುತ್ತೆ! ನೀವೇ ನಿಧಾನ ನಿಮಗೆ ಒಂದು ತಿಂಗಳು ಬೇಕು!ಹಂಗಾಗಿ ಚಂದ್ರನ ಎಡ ಬಲ ಭುಜಗಳು ಹದಿನೈದು ದಿವಸಕ್ಕೊಮ್ಮೆ ಬಿಸಿಲು ಪಡೆದರೆ ಭೂಮಿಯು ದಿನಕ್ಕೊಮ್ಮೆ ಎಲ್ಲಾ ಕಡೆ ಬಿಸಿಲು ಪಡೆಯುತ್ತದೆ.
ಇದು ಕೇಳಿದರೆ ಇನ್ನೂ ಮಜ. ನೀವು ಹಾಗೆ ನಿಧಾನವಾಗಿ ಪ್ರದಕ್ಷಿಣೆ ಹಾಕ್ತಿರುವಾಗ ಗರ್ಭಗುಡಿಯಲ್ಲಿ ನಿಮ್ಮ ಮಗಳನ್ನು ನಿಲ್ಲಿಸಿರುತ್ತೀರಿ ಎಂದು ಕೊಳ್ಳಿ. ಅವಳು ನಿಮ್ಮ ಒಂದು ಪ್ರದಕ್ಷಿಣೆ ಸಮಯದಲ್ಲಿ ಇಪ್ಪತ್ತೇಳು ಸಲ ನಿಮಗೆ ಎದುರಾಗಿ ‘ಅಪ್ಪಾ ಟಾಟಾ’ ಅಂದಿರ್ತಾಳೆ!
ಹಾಗೆ ನಿಮ್ಮ ಗುಡಿಯ ಒಂದು ಪ್ರದಕ್ಷಿಣೆಯನ್ನು ಒಂದು ತಿಂಗಳು ಅನ್ನುತ್ತಾರೆ. ಗುಡಿ ತನ್ನ ತಾನೆ ತಿರುಗಿಸಿಕೊಳ್ಳುವುದನ್ನು ಒಂದು ದಿವಸ ಅನ್ನುತ್ತಾರೆ. ನಿಮ್ಮ ಮಗಳು ದಿನಕ್ಕೊಂದು ಸಲ ನಿಮಗೂ ಸೂರ್ಯನಿಗೂ ಟಾಟಾ ಮಾಡ್ತಾಳೆ. ನೀವು ಗುಡಿಯ ಬಲಕ್ಕಿದ್ದಾಗ ನಿಮ್ಮ ಎಡ ಭುಜಕ್ಕೆ ಬಿಸಿಲು ಬೀಳ್ತಿರುತ್ತೆ ಆ ಭುಜ ಭೂಮಿಗೆ ಬೆಳಕು ಕೊಡ್ತಿರುತ್ತೆ, ಅದನ್ನು ಹುಣ್ಣಿಮೆ ಅಂತಾರೆ, ನೀವು ಗುಡಿಯ ಎಡಕ್ಕೆ ಬಂದಾಗ ನೀವು ಸೂರ್ಯನಿಗೆ ಅಡ್ಡ ಬಂದು ಭೂಮಿಗೆ ಕತ್ತಲೆ ಉಂಟು ಮಾಡ್ತೀರಿ ಅದನ್ನು ಅಮವಾಸ್ಯೆ ಅಂತ ಕರಿತಾರೆ. ಇಲ್ಲಿ ಚಂದ್ರನ ನೆರಳು ನೇರ ಭೂಮಿಯ ಮೇಲೆ ಬಿದ್ದರೆ ಅದನ್ನು ಗ್ರಹಣ ಅಂತಾರೆ. ಪ್ರತಿ ಅಮವಾಸ್ಯೆ ಚಂದ್ರನ ನೆರಳು ಭೂಮಿ ಮೇಲೆ ಬೀಳಲ್ಲ, ಚಂದ್ರನ ಬೆನ್ನಿಗೆ ಸೂರ್ಯ ಇದ್ದು ಆತನ ಮುಖ ಕತ್ತಲೆಯಲ್ಲಿರುವುದರಿಂದ ಆತ ನಮಗೆ ಕಾಣಲ್ಲ ಹಾಗಾಗಿ ಅದು ಅಮವಾಸ್ಯೆಯಷ್ಟೇ. ಚಂದ್ರ ಭೂಮಿಯ ಹೊಟ್ಟೆ ಭಾಗದಲ್ಲಿ ಸುತ್ತಲ್ಲ ಸ್ಬಲ್ಪ ಮೇಲೆ ಕೆಳಗೆ ಇರ್ತಾನೆ(ಐದು ಡಿಗ್ರಿ) ಮತ್ತು ಅವನು ಭೂಮಿಗೆ ಹೋಲಿಸಿದರೆ ಬಹಳ ಚಿಕ್ಕವನಿರುವದರಿಂದ ಅಮವಾಸ್ಯೆಯಂದು ಆತನ ನೆರಳು ಭೂಮಿಯ ಕೆಳಗೋ ಮೇಲೋ ಹೋಗಿಬಿಟ್ಟಿರುತ್ತೆ. ಯಾವಾಗ ಆತ ನೇರ ಅಡ್ಡ ಬಂದು ಅವನ ನೆರಳು ಭೂಮಿ ಮೇಲೆ ಬೀಳತ್ತೊ ಅದನ್ನು ಸೂರ್ಯ ಗ್ರಹಣ ಅಂತ ಕರಿತಾರೆ. ಹಾಗೆ ಭೂಮಿ ಸೂರ್ಯನಿಗೆ ಅಡ್ಡ ಬಂದು ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದರೆ ಅದನ್ನು ಚಂದ್ರಗ್ರಹಣ ಅಂತ ಕರಿತಾರೆ.
ಈಗ ಬರೋಣ ದಕ್ಷಿಣ ಧ್ರುವದ ಮೇಲೆಯೇ ಯಾಕೆ ಎಲ್ಲರ ಕಣ್ಣು?
೧. ದಕ್ಷಿಣ ಧ್ರುವದಲ್ಲಿ ನೀರಿನಂಶ ಪತ್ತೆಯಾಗಿದೆ. ಹಾಗಾಗಿ ಅದರ ಮೇಲೆ ಹೆಚ್ಚು ಆಸಕ್ತಿ. ನೀರು ಸಿಕ್ಕಿದರೆ ಮಿಕ್ಕಿದ್ದೆಲ್ಲ ಚಟುವಟಿಕೆ ಸುಲಭ.
೨. ಭೂಮಿಗೆ ವಾಯುಮಂಡಲ ಇದೆ ಚಂದ್ರನಿಗೆ ಇಲ್ಲ. ಈ ವಾಯುಮಂಡಲ ಟೆಲಿಸ್ಕೋಪುಗಳಿಗೆ ಬಹಳ ತೊಂದರೆ ಮಾಡ್ತದೆ. ಅಂತರಿಕ್ಷದ ಸಿಗ್ನಲ್ಲುಗಳಿಗೆ ಅಡ್ಡ ಬರ್ತದೆ. ಹಂಗಾಗೆ ನಾಸಾ ಅಂತರಿಕ್ಷದಲ್ಲೇ ಒಂದು ಟೆಲಿಸ್ಕೋಪು ಇಟ್ಟಿದೆ. ಈಗ ಎಲ್ಲರಿಗೂ ಯಾಕೆ ಚಂದ್ರನ ಮೇಲೆ ಒಂದು ಇಡಬಾರದು ಅಂತ ಆಸೆ. ಅಲ್ಲಿಟ್ಟರೆ ಹೋಗಿ ಬರ್ತಾ ನೋಡ್ಕಂಡು ರಿಪೇರಿ ಮಾಡ್ಕಂಡಿರಬಹುದು. ಚೆನ್ನಾಗಿ ಸಿಗ್ನಲ್ ಪಡೆಯಬಹುದು ಎಂದು. ಮನುಷ್ಯರು ಬೆಟ್ಟದ ಮೇಲೆ ಟವರ್ ಇಟ್ಟಂಗೆ.
೩. ಚಂದ್ರನ ಮುಖ ನಮ್ಮ ಕಡೆ ತಿರುಗಿರೋದರಿಂದ ಅಲ್ಲಿಯೂ ನಮ್ಮಿಂದಲೇ ಒಂದಷ್ಟು ಸಿಗ್ನಲ್ ಪ್ರಾಬ್ಲಂ ಆಗ್ತದೆ. ಅದರ ಉಳಿದ ಮೂರು ಭಾಗಗಳಿಗೆ ನಮ್ಮಿಂದ ಅಂತಹ ಕಾಟ ಇಲ್ಲ.
೪. ಟೆಲಿಸ್ಕೋಪಿನಲ್ಲಿ ಆಕಾಶ ನೋಡಲು ಇರಳು ಇರಬೇಕು. ಭೂಮಿ ಮೇಲೆ ದಿನಕ್ಕೊಂದು ಸಲ ಹಗಲು ಬಂದ್ ಬಿಡುತ್ತೆ. ಕರೆಂಟು ಬಂದ ಹಾಗೆ. ಚಂದ್ರನ ಮೇಲೆ ಹದಿನೈದು ದಿವಸಕ್ಕೊಂದ್ಸಲ ಹಗಲು. ಹಂಗಾಗಿ ದೀರ್ಘ ಇರುಳು ಸಿಗತ್ತೆ.
೫. ದಕ್ಷಿಣ ಧ್ರುವದಲ್ಲೇ ಕೆಲವು ಪ್ರದೇಶ ಶಾಶ್ವತವಾಗಿ ಕತ್ತಲೆಯಲ್ಲಿವೆ. ಅಲ್ಲಿ ಟೆಲಿಸ್ಕೋಪ್ ಇಟ್ಟರೆ ಇನ್ನೂ ಅದ್ಭುತ. ಈ ಕತ್ತಲೆ ಅಂದರೆ ಬರೀ ಕತ್ತಲೆ ಅಲ್ಲ.. ಬೆಳಕಿನಲ್ಲಿ ಒಂದಷ್ಟು ನಾಯ್ಸ್ ಇರ್ತದೆ. ನಾಯ್ಸ್ ಅಂದರೆ ರೇಡಿಯೋ ಕರಕರ ಅಂದಂಗೆ. ಅಂಥದೆಲ್ಲ ಕತ್ತಲೆಯಲ್ಲಿ ಇರಲ್ಲ. ಹಾಗಾಗಿ ಕೆಲಸ ಸುಗಮ.
೬. ನಾವು ಭೂಮಿ ಮೇಲೆ ಇಟ್ಟಿರುವ ಟೆಲಿಸ್ಕೋಪುಗಳಿಗೆ ಒಂದೇ ಬಗೆಯ ಪ್ಯಾಟರ್ನಿನ ಆಕಾಶ ಸಿಗ್ತದೆ. ಅಂದ್ರೆ ಕಲ್ಪಸಿಕೊಳ್ಳಿ ದಿನಾ ಎಡದಿಂದ ಬಲಕ್ಕೆ ಪ್ರದಕ್ಷಿಣೆ ಹಾಕಿದ್ರೆ ಒಂದೇ ತರಹ ಹರಿವು ಸಿಕ್ಕ ಹಾಗೆ. ಅದೇ ಉಲ್ಟಾ ದಿಕ್ಕಿನಲ್ಲಿ ಟೆಲಿಸ್ಕೋಪ್ ಇಟ್ಟರೆ ಬೇರೆ ಬಗೆಯ ಆಕಾಶ ನೋಡಕ್ಕೆ ಸಿಗ್ತದೆ. ಬಹುಶಃ ಆಗ ಚುಕ್ಕಿಗಳು ಉಲ್ಟಾ ದಿಕ್ಕಿನಲ್ಲಿ ಚಲಿಸಿದಂಗೆ ಕಾಣಿಸಬಹುದು. ಆಗ ನಮಗೆ ಬೇರೇನೊ ಸತ್ಯಗಳು ಹೊಳೆಯಬಹುದು. ಇನ್ನೂ ಏನೇನೊ ಸಣ್ಣಪುಟ್ಟ ಉಪಯೋಗಗಳು ಇದಾವೆ. ಆದ್ರೆ ನಾವಿಲ್ಲಿ ಪರೀಕ್ಷೆಗೆ ಉತ್ತರ ಬರಿತಲ್ಲವಲ್ಲಾ, ನೂರು ಅಂಕಗಳಿಗೆ ಉತ್ತರಿಸಲು. ಇಷ್ಟು ಸಾಕು ಅನ್ಸುತ್ತೆ.
ಈ ಸುದ್ದಿಯನ್ನೂ ಓದಿ:Chandrayaan 3: ಅಂತರಿಕ್ಷಕ್ಕೆ ಕಳಿಸುವ ವಾಹನಗಳನ್ನು ಚಿನ್ನದ ಪದರದಲ್ಲಿ ಸುತ್ತಿರ್ತಾರಲ್ಲ ಯಾಕೆ?
ಪ್ರಶ್ನೆ: ಭೂಮಿಯ ದಕ್ಷಿಣ ಧ್ರುವದವರಿಗೆ, ಚಂದ್ರ ಉಲ್ಟಾ ಕಾಣ್ತನೆ, ಅಂದ್ರೆ ಅವರಿಗೆ ಸೌತ್ ನೋಡ್ ನಾರ್ತ್ ನೋಡ್ ಆಗುತ್ತಲ್ವ
ಉತ್ತರ: ಹೌದು. ಭೂಮಿಯ ದಕ್ಷಿಣ ಧ್ರುವದಿಂದ ಚಂದ್ರ ಉಲ್ಟಾ ಕಾಣ್ತಾನೆ. ಅಂದ್ರೆ ಅದೇ ಮುಖ, ಮೂಗು ಕೆಳಗೆ ಬಾಯಿ ಮೇಲೆ ಅನ್ನೋ ಹಾಗೆ!
(ಲೇಖಕರು ಕತೆಗಾರರು ಮತ್ತು ಟೆಕಿ)
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.