| ಮಧು ವೈ ಎನ್
ಅಂತರಿಕ್ಷಕ್ಕೆ ಕಳಿಸುವ ವಾಹನಗಳನ್ನು (Spacecraft) ಚಿನ್ನದ ಪದರದಲ್ಲಿ (Gold Coat) ಸುತ್ತಿರ್ತಾರಲ್ಲ ಯಾಕೆ? ಚೆನ್ನಾಗಿ ಕಾಣ್ಲಿ ಅಂತಾನಾ? ಖಂಡಿತ ಇಲ್ಲ. ಅಂತರಿಕ್ಷ ವಾಹನಗಳನ್ನು ಚಿನ್ನದ ಪದರಿನಲ್ಲಿ ಸುತ್ತಲು ಕಾರಣವಿದೆ! ಇಂಥ ಶೀಟುಗಳನ್ನು ಮೈಲಾರ್ ಶೀಟ್ (Mylar Sheet) ಎಂದು ಕರೆಯುತ್ತಾರೆ. ನಮ್ಮ ದೈನಂದಿನ ಜೀವನದಲ್ಲಿ ಇದನ್ನು ತುಂಬಾ ಕಡೆ ಬಳಸುತ್ತಾ ಇರ್ತೇವೆ. ನಾವು ಬಳಸುವ ಶೀಟುಗಳು ಬೆಳ್ಳಿಯಂತೆ ಹೊಳೆದರೆ, ಇದು ಚಿನ್ನದಂತೆ ಹೊಳೆಯುತ್ತದೆ ಅಷ್ಟೇ. ಅದರಲ್ಲಿ ಚಿನ್ನದಂಶ ಇರಬಹುದಾದರೂ ಚಿನ್ನವೇ ಇರಬೇಕೆಂದೇನೂ ರೂಲ್ಸ್ ಇಲ್ಲ!(Chandrayaan 3)
ಯಾಕೆ ಅಂತರಿಕ್ಷ ವಾಹನಗಳನ್ನು ಮೈಲಾರ್ ಶೀಟ್‌ಗಳಿಂದ ಸುತ್ತಿಡುತ್ತಾರೆ ಎಂದರೆ ಅಂತರಿಕ್ಷದಲ್ಲಿ ತಾಪಮಾನ ತುಂಬಾ ಏರುಪೇರು ಆಗುತ್ತಿರುತ್ತದೆ. ಸೂರ್ಯನಿಗೆ ಎದುರಾದರೆ ನೂರು ಡಿಗ್ರಿ ಮೇಲೆ ಏರುವಷ್ಟು, ಸೂರ್ಯನಿಂದ ಮರೆಯಾದರೆ ಸೊನ್ನೆ ಡಿಗ್ರಿ ಕೆಳಗೆ ಇಳಿಯುವಷ್ಟು ಏರುಪೇರಾಗುತ್ತದೆ. ಅಂಥ ವಾತಾವರಣದಲ್ಲಿ ನಮ್ಮ ಯಾವುದೇ ಉಪಕರಣಗಳು ಹಂಗಂಗೇ ಇದ್ದರೆ ಕ್ಷಣಕಾಲ ಉಳಿಯುವುದಿಲ್ಲ. ಸುಟ್ಟು ಬೂದಿಯಾಗುತ್ತವೆ. ಅಥವಾ ಶೀತಕ್ಕೆ ಸೊರಗಿ ಕೆಟ್ಟುಹೋಗುತ್ತವೆ. ಹಾಗಾಗಿ, ಈ ಮೈಲಾರ್ ಶೀಟುಗಳನ್ನು ಬಳಸಲಾಗುತ್ತದೆ.
ಈ ಚಿನ್ನದ ಬಣ್ಣದ ಮೈಲಾರ್ ಶೀಟುಗಳಿಂದ ಏನೇನು ಲಾಭ?
-ತನ್ನ ಮೇಲೆ ಬೀಳುವ ಸೂರ್ಯನ ಕಿರಣಗಳನ್ನು ಇದು ಪ್ರತಿಫಲಿಸುತ್ತವೆ. ಅಂದರೆ ವಾಪಸ್ ಕಳಿಸುತ್ತವೆ. ಕಿರಣಗಳು ಒಳತೂರದಂತೆ ನೋಡಿಕೊಳ್ಳುತ್ತವೆ. ಉಪಕರಣಗಳು ಓವರ್ ಹೀಟ್ ಆಗದಂತೆ ತಡೆಯುತ್ತವೆ. ಅಂತೆಯೇ ಶೀತ ಹೆಚ್ಚಾದಾಗ ಥಂಡಿಯನ್ನು ಸಹ ತಡೆದು ಒಳಗಿನ ಶಾಖವನ್ನು ಕಾಪಾಡುತ್ತವೆ.
-ಅಲ್ಟ್ರಾ ವಯಲೆಟ್ ಮತ್ತು ಇನ್ಫ್ರಾ ರೆಡ್ ಕಿರಣಗಳಿಂದ ರಕ್ಷಣೆ ಕೊಡುತ್ತವೆ. ಈ ಕಿರಣಗಳು ಎಲಕ್ಟ್ರಾನಿಕ್ ಉಪಕರಣಗಳ ಮೇಲೆ ಬಿದ್ದರೆ ಅವು ಕೆಟ್ಟುಹೋಗುವ ಸಾಧ್ಯತೆ ಇರುತ್ತದೆ. ಇನ್ಫ್ರಾರೆಡ್ ಅಂದರೆ ನಿಮ್ಮ ಟಿವಿ ರಿಮೋಟು ಮತ್ತು ಟಿವಿ ಮಾತಾಡ್ಕೊತವಲ್ಲ ಅದೇ ಕಿರಣಗಳು. ಅಲ್ಟ್ರಾ ವಯಲೆಟ್ ಅಂದರೆ ವೈದ್ಯಕೀಯ ಉಪಕರಣಗಳಲ್ಲಿ ಬಳಸುವಂತಹ ರೇಡಿಯೇಶನ್ನು. ಇವು ನೇರವಾಗಿ ಮನುಷ್ಯನ ಮೇಲೆ ಬಿದ್ದರೆ ಮನುಷ್ಯನಿಗೂ ಅಪಾಯ. ನೀವು ಬೆಟರ್ ಕಾಲ್ ಸಾಲ್ ಎಂಬ ಅಮೆರಿಕನ್ ಸೀರೀಸ್ ನೋಡಿದ್ದರೆ ಅದರಲ್ಲಿ ಸಾಲ್‌ನ ಅಣ್ಣ ತನಗೆ ಎಲೆಕ್ಟ್ರಿಸಿಟಿ ಮತ್ತು ರೇಡಿಯೇಶನ್ ಅಲರ್ಜಿ ಇದೆಯೆಂದು ಅಲ್ಯೂಮಿನಿಯಂ ಶೀಟನ್ನು ಹೊದ್ದುಕೊಂಡು ಹೊರಗೆ ಬರುತ್ತಿರುತ್ತಾನೆ.
-ಎಲೆಕ್ಟ್ರಿಕ್ ಗ್ರೌಂಡಿಂಗ್ ಮಾಧ್ಯಮವಾಗಿ ಕೆಲಸ ಮಾಡುತ್ತದೆ. ಅಂತರಿಕ್ಷದ ಉಪಕರಣಗಳಲ್ಲಿ ಸ್ಟಾಟಿಕ್ ಚಾರ್ಜ್ ಕಟ್ಟಿಕೊಳ್ಳುತ್ತ ಹೋಗುತ್ತದೆ. ಸ್ಟಾಟಿಕ್ ಚಾರ್ಜ್ ಅಂದರೆ ಹೊರಬರಲಾರದೆ ಸಿಕ್ಕಾಕ್ಕಿಕೊಂಡ ಎಲೆಕ್ಟ್ರಾನುಗಳು. ಅಂತಹ ಉಪಕರಣ ಮುಟ್ಟಿದಾಗ ನಿಮಗೆ ಶಾಕ್ ಹೊಡೆಯುತ್ತದೆ. ಕತ್ತಲಲ್ಲಿ ಸ್ವೆಟರ್ ಬಿಚ್ಚುವಾಗ ಗಮನಿಸಿರ್ತೀರ. ಈ ಮೈಲಾರ್ ಶೀಟುಗಳು ಹಾಗೆ ಕಟ್ಟಿಕೊಂಡ ಚಾರ್ಜು ನೆಲಕ್ಕೆ ಇಳಿದು ಹೋಗಲು ಸಹಾಯ ಮಾಡುತ್ತದೆ.
ಚಿನ್ನವೇ ಯಾಕೆ? ಸಿಲ್ವರ್, ಅಲ್ಯುಮಿನಿಯಂ ಯಾಕಿಲ್ಲ?
-ಚಿನ್ನ ಇನ್ಪ್ರಾರೆಡ್ ಕಿರಣಗಳನ್ನು ಮಿಕ್ಕೆಲ್ಲ ಲೋಹಗಳಿಗಿಂತ ಹೆಚ್ಚು ಶಕ್ತಿಯುತವಾಗಿ ಪ್ರತಿಫಲಿಸುತ್ತದೆ.
-ಚಿನ್ನಕ್ಕೆ ಅಲ್ಟ್ರಾ ವಯಲೆಟ್ ಕಿರಣಗಳನ್ನು ಹೀರಿಕೊಳ್ಳುವ ಶಕ್ತಿ ಇದೆ.
-ಚಿನ್ನ ತುಕ್ಕು ಹಿಡಿಯಲ್ಲ. ಹಾಗಾಗಿ ವರ್ಷಗಳ ಕಾಲ ಅಂತರಿಕ್ಷದಲ್ಲಿ ಈ ಶೀಟು ಇದ್ದ ಹಾಗೆ ಇರಬಲ್ಲದು. ಇದು ಮಜ ಅಲ್ವ ಕಬ್ಬಿಣಕ್ಕೂ ಚಿನ್ನಕ್ಕೂ ಇರುವ ಸಾಮಾನ್ಯ ವ್ಯತ್ಯಾಸ.
-ಸಿಲ್ವರ್ ಕಾಲಾನಂತರ ತನ್ನ ಫ್ರತಿಫಲಿಸುವ ಶಕ್ತಿ ಕಳೆದುಕೊಳ್ಳುತ್ತದೆ(ಇದನ್ನೂ ನಿಮ್ಮ ಒಡವೆಗಳಲ್ಲಿ ನೋಡಿರ್ತೀರಿ!). ಹಾಗೆ ಅಲ್ಯೂನಿಮಿಯಂ ಚನ್ನಾಗಿ ಪ್ರತಿಫಲಿಸುತ್ತದಾದರೂ ಅಲ್ಟ್ರಾ ವಯಲೆಟ್ ಮತ್ತು ಇನ್ಫ್ರಾರೆಡ್ ವಿರುದ್ಧ ಚಿನ್ನಕ್ಕಿರುವ ಶಕ್ತಿ ಅಲ್ಯೂಮಿನಿಯಂ ಗೆ ಇಲ್ಲ.
ಈ ಸುದ್ದಿಯನ್ನೂ ಓದಿ: Chandrayaan 3: ಡೂಡಲ್ ಮೂಲಕ ಚಂದ್ರಯಾನ 3 ಸಕ್ಸೆಸ್ ಸೆಲೆಬ್ರೇಟ್ ಮಾಡಿದ ಗೂಗಲ್!
ತುಂಬಾ ದುಬಾರಿನಾ?
ಇದು ದುಬಾರಿ ವಸ್ತುವೇನಲ್ಲ. ತೀರಾ ತೆಳುವಾದ ಶೀಟು. ಇದೆಲ್ಲ ಯಾಕೆ ಹೇಳಿದೆನಂದರೆ ವಿಜ್ಞಾನದಲ್ಲಿ ಎಲ್ಲವೂ ಹೈಫೈ ಇರಲ್ಲ. ಅನೇಕ ಕಡೆ ಸಾಮಾನ್ಯ ಜ್ಞಾನ ಬಳಸುತ್ತಾರೆ ಮತ್ತು ಕಡಿಮೆ ವೆಚ್ಛದಲ್ಲಿ ಕೆಲಸ ಸಾಧಿಸಿರುತ್ತಾರೆ. ಯಾಕಂದರೆ ಸಂಶೋಧನೆಗಳು ತುಂಬಾ ನಿಧಾನ. ಫಲಿತಾಂಶಕ್ಕೆ ವರುಷಗಳೇ ಕಾಯಬೇಕು. ಹೆಚ್ಚು ಹಣ ಹೂಡಿಕೆ ಇರಲ್ಲ. ಆದ್ದರಿಂದ ವಿಜ್ಞಾನಿಗಳು ಇರುವುದರಲ್ಲೇ ಹೇಗೆ ಕಾರ್ಯ ಸಾಧಿಸಬಹುದು ಎಂದು ಯೋಚಿಸುತ್ತಿರುತ್ತಾರೆ.
ನಾಸಾ ಬಹುದೊಡ್ಡ ಟೆಲಿಸ್ಕೋಪ್ (ವೆಬ್ ಸ್ಪೇಸ್) ಅನ್ನು ಅಂತರಿಕ್ಷಕ್ಕೆ ಕಳಿಸಿದಾಗ ಅದರಲ್ಲಿನ ಟೆಲಿಸ್ಕೋಪ್ ನ ಕನ್ನಡಿಯನ್ನು ಸಹ ಚಿನ್ನದ ಲೇಪನದಲ್ಲಿ ಮಾಡಲಾಗಿತ್ತು. ಅದು ಯಾಕೆಂದರೆ ಎದುರಿನ ಬೆಳಕು(ಅಂದರೆ ಚಿತ್ರ…) ಟೆಲಿಸ್ಕೋಪಿನೆಡೆಗೆ ಬಂದಾಗ ಈ ಅಷ್ಟಗಲದ ಚಿನ್ನದ ಕನ್ನಡಿ ಅತ್ಯಂತ ಸಮರ್ಥವಾಗಿ ಆ ಬೆಳಕೆಲ್ಲವನ್ನೂ ಕ್ರೋಡೀಕರಿಸಿ ತನ್ನೆದುರಿಗಿರುವ ಪುಟ್ಟ ಲೆನ್ಸಿಗೆ ಪ್ರತಿಫಲಿಸುತ್ತದೆ. ಆ ಮೂಲಕ ಅಷ್ಟು ದೊಡ್ಡ ಅಂತರಿಕ್ಷವನ್ನು ಅಷ್ಟು ಪುಟ್ಟ ಉಪಕರಣದ ಮೂಲಕ ಸೆರೆಹಿಡಿಯಲಾಗುತ್ತದೆ.
ಇದೂ ಸಹ ಎಷ್ಟು ಸರಳ ತಂತ್ರ ನೋಡಿ. ಕನ್ನಡಿಯಿಟ್ಟು ಅದರ ಮೂಲಕ ಚಿತ್ರವನ್ನು ಸೆರೆಹಿಡಿಯುವುದು! ನಿಮ್ಮ ಕಾರುಗಳಲ್ಲಿನ ಕನ್ನಡಿಗಳು ಹತ್ತಿರದವರನ್ನೂ ದೂರ ತೋರಿಸ್ತದೆ. ಯಾಕಂದ್ರೆ ನಿಮಗೆ ಸಾಧ್ಯವಾದಷ್ಟೂ ಜಾಸ್ತಿ ಹಿಂದಿನ ಚಿತ್ರಣ ಸಿಗಲಿ ಎಂದು. ಹಾಗಾಗಿಯೇ ಕನ್ನಡಿ ಮೇಲೆ “Objects in mirror are closer than they appear” ಎಂದು ಬರೆದಿರುತ್ತದೆ.
(ಲೇಖಕರು ಕತೆಗಾರರು ಹಾಗೂ ಟೆಕಿ)
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.