ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಹತ್ವಾಕಾಂಕ್ಷಿ ಚಂದ್ರಯಾನ 3 ಮಿಷನ್ (Chandrayaan 3) ಉಡಾವಣೆಗೆ ಕೆಲವೇ ಕ್ಷಣಗಳು ಬಾಕಿ ಇವೆ. ದೇಶದ ಎಲ್ಲರ ಗಮನವೀಗ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೇಲಿದೆ. ಇದರ ಬೆನ್ನಲ್ಲೇ, ಚಂದ್ರಯಾನ 3 ಬಜೆಟ್ ಹಾಗೂ ಆದಿಪುರುಷ್ ಸಿನಿಮಾ ಬಜೆಟ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಚಂದ್ರಯಾನ 3 ಮಿಷನ್ ಕೈಗೊಳ್ಳಲು ಇಸ್ರೊ 615 ಕೋಟಿ ರೂಪಾಯಿ ಖರ್ಚು ಮಾಡಿದೆ. ಮೂಲಗಳ ಪ್ರಕಾರ ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾಗೆ 700 ಕೋಟಿ ರೂ. ಖರ್ಚು ಮಾಡಲಾಗಿದೆ. ಆದಿಪುರುಷ್ ಸಿನಿಮಾಗಿಂತ ಕಡಿಮೆ ವೆಚ್ಚದಲ್ಲಿ ಇಸ್ರೊ ಚಂದ್ರಯಾನ 3 ಉಡಾವಣೆ ಮಾಡುತ್ತಿರುವ ಕಾರಣ ವ್ಯಂಗ್ಯದ ಮೂಲಕ ಆದಿಪುರುಷ್ ಸಿನಿಮಾಗೆ ಟಾಂಗ್ ಕೊಡಲಾಗಿದೆ.
🚨 Approximate Budget
— Ravisutanjani (@Ravisutanjani) July 8, 2023
• Adipurush – ₹700 Crore
• Chandrayaan 3 – ₹615 Crore
Gives a Fair Understanding of Priorities
“ಚಂದ್ರಯಾನ 3 ಮಿಷನ್ ಬಜೆಟ್ ಸುಮಾರು 615 ಕೋಟಿ ರೂ. ಆಗಿದೆ. ಆದರೆ, ಆದಿಪುರುಷ್ ಸಿನಿಮಾಗೆ 715 ಕೋಟಿ ರೂ. ವ್ಯಯಿಸಲಾಗಿದೆ. ಇದನ್ನು ಗಮನಿಸಿದರೆ ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಲಾಗಿದೆ” ಎಂಬುದು ತಿಳಿಯುತ್ತದೆ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಹಲವು ಜನ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
“ನಿಯಮಿತ ಬಜೆಟ್‌ನಲ್ಲಿ ಮಹತ್ತರವಾದುದನ್ನು ಸಾಧಿಸಲು ಇಸ್ರೊ ಮುಂದಾಗಿದೆ. ಹಾಗೊಂದು ವೇಳೆ, ಸರ್ಕಾರವು ಇನ್ನಷ್ಟು ಬಜೆಟ್ ನೀಡಿದರೆ ಇನ್ನಷ್ಟು ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆದರೆ, ಕೆಲವೊಂದಿಷ್ಟು ಜನ ಹೋಲಿಕೆಯನ್ನು ವಿರೋಧಿಸಿದ್ದಾರೆ. “ಜೀವನದಲ್ಲಿ ಮನರಂಜನೆ ಕೂಡ ಪ್ರಮುಖವಾಗುತ್ತದೆ. ಸಿನಿಮಾ ಹಾಗೂ ಚಂದ್ರಯಾನಕ್ಕೂ ಹೋಲಿಕೆ ಮಾಡುವ ಅವಶ್ಯಕತೆ ಇಲ್ಲ” ಎಂದು ಇನ್ನೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Chandrayaan-3 : ಪುರಾಣದ ಪ್ರಕಾರ ಚಂದ್ರ ಹುಟ್ಟಿದ್ದಾದರೂ ಹೇಗೆ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?
ನಟ ಪ್ರಭಾಸ್, ಕೃತಿ ಸನೂನ್ ತಾರಾಗಣದ ಆದಿಪುರುಷ್ ಸಿನಿಮಾವನ್ನು ರಾಮಾಯಣವನ್ನು ಆಧರಿಸಿ ಚಿತ್ರಿಸಲಾಗಿದೆ. ಹಾಗಾಗಿ, ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಇದನ್ನು 700 ಕೋಟಿ ರೂ. ವ್ಯಯಿಸಿ ನಿರ್ಮಿಸಲಾಗಿದ್ದು, ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಹಣ ವ್ಯಯಿಸಿದ ಸಿನಿಮಾ ಎಂಬ ಖ್ಯಾತಿಗೂ ಭಾಜನವಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಯಶಸ್ಸು ಕಂಡಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಆದಿಪುರುಷ್ ಸಿನಿಮಾ 350 ಕೋಟಿ ರೂ. ಗಳಿಸಿದೆ ಎಂದು ವರದಿಗಳು ತಿಳಿಸಿವೆ.