ಹೊಸದಿಲ್ಲಿ: ಚಂದ್ರನ ಮೇಲೆ ರಾತ್ರಿ (moon night) ಮುಗಿದು (ಭೂಮಿಯ ಹದಿನಾಲ್ಕು ದಿನ, ಚಂದ್ರನ ಒಂದು ದಿನಕ್ಕೆ ಸಮ) ಬುಧವಾರ ಮುಂಜಾನೆಯಾಗಿದೆ. ಸೂರ್ಯನ ಬೆಳಕಿನ ಅನುಪಸ್ಥಿತಿಯಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದ ಇಸ್ರೋದ (ISRO) ಚಂದ್ರಯಾನ- 3 (Chandrayaan 3) ಮಿಷನ್‌ನ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್‌ಗಳು ಮತ್ತೆ ಕಾರ್ಯಾರಂಭಿಸಲಿವೆಯೇ ಎಂಬ ಕುತೂಹಲ ಎದುರಾಗಿದೆ.
ಚಂದ್ರನ ಮೇಲೆ ಈಗ ಅತ್ಯಂತ ಶೀತ ವಾತಾವರಣವಿದ್ದು, ಇವುಗಳನ್ನು ನಿದ್ರೆಯಿಂದ ಎಚ್ಚರಗೊಳಿಸಲು ಇಸ್ರೋ ಪ್ರಯತ್ನಿಸುತ್ತಿವೆ. ಗುರುವಾರ ಅಥವಾ ಶುಕ್ರವಾರ ಹೆಚ್ಚಿನ ಬಿಸಿಲು ಲಭ್ಯವಾಗಬಹುದು. ನಂತರ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್‌ಗಳಲ್ಲಿರುವ ಆನ್‌ಬೋರ್ಡ್ ಉಪಕರಣಗಳು ಸೋಲಾರ್ ಶಕ್ತಿಯಿಂದ ಪುನರುಜ್ಜೀವನಗೊಳ್ಳಬಹುದು ಎಂಬ ನಿರೀಕ್ಷೆಯಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲ್ಯಾಂಡರ್ ಹಾಗೂ ರೋವರ್‌ಗಳು ಮರಳಿ ಕೆಲಸ ಮಾಡುವ ಸ್ಥಿತಿಗೆ ಬರುವ ಸಾಧ್ಯತೆಗಳು ತುಂಬಾ ಹೆಚ್ಚೇನೂ ಇಲ್ಲ. ಆದರೆ ಹತಾಶ ಪರಿಸ್ಥಿತಿಯೂ ಇಲ್ಲ. ಲ್ಯಾಂಡರ್ ಅಥವಾ ರೋವರ್ ಮಾಡ್ಯೂಲ್ ಎಚ್ಚರಗೊಳ್ಳುವ ಸಾಧ್ಯತೆಯಿದೆ. ಆದರೆ ಮೊದಲ ʼದಿನʼದಂತೆ ಸಂಪೂರ್ಣ ಶಕ್ತಿಯಿಂದ ಕ್ರಿಯಾಶೀಲವಾಗಲು ಸಾಧ್ಯವಿಲ್ಲ ಎಂದು ಇಸ್ರೋ ಹೇಳಿದೆ.
ಸೌರಶಕ್ತಿ ಚಾಲಿತ ಚಂದ್ರಯಾನ- 3 ಮಾಡ್ಯೂಲ್‌ಗಳು ಕೇವಲ ಒಂದು ಚಂದ್ರನ ದಿನದ ಮಿಷನ್ ಜೀವನಾವಧಿಯನ್ನು ಹೊಂದಿವೆ. ಇದು ಭೂಮಿಯ ಮೇಲೆ ಸುಮಾರು 14 ದಿನಗಳಿಗೆ ಸಮ. ಚಂದ್ರಯಾನ- 3 ಬಂದಿಳಿದ ದಕ್ಷಿಣ ಧ್ರುವದ ಬಳಿ ರಾತ್ರಿಯ ತಾಪಮಾನ ಅತ್ಯಂತ ಶೀತಮಯವಾಗಿದ್ದು, -200 ಡಿಗ್ರಿ ಸೆಲ್ಸಿಯಸ್‌ಗಿಂತ ಕೆಳಗಿಳಿದಿದೆ. ಇದನ್ನು ತಡೆದುಕೊಳ್ಳಲು ಈ ಮಾಡ್ಯೂಲ್‌ಗಳಲ್ಲಿರುವ ಎಲೆಕ್ಟ್ರಾನಿಕ್ ಸಾಧನಗಳಿಗೆ ಸಾಧ್ಯವಿಲ್ಲ. ಚಂದ್ರನ ಮೇಲೆ ರಾತ್ರಿಯೂ ಕಾರ್ಯಾಚರಿಸುವಂತೆ ವಿನ್ಯಾಸಗೊಳಿಸಲಾಗಿರುವ ಕೆಲವು ಬಾಹ್ಯಾಕಾಶ ನೌಕೆಗಳಲ್ಲಿ ಆನ್‌ಬೋರ್ಡ್ ಸಾಧನಗಳು ಈ ತಾಪಮಾನ ತಡೆಯಲು ಸಾಧ್ಯವಾಗುವಂತಿದೆ. ಚಂದ್ರನ ಮೇಲೆ ಇಳಿಯಲು ವಿಫಲವಾದ ರಷ್ಯಾದ ಲೂನಾ -25ರಲ್ಲಿ ಅಂತಹ ವ್ಯವಸ್ಥೆಯಿತ್ತು. ಆದರೆ ಚಂದ್ರಯಾನ-3ಯ ವಿನ್ಯಾಸ ಕೇವಲ ಒಂದು ದಿನಕ್ಕೆ ಮಾತ್ರವಿತ್ತು.
ಆದರೂ, ಚಂದ್ರಯಾನ-3ರ ಮುಖ್ಯ ವೈಜ್ಞಾನಿಕ ಪ್ರಯೋಗದ ಉದ್ದೇಶಗಳು ಮುಗಿದ ನಂತರ, ಇಸ್ರೋ ಒಂದು ಚಾನ್ಸ್ ತೆಗೆದುಕೊಳ್ಳಲು ನಿರ್ಧರಿಸಿತು. ಲ್ಯಾಂಡರ್ ಮತ್ತು ರೋವರ್‌ನ ಜೀವಿತಾವಧಿಯನ್ನು ವಿಸ್ತರಿಸಲು ಪ್ರಯತ್ನಿಸಿತು. ಹೀಗಾಗಿ ಸೂರ್ಯಾಸ್ತಕ್ಕಿಂತ ಸ್ವಲ್ಪ ಮುಂಚಿತವಾಗಿ ಎಲ್ಲಾ ಉಪಕರಣಗಳ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿತು ಮತ್ತು ಅವುಗಳನ್ನು ಸ್ಲೀಪ್ ಮೋಡ್‌ನಲ್ಲಿ ಇರಿಸಿತು. ಆ ಹೊತ್ತಿಗೆ ಸಂಪೂರ್ಣವಾಗಿ ಚಾರ್ಜ್ ಆಗಿದ್ದ ಬ್ಯಾಟರಿಗಳು ರಾತ್ರಿಯಲ್ಲಿ ಸುಸ್ಥಿತಿಯಲ್ಲಿ ಉಳಿಯಲು ಬೇಕಾದಷ್ಟು ಶಕ್ತಿಯನ್ನು ಸಂಗ್ರಹಿಸಿದ್ದು, ಸಾಕಷ್ಟು ಬೆಚ್ಚಗಾಗಿರಲಿವೆ ಎಂದು ಆಶಿಸಲಾಗಿದೆ.
ಇಸ್ರೋದ ಈ ಪ್ರಯೋಗ ಸಫಲಗೊಂಡರೆ, ಲ್ಯಾಂಡರ್ ಮತ್ತು ರೋವರ್ ಮತ್ತೆ ಕನಿಷ್ಠ 14 ಭೂಮಿಯ ದಿನಗಳವರೆಗೆ ಕಾರ್ಯನಿರ್ವಹಿಸಲಿವೆ. ಅವು ಈಗಾಗಲೇ ಇಲ್ಲಿಗೆ ಕಳುಹಿಸಿರುವ ವೈಜ್ಞಾನಿಕ ಡೇಟಾ ಮತ್ತು ಅವಲೋಕನಗಳನ್ನು ಪುಷ್ಟೀಕರಿಸಬಹುದು. ಈಗಾಗಲೇ, ಚಂದ್ರಯಾನ-3 ಚಂದ್ರನ ಪರಿಸರಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಡೇಟಾಗಳನ್ನು ಸಂಗ್ರಹಿಸಿದೆ.
ಇದನ್ನೂ ಓದಿ: Chandrayaan 3: ಏಕಕಾಲಕ್ಕೆ 80 ಲಕ್ಷ ವೀಕ್ಷಣೆ ಕಂಡ ಚಂದ್ರಯಾನ-3 ಲ್ಯಾಂಡಿಂಗ್, ಇಸ್ರೋಗೆ ಯುಟ್ಯೂಬ್ ಇಂಡಿಯಾ ಸೆಲ್ಯೂಟ್!