Site icon Vistara News

Chandrayaan 3: ಇಸ್ರೋ ವಿಜ್ಞಾನಿಗಳಿಗೆ 17 ತಿಂಗಳಿಂದ ವೇತನ ನೀಡಿಲ್ಲ! ಸುಳ್ಳು ಸುದ್ದಿ ಹರಡಿದ ಕೈ ನಾಯಕ ದಿಗ್ವಿಜಯ್ ಸಿಂಗ್

Ram Lalla Idol doesnt look like child ram Says Digvijay Singh

ನವದೆಹಲಿ: ಚಂದ್ರಯಾನ-3 (Chandrayaan 3) ಯಶಸ್ಸಿಗೆ ಎಲ್ಲರೂ ಪ್ರಾರ್ಥಿಸುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ (Congress Leader Digvijay Singh) ಅವರು, ಇಸ್ರೋ ವಿಜ್ಞಾನಿಗಳಿಗೆ (ISRO Scientists) ಕಳೆದ 17 ತಿಂಗಳಿಂದ ವೇತನ (salary) ನೀಡಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ವಾಸ್ತವದಲ್ಲಿ ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ಹಿಂದೆಯೇ ಇದೊಂದು ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರವೇ ಹೇಳಿತ್ತು. ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಇದೇ ರೀತಿಯ ಸುದ್ದಿಗಳು ಹರಿದಾಡುತ್ತಿತ್ತು. ಆಗ ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯ ಪರಿಶೀಲನಾ (Fact Checking Arm) ವಿಭಾಗವು, ಇದೊಂದು ಸುಳ್ಳು ಸುದ್ದಿ ಎಂದು ಖಚಿತ ಪಡಿಸಿತ್ತು. ಈಗ ಕಾಂಗ್ರೆಸ್ ನಾಯಕ ಅದೇ ಸುಳ್ಳು ಸುದ್ದಿ ನಿಜವೆನ್ನುವ ರೀತಿಯಲ್ಲಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಚಂದ್ರಯಾನ-3 ಲ್ಯಾಂಡರ್ ಸೇಫ್ ಲ್ಯಾಂಡಿಂಗ್‌ಗಾಗಿ ಇಸ್ರೋದ ಭಾರತೀಯ ವಿಜ್ಞಾನಿಗಳು ಕಠಿಣ ಪರಿಶ್ರಮಪಡುತ್ತಿದ್ದಾರೆ. ಅದಕ್ಕಾಗಿ ನಮಗೆ ಹೆಮ್ಮೆ ಇದೆ. ಯಶಸ್ಸು ದೊರೆಯಲಿದೆ ಎಂದು ನಾವು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ. ಆದರೆ, ಇಸ್ರೋ ವಿಜ್ಞಾನಿಗಳು ವೇತನ ಪಡೆದು 17 ತಿಂಗಳಾಯಿತು ಎಂಬ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗಮನ ಹರಿಸಬೇಕು ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಬಿಜೆಪಿ

ಇಸ್ರೋ ಭಾರತವನ್ನು ಹೆಮ್ಮೆಪಡುವಂತೆ ಮಾಡಲು ಸಿದ್ಧವಾಗಿರುವ ದಿನದಂದು ದಿಗ್ವಿಜಯ್ ಸಿಂಗ್ ಅವರು ನಕಲಿ ಸುದ್ದಿಗಳನ್ನು ಹರಡಲು ಕರೆ ನೀಡಿದ್ದಾರೆ. ಕಾಂಗ್ರೆಸ್ ಪ್ರಧಾನಿ ಮೋದಿಯನ್ನು ದ್ವೇಷಿಸುತ್ತದೆ. ಆದರೆ ಅದು ಪ್ರಬಲವಾದ ಪುನರುತ್ಥಾನದ ಭಾರತವನ್ನು ಇನ್ನಷ್ಟು ದ್ವೇಷಿಸುತ್ತದೆ. ಏಕೆಂದರೆ ಆತ್ಮವಿಶ್ವಾಸದ ಭಾರತ ಎಂದಿಗೂ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ ಎಂದು ಭಾರತೀಯ ಜನತಾ ಪಾರ್ಟಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ಇಡೀ ಭಾರತವು ಚಂದ್ರಯಾನ-3 ಕುರಿತು ಸಂಭ್ರಮ ಪಡುತ್ತಿರುವಾಗ ಕಾಂಗ್ರೆಸ್ ಮಾತ್ರ ಕೊರಗ್ತಾ ಇದೆ ಎಂದು ಅವರು ಹೇಳಿದ್ದಾರೆ.

ನಿಜವಾಗಿಯೂ ಇಸ್ರೋ ವಿಜ್ಞಾನಿಗಳಿಗೆ ವೇತನ ನೀಡಿಲ್ಲವೇ?

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ದಿ ರಣವೀರ್‌ ಶೋ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡಿದ್ದ ಖ್ಯಾತ ಯುಟ್ಯೂಬರ್‌ ತೆಹ್ಸೀನ್‌ ಪೂನಾವಾಲಾ, ಚಂದ್ರಯಾನ 3 ಮಿಷನ್‌ನಲ್ಲಿ ತೊಡಗಿರುವ ಇಸ್ರೋ ವಿಜ್ಞಾನಿಗಳಿಗೆ ಮೂರು ತಿಂಗಳಿಂದ ಸಂಬಳ ನೀಡಿಲ್ಲ ಎಂದು ಹೇಳಿದ್ದರು. “ಇಸ್ರೋ ವಿಜ್ಞಾನಿಗಳಿಗೆ ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ. ಇದು ಸರಿಯೇ? ನನಗೆ ಈ (ಕೇಂದ್ರ) ಸರ್ಕಾರದ ಮೇಲೆ ಇದೇ ಕಾರಣಕ್ಕೆ ಸಿಟ್ಟು ಬರುತ್ತದೆ. ನಮಗೆ ಇಸ್ರೋ ಬಗ್ಗೆ ಹೆಮ್ಮೆ ಇದೆ. ಅದೊಂದು ಅದ್ಭುತ ಸಂಸ್ಥೆ. ಆದರೆ, ಅವರಿಗೆ ಮೂರು ತಿಂಗಳಿಂದ ಸಂಬಳ ನೀಡಿಲ್ಲ. ನೀವು ಬೇಕಾದರೆ ಇದನ್ನು ಪರಿಶೀಲಿಸಬಹುದು” ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Fact Check: ಚಂದ್ರಯಾನ 3 ವಿಜ್ಞಾನಿಗಳಿಗೆ ಕೇಂದ್ರ ಸರ್ಕಾರ 3 ತಿಂಗಳಿಂದ ಸಂಬಳ ನೀಡಿಲ್ಲವೇ? ಇಲ್ಲಿದೆ ವಾಸ್ತವ

ವಾಸ್ತವ ಏನು?

ನಕಲಿ ಸುದ್ದಿಗಳ ಕುರಿತು ಫ್ಯಾಕ್ಟ್‌ ಚೆಕ್‌ ಮಾಡಿ, ವಾಸ್ತವಾಂಶ ತಿಳಿಸುವ ಪಿಐಬಿ ಫ್ಯಾಕ್ಟ್‌ಚೆಕ್‌ ಈ ಕುರಿತು ಮಾಹಿತಿ ನೀಡಿದ್ದು, ತೆಹ್ಸೀನ್‌ ಪೂನಾವಾಲಾ ಹೇಳಿದ್ದು ಸುಳ್ಳು ಎಂದು ತಿಳಿಸಿದೆ. “ಈ ವದಂತಿ ಸುಳ್ಳು. ಇಸ್ರೋ ವಿಜ್ಞಾನಿಗಳು ಪ್ರತಿ ತಿಂಗಳ ಕೊನೆಯ ದಿನದಂದು ಸಂಬಳ ಪಡೆಯುತ್ತಾರೆ” ಎಂದು ಪೂನಾವಾಲಾ ಆರೋಪವನ್ನು ಅಲ್ಲಗಳೆದಿದೆ. ತೆಹ್ಸೀನ್‌ ಪೂನಾವಾಲಾ ಅವರು ಉದ್ಯಮಿ ಕೂಡ ಆಗಿದ್ದಾರೆ. ಅವರು ರಾಜಕೀಯ ವಿಶ್ಲೇಷಣೆಯನ್ನೂ ಮಾಡುತ್ತಾರೆ.

Exit mobile version