Site icon Vistara News

Chandrayaan 3: ವಿಕ್ರಮ್ ಲ್ಯಾಂಡರ್ ಕಣ್ಣಿನಲ್ಲಿ ಸೆರೆಯಾದ ಲ್ಯಾಂಡಿಂಗ್ ವೇಳೆಯ ರೋಚಕ ಚಂದಿರ!

Moon Image by Vikram Lander Imager

ನವದೆಹಲಿ: ಚಂದಿರನ ಅಂಗಳಕ್ಕೆ ಇಳಿಯುವ ಮೊದಲು, ಚಂದ್ರಯಾನ-3 (Chandrayaan 3) ವಿಕ್ರಮ್ ಲ್ಯಾಂಡರ್‌ (Vikram Lander) ಕಣ್ಣಿಗೆ ಕಂಡ ಚಂದಿರ ಮೇಲ್ಮೈ ರೋಚಕವಾಗಿದೆ! ಚಂದ್ರನ ಮೇಲೆ ಲ್ಯಾಂಡ್ (Landign on Moon) ಮಾಡುವ ಮುಂಚಿನ 20 ನಿಮಿಷಗಳು ಬಹಳ ಆತಂಕದ ಕ್ಷಣಗಳು ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದರು. ಆದರೆ, ನಿನ್ನೆಯ ಲ್ಯಾಂಡಿಂಗ್ ಪ್ರಕ್ರಿಯೆ ಪೂರ್ತಿ ಗಮನಿಸಿದರೆ, ಲ್ಯಾಂಡಿಂಗ್ ಆದ ಬಳಿಕ ಅದೊಂದು ಸುಲಭ ವ್ಯವಹಾರದಂತೆ ಭಾಸವಾಯಿತು. ನೂರು ಕೋಟಿ ಭರವಸೆಗಳನ್ನು ಹೊತ್ತ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಾಗ ಸೆರೆ ಹಿಡಿದ ಚಂದ್ರ ಅಮೋಘವಾಗಿದೆ. ರೋಚಕವಾಗಿದೆ. ಈ ಕುರಿತಾದ ವಿಡಿಯೋವೊಂದನ್ನು (Moon video) ಇಸ್ರೋ ಟ್ವಿಟರ್‌ನಲ್ಲಿ (ISRO post) ಪೋಸ್ಟ್ ಮಾಡಿ, ಮೇಲ್ಮೈ ಸ್ಪರ್ಶಿಸುವ ಮೊದಲು ಲ್ಯಾಂಡರ್ ಇಮೇಜ್ ಕ್ಯಾಮೆರಾ (Lander Imager Camera) ಚಂದ್ರನನ್ನು ಹೀಗೆ ಸೆರೆ ಹಿಡಿದಿದೆ ಎಂಬ ಒಕ್ಕಣಕೆಯೊಂದಿಗೆ ವಿಡಿಯೋವನ್ನು ಷೇರ್ ಮಾಡಿದೆ.

ಇಮೇಜರ್ ಕ್ಯಾಮರಾದಿಂದ ಹೆಚ್ಚಿನ ರೆಸಲ್ಯೂಶನ್ ವೀಡಿಯೊವು ಚಂದ್ರನ ಸುಂದರ ಮೇಲ್ಮೈಯನ್ನು ಸೆರೆ ಹಿಡಿದಿದೆ. ಕುಳಿಗಳನ್ನು ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣಬಹುದು. ಲ್ಯಾಂಡರ್ ತನ್ನ ಇಳಿಯುವಿಕೆಯನ್ನು ಪೂರ್ಣಗೊಳಿಸುವ ವೇಳೆ ಈ ದೃಶ್ಯಗಳನ್ನು ಸೆರೆ ಹಿಡಿದಿದೆ. ಸರಿಸುಮಾರು ಎರಡು ನಿಮಿಷಗಳ ಕ್ಲಿಪ್‌ನ ಕೊನೆಯ ಕೆಲವು ಸೆಕೆಂಡುಗಳು ವಿಕ್ರಮ್ ಗಣನೀಯವಾಗಿ ನಿಧಾನವಾಗುತ್ತಿರುವುದನ್ನು ತೋರಿಸುತ್ತದೆ ಮತ್ತು ನಂತರ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವುದನ್ನು ಕಾಣಬಹುದಾಗಿದೆ.

Chandrayaan 3: 14 ದಿನಗಳ ನಂತರ ಭೂಮಿಗೆ ಮರಳಲಿವೆಯೇ ವಿಕ್ರಮ್, ಪ್ರಗ್ಯಾನ್?

ಚಂದ್ರಯಾನ 3 (Chandrayaan 3) ನಿನ್ನೆ (ಆ.23) ಚಂದ್ರನ ದಕ್ಷಿಣ ಧ್ರುವದಲ್ಲಿ (south pole) ಯಶಸ್ವಿಯಾಗಿ ಇಳಿದಿದ್ದು, ವಿಕ್ರಮ್ ಲ್ಯಾಂಡರ್‌ನ (vikram lander) ಹೊಟ್ಟೆಯಲ್ಲಿದ್ದ ಪ್ರಗ್ಯಾನ್ ರೋವರ್‌ (rover pragyan) ಕೆಳಗಿಳಿದು ಚಲಿಸಲು ಆರಂಭಿಸಿದೆ. ಈ ಲ್ಯಾಂಡರ್‌ ಹಾಗೂ ರೋವರ್‌ 14 ದಿನ ಏನೇನು ಮಾಡಲಿವೆ, ನಂತರ ಇವುಗಳ ಕತೆ ಏನು, ಭೂಮಿಗೆ ಮರಳಲಿವೆಯೇ ಇತ್ಯಾದಿ ಕುತೂಹಲಗಳು ಈಗ ಮೂಡಿವೆ.

ಚಂದ್ರನ ಒಂದು ದಿನದಷ್ಟು ಕಾಲ ಈ ಪ್ರಗ್ಯಾನ್‌ ರೋವರ್‌ ಇಲ್ಲಿ ಹಲವು ಸರಣಿ ಪ್ರಯೋಗಗಳನ್ನು ಇಲ್ಲಿ ನಡೆಸಲಿದೆ. ಚಂದ್ರನ ಒಂದು ದಿನ ಭೂಮಿಯ 14 ದಿನಗಳಿಗೆ ಸಮವಾಗಿದೆ. ಇಷ್ಟು ದಿನ ಕಾಲ ನಡೆಸುವ ಪ್ರಯೋಗಗಳಿಂದ ಪಡೆದ ಡೇಟಾವನ್ನು ರೋವರ್ ಲ್ಯಾಂಡರ್‌ಗೆ ಕಳುಹಿಸುತ್ತದೆ, ಲ್ಯಾಂಡರ್‌ ಅದನ್ನು ಭೂಮಿಗೆ ಕಳುಹಿಸುತ್ತದೆ.

ಇಲ್ಲಿನ 14 ದಿನಗಳ ನಂತರ, ಚಂದ್ರನ ಮೇಲೆ ರಾತ್ರಿ ಕವಿಯುತ್ತದೆ. ಅದು 14 ದಿನಗಳವರೆಗೆ ಇರಲಿದೆ. ವಿಪರೀತ ಚಳಿಯ ವಾತಾವರಣವಿರುತ್ತದೆ. ವಿಕ್ರಮ್ ಮತ್ತು ಪ್ರಗ್ಯಾನ್ ಬಿಸಿಲಿನಲ್ಲಿ ಮಾತ್ರ ಕೆಲಸ ಮಾಡಬಹುದು. ಯಾಕೆಂದರೆ ಅವುಗಳ ಸೆಲ್‌ಗಳು ಸೂರ್ಯನ ಬಿಸಿಲು- ಶಾಖದಿಂದ ರಿಚಾರ್ಜ್‌ ಆಗಬೇಕಿವೆ. ಹೀಗಾಗಿ 14 ದಿನಗಳ ನಂತರ ಇವು ನಿಷ್ಕ್ರಿಯವಾಗುತ್ತವೆ. ಲ್ಯಾಂಡರ್ ಮತ್ತು ರೋವರ್ ಎರಡನ್ನೂ 14 ದಿನ ಕಾರ್ಯಾಚರಿಸುವಂತೆಯೇ ವಿನ್ಯಾಸಗೊಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Chandrayaan 3: ಅಂತರಿಕ್ಷಕ್ಕೆ ಕಳಿಸುವ ವಾಹನಗಳನ್ನು ಚಿನ್ನದ ಪದರದಲ್ಲಿ ಸುತ್ತಿರ್ತಾರಲ್ಲ ಯಾಕೆ?

ಆದರೆ ಚಂದ್ರನ ಮೇಲೆ ಸೂರ್ಯ ಮತ್ತೆ ಕಾಣಿಸಿಕೊಂಡಾಗ, ವಿಕ್ರಮ್ ಮತ್ತು ಪ್ರಗ್ಯಾನ್ ಮತ್ತೆ ಚೇತರಿಸಿಕೊಂಡು ಕೆಲಸ ಆರಂಭಿಸುವ ಸಾಧ್ಯತೆಯನ್ನು ಇಸ್ರೋ ವಿಜ್ಞಾನಿಗಳು ತಳ್ಳಿಹಾಕುವುದಿಲ್ಲ. ಹೀಗಾದರೆ ಅದು ಚಂದ್ರಯಾನ ಯೋಜನೆಗೆ ಬೋನಸ್ ಆಗಲಿದೆ. ಆದರೆ ವಿಕ್ರಮ್ ಮತ್ತು ಪ್ರಗ್ಯಾನ್‌ಗಳನ್ನು ಮತ್ತೆ ಭೂಮಿಗೆ ಕರೆತರುವ ಚಿಂತನೆ- ಯೋಜನೆಯನ್ನು ಇಸ್ರೋ ಮಾಡಿಲ್ಲ. ಕೆಲಸ ಮಾಡುವಷ್ಟು ಕಾಲ ಇವುಗಳನ್ನು ಮುಂದುವರಿಸಲಾಗುತ್ತದೆ. ಕೆಲಸ ಮಾಡದ ಸ್ಥಿತಿಗೆ ತಲುಪಿದ ಬಳಿಕ ಇವುಗಳನ್ನು ಮರಳಿ ತರುವುದೂ ವ್ಯರ್ಥ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version