ಬೆಂಗಳೂರು: ಆಗಸ್ಟ್ 23ರಂದು ಸಂಜೆ 6:04ಕ್ಕೆ (ಭಾರತೀಯ ಕಾಲಮಾನ) ಚಂದ್ರಯಾನ- 3 (Chandrayana – 3 ) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಕಟಿಸಿದೆ. ಈ ಅಪರೂಪದ ಕ್ಷಣವನ್ನು ಎಲ್ಲಿ ವೀಕ್ಷಿಸಬಹುದು ಹಾಗೂ ಇನ್ನಿತರ ಮಾಹಿತಿಗಳನ್ನೂ ಇಸ್ರೊ ಪ್ರಕಟಿಸಿದೆ.
ಈ ಸಾಧನೆಯು ಭಾರತೀಯ ವಿಜ್ಞಾನ, ಎಂಜಿನಿಯರಿಂಗ್, ತಂತ್ರಜ್ಞಾನ ಮತ್ತು ಉದ್ಯಮ ಕ್ಷೇತ್ರದಲ್ಲಿನ ಮಹತ್ವದ ಹೆಜ್ಜೆಯಾಗಿದೆ. ಇದು ಬಾಹ್ಯಾಕಾಶ ಪರಿಶೋಧನೆಯಲ್ಲಿ ನಮ್ಮ ರಾಷ್ಟ್ರದ ಪ್ರಗತಿಯನ್ನು ಸಂಕೇತಿಸುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಚಂದ್ರಯಾನ -3 ರ ಸಾಫ್ಟ್ ಲ್ಯಾಂಡಿಂಗ್ ಒಂದು ‘ಸ್ಮರಣೀಯ ಕ್ಷಣ’ ಎಂದು ಇಸ್ರೋ ಹೇಳಿದೆ. ಇದು ಕುತೂಹಲವನ್ನು ಹೆಚ್ಚಿಸುವುದಲ್ಲದೆ ನಮ್ಮ ಯುವಕರ ಮನಸ್ಸಿನಲ್ಲಿ ಅನ್ವೇಷಣೆಯ ಉತ್ಸಾಹವನ್ನು ಪ್ರಚೋದಿಸುತ್ತದೆ ಎಂಬುದಾಗಿಯೂ ತಿಳಿಸಿದೆ.
ನಾವು ಒಟ್ಟಾಗಿ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಮರ್ಥ್ಯವನ್ನು ಸಂಭ್ರಮಿಸುತ್ತಿದ್ದೇವೆ. ಇದು ಆಳವಾದ ಹೆಮ್ಮೆ ಮತ್ತು ಏಕತೆಯ ಪ್ರಜ್ಞೆಯನ್ನು ಸೃಷ್ಟಿಸುತ್ತದೆ. ಇದು ವೈಜ್ಞಾನಿಕ ವಿಚಾರಣೆ ಮತ್ತು ನಾವೀನ್ಯತೆಯ ವಾತಾವರಣವನ್ನು ಬೆಳೆಸಲು ಕೊಡುಗೆ ನೀಡುಲಿದೆ ಎಂದು ಅದು ಹೇಳಿದೆ.
ಚಂದ್ರಯಾನ-3 ಲ್ಯಾಂಡಿಂಗ್ ದಿನಾಂಕ ಮತ್ತು ಸಮಯ
ಎಲ್ಲರೂ ಕೌತುಕದಿಂದ ಕಾಯುವ ಚಂದ್ರಯಾನದ-3ರ ಸಾಫ್ಟ್ ಲ್ಯಾಂಡಿಂಗ್ ಆಗಸ್ಟ್ 23, 2023 ರಂದು ಸಂಜೆ 5:27 ರಿಂದ ನೇರ ಪ್ರಸಾರವಾಗಲಿದೆ. ಇಸ್ರೋದ ಅಧಿಕೃತ ವೆಬ್ಸೈಟ್, ಅದರ ಅಧಿಕೃತ ಯೂಟ್ಯೂಬ್ ಚಾನೆಲ್, ಅದರ ಅಧಿಕೃತ ಫೇಸ್ಬುಕ್ ಪುಟ ಮತ್ತು ಡಿಡಿ ನ್ಯಾಷನಲ್ ಟಿವಿ ಚಾನೆಲ್ ಸೇರಿದಂತೆ ಅನೇಕ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ.
ಆಗಸ್ಟ್ 23, 2023 ರಂದು ಸಂಜೆ 6:04 ರ ಸುಮಾರಿಗೆ ಚಂದ್ರಯಾನ -3 ಚಂದ್ರನ ಮೇಲೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ : Russia Moon Mission: ಕೊನೇ ಕ್ಷಣದಲ್ಲಿ ರಷ್ಯಾ ಚಂದ್ರಯಾನ ವಿಫಲ; ಭಾರತದ ನೌಕೆಗೆ ಇನ್ನಿಲ್ಲ ಯಾವುದೇ ಅಡ್ಡಿ!
ಈ ಕಾರ್ಯಕ್ರಮವನ್ನು ತಮ್ಮ ವಿದ್ಯಾರ್ಥಿಗಳಿಗೆ ತೋರಿಸುವಂತೆ ದೇಶಾದ್ಯಂತದ ಎಲ್ಲಾ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಇಸ್ರೋ ಸಂಸ್ಥೆ ಹೇಳಿದೆ. ಚಂದ್ರಯಾನ -3 ಸಾಫ್ಟ್ ಲ್ಯಾಂಡಿಂಗ್ ಆಗುವ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳು ಅರಿಯಲಿ ಎಂದು ಹೇಳಿದ್ದಾರೆ.
ಚಂದ್ರಯಾನ -3 ಮಿಷನ್ನ ಲ್ಯಾಂಡರ್ ಮಾಡ್ಯೂಲ್ (ಎಲ್ಎಂ) ನ ಕಕ್ಷೆಯನ್ನು ಯಶಸ್ವಿಯಾಗಿ ಕಡಿಮೆ ಮಾಡಿ, ಚಂದ್ರನಿಗೆ ಮತ್ತಷ್ಟು ಹತ್ತಿರ ತರಲಾಗಿದೆ ಎಂದು ಇಸ್ರೋ ಹೇಳಿದೆ. ಎಲ್ಎಂ ಈಗ ಆಂತರಿಕ ತಪಾಸಣೆಗೆ ಒಳಗಾಗಲಿದೆ ಎಂದು ಅದು ಮಾಹಿತಿ ನೀಡಿದೆ. ಜುಲೈ 14 ರಂದು ಉಡಾವಣೆಯಾದ ನಂತರ, ಚಂದ್ರಯಾನ -3 ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ನಂತರ ಆಗಸ್ಟ್ 6, 9, 14 ಮತ್ತು 16 ರಂದು ಉಪಗ್ರಹದ ಮೇಲೆ ಕಕ್ಷೆ ಕಡಿತ ಮಾಡಲಾಯಿತು.
ಚಂದ್ರಯಾನ-3 ಮಿಷನ್ ಉದ್ದೇಶಗಳು
ಚಂದ್ರಯಾನ -3 ಮೂರು ಪ್ರಮುಖ ಉದ್ದೇಶಗಳನ್ನು ಹೊಂದಿದೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವುದು. ಚಂದ್ರನ ಮೇಲೆ ರೋವರ್ ತಿರುಗಾಟ ಹಾಗೂ ಆಂತರಿಕ ಪ್ರಯೋಗಗಳನ್ನು ನಡೆಸುವುದು. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಭಾರತವು ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾದ ನಂತರ ಚಂದ್ರನ ಮೇಲೆ ಇಳಿಯುವ ವಿಶ್ವದ ನಾಲ್ಕನೇ ದೇಶವಾಗಲಿದೆ ಮತ್ತು ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸುವ ಏಕೈಕ ರಾಷ್ಟ್ರವಾಗಲಿದೆ.
ಚಂದ್ರನ ದಕ್ಷಿಣ ಧ್ರುವವು ವಿಜ್ಞಾನಿಗಳಿಗೆ ವಿಶೇಷ ಆಸಕ್ತಿ ಕೆರಳಿಸಿದೆ. ಶಾಶ್ವತವಾಗಿ ನೆರಳು ಹೊಂದಿರುವ ಧ್ರುವ ಕುಳಿಗಳು ನೀರನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಬಂಡೆಗಳಲ್ಲಿ ಹೆಪ್ಪುಗಟ್ಟಿದ ನೀರನ್ನು ಭವಿಷ್ಯದ ಅನ್ವೇಷಕರು ಗಾಳಿ ಮತ್ತು ರಾಕೆಟ್ ಇಂಧನವಾಗಿ ಪರಿವರ್ತಿಸಬಹುದು ಎನ್ನಲಾಗುತ್ತಿದೆ.