Site icon Vistara News

Chandrayaan 3: ಇಸ್ರೋದ ಹೆಮ್ಮೆಯ ‘ಚಂದ್ರಯಾನ-3’ ಉಡಾವಣೆ ಯಶಸ್ಸಿನ ಹಿಂದೆ ‘ರಾಕೆಟ್ ವುಮನ್’ ಶ್ರಮ!

Ritu Karidhal

ನವದೆಹಲಿ: ಚಂದ್ರಯಾನ -3 ಮಿಷನ್ (Chandrayaan 3) ನೌಕೆಯನ್ನು ಹೊತ್ತ ಎಲ್‌ವಿಎಂ 3 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದೆ. ಭಾರತದ ಮಟ್ಟಿಗೆ ಇದು ಮಹತ್ವದ ಮಿಷನ್ ಆಗಿದೆ. 2019ರಲ್ಲಿ ಚಂದ್ರಯಾನ 2 (Chandrayaan-2) ವೈಫಲ್ಯ ಕಂಡಿದ್ದರಿಂದ ಚಂದ್ರಯಾನ-3ಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಚಂದ್ರಯಾನ 3 ನೌಕೆಯಲ್ಲಿ ಲ್ಯಾಂಡರ್, ರೋವರ್, ಪ್ರಪಲ್ಷನ್ ಮಾಡ್ಯೂಲ್ ಸೇರಿ ಒಟ್ಟು 6 ಪೇ ಲೋಡ್‌ಗಳಿರಲಿವೆ. ಅಂದ ಹಾಗೆ, ಈ ಮಹತ್ವದ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿರುವವರು ಭಾರತದ ರಾಕೆಟ್ ವುಮನ್ (Rocket Woman of India) ಎಂದು ಕರೆಯಿಸಿಕೊಳ್ಳುವ ವಿಜ್ಞಾನಿ ರಿತು ಕರಿದಾಲ್ ಶ್ರೀವಾಸ್ತವ್ (Ritu Karidhal Srivastava) ಅವರು.

ಉತ್ತರ ಪ್ರದೇಶದ ಲಕ್ನೋ ಮೂಲದ ರಿತು ಅವರು ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಅವರು ಚಂದ್ರಯಾನ ಮಿಷನ್ 3 ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದಾರೆ. ಅಂದರೆ, ಈ ಮಿಷನ್‌ನ ಸಂಪೂರ್ಣ ಹೊಣೆ ಅವರನ್ನು ಹೊತ್ತುಕೊಂಡಿದ್ದಾರೆ.

ಲಕ್ನೋದಲ್ಲಿ ಜನಿಸಿದ ರಿತು ಅಲ್ಲಿಯೇ ಬೆಳೆದಿದ್ದಾರೆ. ಲಕ್ನೋ ವಿವಿಯಿಂದ ಫಿಜಿಕ್ಸ್‌ನಲ್ಲಿ ಎಂಎಸ್‌ಸಿ ಪದವಿ ಪಡೆದುಕೊಂಡಿದ್ದಾರೆ. ಬಳಿಕ ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಏರೋಸ್ಪೇಸ್‌ನಲ್ಲಿ ತಜ್ಞತೆಯನ್ನು ಸಾಧಿಸಿರುವ ಅವರು ಇಸ್ರೋ ಸೇರಿಕೊಂಡು ವಿಜ್ಞಾನಿಯಾದರು. 1997ರಿಂದ ಇಸ್ರೋಗೆ ಕೆಲಸ ಮಾಡುತ್ತಿರುವ ರಿತು ಅವರನ್ನು ರಾಕೆಟ್ ವುಮನ್ ಆಫ್ ಇಂಡಿಯಾ ಎಂದೂ ಕರೆಯುತ್ತಾರೆ.

ಯಂಗ್ ಸೈಂಟಿಸ್ಟ್ ಅವಾರ್ಡ್, ಇಸ್ರೋ ಟೀಂ ಅವಾರ್ಡ್, ಎಎಸ್ಐ ಟೀಂ ಅವಾರ್ಡ್, ಸೊಸೈಟಿ ಆಫ್ ಇಂಡಿಯಾ ಏರೋಸ್ಪೇಸ್ ಟೆಕ್ನಾಲಜಿ ಆ್ಯಂಡ್ ಇಂಡ್‌ಸ್ಟ್ರೀಸ್ ಏರೋಸ್ಪೇಸ್ ವುಮನ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

Chandrayaan 3: ಚಂದ್ರಯಾನಕ್ಕೆ ಕುಂದಾನಗರಿ ಸಾಥ್;‌ ವಿಜ್ಞಾನಿ ಪ್ರಕಾಶ್‌ ಪೆಡ್ನೇಕರ್‌ ಭಾಗಿ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ 3 (Chandrayaan 3) ಉಡಾವಣೆಗೊಂಡಿದೆ. ಜಗತ್ತೇ ಕಾತರದಿಂದ ಕಾಯುತ್ತಿರುವ ಈ ಮಹತ್ವಾಕಾಂಕ್ಷಿ ಪಯಣ ಶ್ರೀಹರಿ ಕೋಟಾದ (Sriharikota) ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ (Satish Dhawan Space center) ಆರಂಭವಾಗಿದೆ. ಇದು ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೊಂದು ಐತಿಹಾಸಿಕ ಮೈಲುಗಲ್ಲಾಗಿದೆ.

ಇಂಥ ಅಪೂರ್ವ ಚಂದ್ರಯಾನಕ್ಕೆ ಬಲ ತುಂಬಿದ ರಾಕೆಟ್‌ ಮತ್ತು ಲಾಂಚರ್‌ಗಳ ಬಿಡಿಭಾಗ ತಯಾರಾಗಿದ್ದು ಬೆಳಗಾವಿಯಲ್ಲಿ. ಹೌದು, ಜಗತ್ತೇ ಕೌತುಕದಿಂದ ಕಾಯುತ್ತಿರುವ ಚಂದ್ರಯಾನ-3 ರಾಕೆಟ್‌ಗೆ ಬಳಸಿದ್ದ ಬಿಡಿಭಾಗ ತಯಾರಿಕೆಯಾಗಿದ್ದು ಕುಂದಾನಗರಿಯಲ್ಲಿ. ಬೆಳಗಾವಿಯ ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈ ಲಿಮಿಟೆಡ್‌ನಲ್ಲಿ ಬಿಡಿಭಾಗ ತಯಾರಿಕೆ ನಡೆದಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ದೀಪಕ್ ಧಡೂತಿ ತಿಳಿಸಿದ್ದಾರೆ.

ʻʻಚಂದ್ರಯಾನ-3 ಪ್ರಯಾಣ ಬೆಳೆಸಲಿರುವ ರಾಕೆಟ್, ಲಾಂಚರ್‌ಗೆ ಬಿಡಿಭಾಗ ನಾವೇ ತಯಾರಿಸಿದ್ದೇವೆ. ಚಂದ್ರಯಾನ-2 ಕೊನೆಯ ಘಳಿಗೆಯಲ್ಲಿ ವಿಫಲವಾಯಿತು, ಚಂದ್ರಯಾನ-3 ಯಶಸ್ವಿಯಾಗಲಿದೆʼʼ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸರ್ವೋ ಕಂಟ್ರೋಲರ್ ಏರೋಸ್ಪೇಸ್ ಇಂಡಿಯಾ ಪ್ರೈ ಲಿ ಕಳೆದ 15 ವರ್ಷಗಳಿಂದ ಇಸ್ರೋ ಜತೆಗೆ ಕೆಲಸ ಮಾಡುತ್ತಿದೆ. ಈ ಹಿಂದೆ ಮಂಗಳಯಾನ ಯಶಸ್ವಿಯಾದ ರಾಕೆಟ್‌ಗೂ ಬೆಳಗಾವಿಯಿಂದಲೇ ಬಿಡಿಭಾಗ ಪೂರೈಸಲಾಗಿತ್ತು ಎಂದು ದೀಪಕ್‌ ಧಡೂತಿ ತಿಳಿಸಿದ್ದಾರೆ. ʻʻಸ್ವದೇಶಿ ಮತ್ತು ವಿದೇಶಿ ಟೆಕ್ನಾಲಜಿ ಬಳಸಿ ಬಿಡಿಭಾಗಗಳನ್ನು ಇಸ್ರೋಗೆ ಪೂರೈಕೆ ಮಾಡಲಾಗಿದೆʼʼ ಎಂದು ಹೇಳಿರುವ ದೀಪಕ್‌ ದಢೂತಿ, ಇಸ್ರೋ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ, ಇದು ಕರುನಾಡೇ ಹೆಮ್ಮೆ ಡುವ ಸಂಗತಿʼʼ ಎಂದು ಹೇಳಿದ್ದಾರೆ. ಬೆಳಗಾವಿಯ ವಿಜ್ಞಾನಿ ಪ್ರಕಾಶ್‌ ಪೆಡ್ನೇಕರ್‌ ಅವರು ಈ ಚಂದ್ರಯಾನದಲ್ಲಿ ಭಾಗಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ಪಡ್ನೇಕರ್ ಚಂದ್ರಯಾನ-3 ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಅವರು ಕಳೆದ 5 ವರ್ಷಗಳಿಂದ ಶ್ರೀಹರಿಕೋಟಾದಲ್ಲಿ ವಿಜ್ಞಾನಿಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರಯಾನ 3 ಉಡಾವಣೆ ಯಶಸ್ವಿ; ಆದರೂ, ಆಗಸ್ಟ್‌ 23ರವರೆಗೆ ನಾವೇಕೆ ಕಾಯಬೇಕು?

Exit mobile version