ಕರಾಚಿ: ಈ ಹಿಂದೆ ಇಸ್ರೋವನ್ನು (ISRO) ಅಪಹಾಸ್ಯ ಮಾಡಿದ್ದ ಪಾಕ್ ರಾಜಕೀಯ ನಾಯಕನೊಬ್ಬ ಇದೀಗ ಚಂದ್ರಯಾನ- 3ನ್ನು (Chandrayaan 3) ಶ್ಲಾಘಿಸಿದ್ದು, ಇದನ್ನು ʼಮನುಕುಲಕ್ಕೆ ಐತಿಹಾಸಿಕ ಕ್ಷಣ’ ಎಂದು ಕರೆದಿದ್ದಾರೆ.
ಪಾಕಿಸ್ತಾನದ (pakistan) ಮಾಜಿ ಸಚಿವ ಫವಾದ್ ಹುಸೇನ್ (Fawad Hussain) ಭಾರತದ ಮೂರನೇ ಚಂದ್ರಯಾನ ʼಚಂದ್ರಯಾನ 3′ ಅನ್ನು ಶ್ಲಾಘಿಸಿದ್ದಾರೆ. ಇದು “ಮನುಕುಲಕ್ಕೆ ಐತಿಹಾಸಿಕ ಕ್ಷಣ” ಎಂದು ಕರೆದಿದ್ದಾರೆ. ಭಾರತವನ್ನು ಅಭಿನಂದಿಸುತ್ತಾ, ಬುಧವಾರ ಸಂಜೆ ಆಗಲಿರುವ ಚಂದ್ರಯಾನ-3ರ ಲ್ಯಾಂಡಿಂಗ್ (chandrayaan 3 landing) ಅನ್ನು ನೇರ ಪ್ರಸಾರ ಮಾಡುವಂತೆ ತಮ್ಮ ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ಪಾಕ್ ಮಾಧ್ಯಮಗಳು ನಾಳೆ ಸಂಜೆ 6:15ಕ್ಕೆ ಚಂದ್ರಯಾನದ ಚಂದ್ರನ ಲ್ಯಾಂಡಿಂಗ್ ಅನ್ನು ನೇರಪ್ರಸಾರ ಮಾಡಬೇಕು. ಮಾನವ ಕುಲಕ್ಕೆ, ವಿಶೇಷವಾಗಿ ಭಾರತದ ಜನ, ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಸಮುದಾಯಕ್ಕೆ ಇದು ಐತಿಹಾಸಿಕ ಕ್ಷಣ. ಅಭಿನಂದನೆಗಳು” ಎಂದು ಅವರು ಎಕ್ಸ್ (ಟ್ವಿಟರ್)ನಲ್ಲಿ ಬರೆದಿದ್ದಾರೆ. ಫವಾದ್ ಹುಸೇನ್ ಅವರು ಜುಲೈ 14ರಂದು ಇಸ್ರೋ ಚಂದ್ರಯಾನ ಉಡಾವಣೆ ನಡೆಸಿದಾಗಲೂ ಭಾರತವನ್ನು ಅಭಿನಂದಿಸಿದ್ದರು.
ಫವಾದ್ ಈ ಹಿಂದೆ ಇಮ್ರಾನ್ ಖಾನ್ ಆಡಳಿತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದರು. 2019ರಲ್ಲಿ ಚಂದ್ರಯಾನ-2 ಮಿಷನ್ ಸಮಯದಲ್ಲಿ ಲ್ಯಾಂಡರ್ ವಿಫಲಗೊಂಡಾಗಿ ಫವಾದ್ ಹುಸೇನ್ ಇಸ್ರೋವನ್ನು ಟ್ರೋಲ್ ಮಾಡಿದ್ದರು. ಎರಡನೇ ಚಂದ್ರಯಾನಕ್ಕೆ ₹ 900 ಕೋಟಿ ಖರ್ಚು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದರು. ವಿಕ್ರಮ್ ಲ್ಯಾಂಡರ್ ಇಸ್ರೋದೊಂದಿಗೆ ಸಂಪರ್ಕ ಕಳೆದುಕೊಂಡಾಗ, ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ‘ಇಂಡಿಯಾ ಫೇಲ್ಡ್’ ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದರು.
ಇದನ್ನೂ ಓದಿ: Chandrayaan 3: ಲ್ಯಾಂಡಿಂಗ್ ಮುಂಚಿನ ”ಆ ಭಯಾನಕ 17 ನಿಮಿಷಗಳು” ಇಸ್ರೋ ವಿಜ್ಞಾನಿ ಹೇಳುವುದೇನು?