Site icon Vistara News

Chandrayaan 3: ಭೂ ಕಕ್ಷೆ ತೊರೆದ ಚಂದ್ರಯಾನ-3, ಮುಂದಿನ ಸ್ಟಾಪ್‌ ಚಂದ್ರ

ISRO Launches Chandrayaan 3

ISRO Successfully Launches Chandrayaan 3 Mission

ಹೊಸದಿಲ್ಲಿ: ಚಂದ್ರಯಾನ -3 (Chandrayaan 3) ಭೂಮಿಯ ಕಕ್ಷೆಯಲ್ಲಿ (earth orbit) ಐದು ಸುತ್ತುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸೋಮವಾರ ತಡರಾತ್ರಿ ಭೂಕಕ್ಷೆಯನ್ನು ತೊರೆದು ಚಂದ್ರನತ್ತ ಹೊರಟಿದೆ.

ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಯಾದ ಹದಿನೈದು ದಿನಗಳ ನಂತರ ಭೂಮಿಯ ಸುತ್ತ ತನ್ನ ಐದು ಸುತ್ತುಗಳನ್ನು ಚಂದ್ರಯಾನ ನೌಕೆ ಪೂರ್ಣಗೊಳಿಸಿದೆ ಮತ್ತು ಮಿಷನ್‌ನ ಮುಂದಿನ ಹಂತಕ್ಕೆ ಚಂದ್ರನ ಕಡೆಗೆ ಹೊರಟಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ತಡರಾತ್ರಿ ಘೋಷಿಸಿತು.

“ಚಂದ್ರಯಾನ-3 ಭೂಮಿಯ ಸುತ್ತ ತನ್ನ ಕಕ್ಷೆಯನ್ನು ಪೂರ್ಣಗೊಳಿಸಿದೆ ಮತ್ತು ಚಂದ್ರನ ಕಡೆಗೆ ಹೊರಟಿದೆ. ISTRACನಿಂದ ಯಶಸ್ವಿ ಉಡಾವಣೆ ನಡೆಸಲಾಗಿದ್ದು, ISRO ಬಾಹ್ಯಾಕಾಶ ನೌಕೆಯನ್ನು ಟ್ರಾನ್ಸ್‌ಲೂನಾರ್ ಪಥದಲ್ಲಿ ಮುಂದುವರಿಸಿದೆ. ಮುಂದಿನ ನಿಲ್ದಾಣ: ಚಂದ್ರ. ಚಂದ್ರನ ಕಕ್ಷೆಯಲ್ಲಿ ಆಗಸ್ಟ್ 5ರಂದು ನೌಕೆಯನ್ನು ಕೂರಿಸಲು ಯೋಜಿಸಲಾಗಿದೆ” ಎಂದು ಇಸ್ರೋ ಟ್ವೀಟ್ ಮಾಡಿದೆ.

ಸೋಮವಾರ ಮಧ್ಯರಾತ್ರಿ 12ರಿಂದ 12.30ರ ನಡುವೆ ಚಂದ್ರನತ್ತ ನೌಕೆಯನ್ನು ಚಲಿಸಲಾಗಿದೆ. ಪ್ರಸ್ತುತ ಚಂದ್ರಯಾನ ಯೋಜನೆ ನಿಗದಿತ ಸಮಯಕ್ಕೆ ಸರಿಯಾಗಿ ನಡೆಯುತ್ತಿದೆ ಮತ್ತು ಬಾಹ್ಯಾಕಾಶ ನೌಕೆಯ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 14ರಂದು ಮಧ್ಯಾಹ್ನ ಚಂದ್ರಯಾನ-3 ಅನ್ನು ಇಸ್ರೋ ಆನ್-ಬೋರ್ಡ್ ಲಾಂಚ್ ವೆಹಿಕಲ್ ಮಾರ್ಕ್-3 ಮೂಲಕ ಯಶಸ್ವಿಯಾಗಿ ಕಕ್ಷೆಗೆ ಉಡಾಯಿಸಲಾಯಿತು. ಇದನ್ನು ಹಿಂದೆ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ Mk-III ಎಂದು ಕರೆಯಲಾಗುತ್ತಿತ್ತು. 40 ದಿನಗಳ ಹಾರಾಟದ ನಂತರ, ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾಗಿ ಲ್ಯಾಂಡಿಂಗ್ ಮಾಡುವ ನಿರೀಕ್ಷೆಯಿದೆ. ಅದಾದರೆ ಭಾರತವು ಚಂದ್ರನ ಮೇಲ್ಮೈಯಲ್ಲಿ ಇಳಿದ ನಾಲ್ಕನೇ ದೇಶ ಮತ್ತು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೊದಲ ದೇಶವಾಗುತ್ತದೆ.

ಇದನ್ನೂ ಓದಿ: Chandrayaan 3: ಚಂದ್ರನ ಪಥದತ್ತ ಚಂದ್ರಯಾನ-3 ನೌಕೆ; ಇಂದು ರಾತ್ರಿ ಮಹತ್ವದ ಪ್ರಕ್ರಿಯೆ!

Exit mobile version