Site icon Vistara News

Chandrayaan 3: ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವವನ್ನು ತಲುಪಿಯೇ ಇಲ್ಲ ಎಂಬ ಚೀನಾ ವಿಜ್ಞಾನಿ!

chandrayaan 3 moon night

ಹೊಸದಿಲ್ಲಿ: ಭಾರತ ಮತ್ತು ಚೀನಾಗಳ ನಡುವಿನ ಚಕಮಕಿ ಈಗ ಬಾಹ್ಯಾಕಾಶ ರೇಸ್‌ಗೂ (space race) ತಲುಪಿದೆ. ಚಂದ್ರಯಾನ 3ರ (Chandrayaan 3) ಲ್ಯಾಂಡಿಂಗ್ ಸೈಟ್ ಚಂದ್ರನ ದಕ್ಷಿಣ ಧ್ರುವದಲ್ಲಿಲ್ಲ (South pole) ಎಂದು ಚೀನಾದ ಉನ್ನತ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಕಳೆದ ತಿಂಗಳು ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುವುದರೊಂದಿಗೆ (moon landing), ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವೆನಿಸಿತ್ತು. ಜತೆಗೆ ಈ ವಿಚಾರದಲ್ಲಿ ಚೀನಾವನ್ನೂ ಹಿಂದೆ ಹಾಕಿತ್ತು. ಇದು ಚೀನಾವನ್ನು ಕೆರಳಿಸಿದೆ.

ಚೈನೀ ಭಾಷೆಯ ಸೈನ್ಸ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಚೀನಾದ ಚಂದ್ರನ ಪರಿಶೋಧನಾ ಕಾರ್ಯಕ್ರಮದ ಪಿತಾಮಹ ಎಂದು ಶ್ಲಾಘಿಸಲ್ಪಟ್ಟ ಓಯಾಂಗ್ ಜಿಯುವಾನ್ ಎಂಬ ವಿಜ್ಞಾನಿ ಭಾರತದ ಸಾಧನೆಯನ್ನು ಸಂಶಯಿಸಿದ್ದಾರೆ. 69 ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿರುವ ಚಂದ್ರಯಾನ-3 ಲ್ಯಾಂಡಿಂಗ್ ಸೈಟ್ ದಕ್ಷಿಣ ಧ್ರುವಕ್ಕೆ ಹತ್ತಿರದಲ್ಲಿಲ್ಲ. 88.5 ಮತ್ತು 90ರ ನಡುವೆ ದಕ್ಷಿಣ ಧ್ರುವ ಇದೆಯೆಂದು ವ್ಯಾಖ್ಯಾನಿಸಬಹದುಉ ಎಂದಿದ್ದಾರೆ.

ಭೂಮಿಯ ಮೇಲೆ, 69 ಡಿಗ್ರಿ ದಕ್ಷಿಣವು ಅಂಟಾರ್ಕ್ಟಿಕ್ ವೃತ್ತದೊಳಗೆ ಇರುತ್ತದೆ. ಆದರೆ ಚಂದ್ರನಲ್ಲಿ ಇದು ದಕ್ಷಿಣ ಧ್ರುವಕ್ಕೆ ಹೆಚ್ಚು ಹತ್ತಿರದಲ್ಲಿದೆ. ಚಂದ್ರಯಾನ-3 ಧ್ರುವ ಪ್ರದೇಶದಿಂದ 619 ಕಿಲೋಮೀಟರ್ (385 ಮೈಲುಗಳು) ದೂರದಲ್ಲಿದೆ ಎಂದು ಒಯಾಂಗ್ ಹೇಳಿದರು.

ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ನಂತರ, ಬೀಜಿಂಗ್ ಮೂಲದ ಹಿರಿಯ ಬಾಹ್ಯಾಕಾಶ ತಜ್ಞ ಪಾಂಗ್ ಝಿಹಾವೊ ಅವರು ಕೂಡ ಚೀನಾವು ಇದಕ್ಕಿಂತ ಉತ್ತಮ ತಂತ್ರಜ್ಞಾನವನ್ನು ಹೊಂದಿದೆ ಎಂದು ಹೇಳಿದ್ದರು.

“ಚೀನಾದ ಬಾಹ್ಯಾಕಾಶ ಕಾರ್ಯಕ್ರಮವು 2010ರಲ್ಲಿ ಚಾಂಗ್ಇ-2 ಅನ್ನು ಉಡಾವಣೆ ಮಾಡಿದ ನಂತರ ತನ್ನ ಆರ್ಬಿಟರ್‌ ಹಾಗೂ ಲ್ಯಾಂಡರ್‌ಗಳನ್ನು ನೇರವಾಗಿ ಭೂಮಿಯಿಂದ ಚಂದ್ರನ ಕಕ್ಷೆಗೆ ಕಳುಹಿಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಉಡಾವಣಾ ವಾಹನಗಳ ಸಾಮರ್ಥ್ಯ ಸೀಮಿತ. ಚೀನಾ ಬಳಸಿದ ಎಂಜಿನ್ ಕೂಡ ಹೆಚ್ಚು ಸುಧಾರಿತವಾಗಿದೆ” ಎಂದು ಜಿಹಾವೊ ಹೇಳಿದ್ದರು.

ಆದರೂ ಭಾರತದ ಚಂದ್ರಯಾನ-3 ಇತರ ಬಾಹ್ಯಾಕಾಶ ನೌಕೆಗಳಿಗಿಂತ ಹೆಚ್ಚು ದಕ್ಷಿಣಕ್ಕೆ ಹೋಗಿದೆ. ಪ್ರಸ್ತುತ ಇಸ್ರೋ (ISRO) ಚಂದ್ರಯಾನ 3ರ ವಿಕ್ರಮ್ ಲ್ಯಾಂಡರ್ (Vikram lander) ಮತ್ತು ಪ್ರಗ್ಯಾನ್ ರೋವರ್‌ನೊಂದಿಗೆ (Pragyan rover) ಮರಳಿ ಸಂಪರ್ಕ ಸ್ಥಾಪಿಸಲು ಕಾಯುತ್ತಿದೆ. ಅಕ್ಟೋಬರ್ 6ರಂದು ಚಂದ್ರನ ಮೇಲೆ ಮುಂದಿನ ಸೂರ್ಯಾಸ್ತವಾಗುವವರೆಗೆ ಯಂತ್ರವನ್ನು ಪುನರುಜ್ಜೀವಗೊಳಿಸುವ ಪ್ರಯತ್ನಗಳನ್ನು ಮುಂದುವರಿಸಿದೆ.

2019ರಲ್ಲಿ ಚಂದ್ರನಲ್ಲಿ ಮೊದಲ ಬಾರಿಗೆ ಇಳಿದ ಚೀನಾದ ಚಾಂಗ್ 4, ದಕ್ಷಿಣಕ್ಕೆ 45 ಡಿಗ್ರಿಗಳನ್ನು ಮುಟ್ಟಿತು. 1968ರಲ್ಲಿ 41 ಡಿಗ್ರಿ ದಕ್ಷಿಣದಲ್ಲಿ NASAದ ಸರ್ವೇಯರ್ 7 ಚಂದ್ರನನ್ನು ತಲುಪಿತ್ತು. ನಾಸಾದ ಅಪೊಲೊ ಕಾರ್ಯಕ್ರಮ ಕೊನೆಗೊಂಡ ಅರ್ಧ ಶತಮಾನದ ಬಳಿಕ ಚಂದ್ರನ ಮೇಲೆ ಮತ್ತೆ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆಗಳಿಗಾಗಿ US ಮತ್ತು ಚೀನಾ ಎರಡೂ ಚಿಂತಿಸುತ್ತಿವೆ.

ಇದನ್ನೂ ಓದಿ: Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ

Exit mobile version