Site icon Vistara News

ಪೊಲೀಸ್‌ ಭದ್ರತೆ; 1 ಕೋಟಿ ರೂ. ಬಾಕಿ ಉಳಿಸಿಕೊಂಡ ಗೌತಮ್‌ ನವ್ಲಾಖಾ, ಏನಿದು ಕೇಸ್?

Gautam Navlakha

Charges for Gautam Navlakha’s protection under house arrest exceed ₹1 crore‌

ಮುಂಬೈ: ಭೀಮಾ ಕೋರೆಗಾಂವ್‌ ಪಿತೂರಿ (Bhima Koregaon Conspiracy) ಪ್ರಕರಣದಲ್ಲಿ ಬಂಧಿತರಾಗಿರುವ ಮಾನವ ಹಕ್ಕುಗಳ ಹೋರಾಟಗಾರ ಗೌತಮ್‌ ನವ್ಲಾಖಾ ಅವರು (Gautam Navlakha) ಒಂದು ಕೋಟಿ ರೂ.ಗಿಂತ ಅಧಿಕ ಮೊತ್ತದ ಭದ್ರತಾ ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಗೌತಮ್‌ ನವ್ಲಾಖಾ ಅವರು ಗೃಹಬಂಧನದಲ್ಲಿದ್ದು, ಅವರ ನಿವಾಸಕ್ಕೆ ಮುಂಬೈ ಪೊಲೀಸರು ದಿನದ 24 ಗಂಟೆಯೂ ಭದ್ರತೆ ಒದಗಿಸಿದ್ದಾರೆ. ಆದರೆ, ಗೌತಮ್‌ ನವ್ಲಾಖಾ ಅವರು ಭದ್ರತೆ ಒದಗಿಸಿದ್ದಕ್ಕೆ 1.01 ಕೋಟಿ ರೂ. ಪಾವತಿಸಬೇಕಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ನವಿ ಮುಂಬೈನಲ್ಲಿ ಗೌತಮ್‌ ನವ್ಲಾಖಾ ಅವರ ನಿವಾಸವಿದ್ದು, ಅವರು 2022ರ ನವೆಂಬರ್‌ 19ರಿಂದ ಗೃಹಬಂಧನದಲ್ಲಿದ್ದಾರೆ. 2022ರ ನವೆಂಬರ್‌ 19ರಿಂದ 2023ರ ಆಗಸ್ಟ್‌ 31ರ ಅವಧಿಯಲ್ಲಿ ಅವರ ನಿವಾಸಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಇದಕ್ಕಾಗಿ ಗೌತಮ್‌ ನವ್ಲಾಖಾ ಅವರು 1.12 ಕೋಟಿ ರೂ. ಪಾವತಿಸಬೇಕಿದೆ. ಇದಕ್ಕೂ ಮೊದಲು ಸುಪ್ರೀಂ ಕೋರ್ಟ್‌ ಆದೇಶಿಸಿದ ಬಳಿಕ ಗೌತಮ್‌ ನವ್ಲಾಖಾ ಅವರು 10.40 ಲಕ್ಷ ರೂ. ಪಾವತಿಸಿದ್ದಾರೆ. ಇನ್ನೂ 1.01 ಕೋಟಿ ರೂ. ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.

ಕಾನೂನಿನ ಪ್ರಕಾರ, ಗೃಹಬಂಧನದಲ್ಲಿರುವ ವ್ಯಕ್ತಿಯ ಮನೆಗೆ ಒದಗಿಸುವ ಭದ್ರತೆಯ ವೆಚ್ಚವನ್ನು ಅದೇ ವ್ಯಕ್ತಿ ಭರಿಸಬೇಕಿದೆ. ಹಾಗಾಗಿ, ಗೌತಮ್‌ ನವ್ಲಾಖಾ ಅವರು ಬಾಕಿ ಉಳಿಸಿಕೊಂಡಿರುವ ಪ್ರಕರಣ ಈಗ ಬಯಲಾಗಿದೆ. “ಗೌತಮ್‌ ನವ್ಲಾಖಾ ಅವರ ನಿವಾಸಕ್ಕೆ ದಿನದ 24 ಗಂಟೆಯೂ ಭದ್ರತೆ ಒದಗಿಸಲಾಗಿದೆ. ನಾಲ್ವರು ಗಾರ್ಡ್‌ಗಳು ಶಿಫ್ಟ್‌ಗಳ ಆಧಾರದ ಮೇಲೆ ಅವರ ಮನೆಗೆ ಭದ್ರತೆ ಒದಗಿಸಿದ್ದಾರೆ. ಭೀಮಾ ಕೋರೆಗಾಂವ್‌ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎಗೆ ಬಿಲಲ್‌ಗಳನ್ನು ಕಳುಹಿಸಲಾಗಿದೆ” ಎಂದು ನವಿ ಮುಂಬೈ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಏನಿದು ಭೀಮಾ ಕೋರೆಗಾಂವ್‌ ಪ್ರಕರಣ?

ಪುಣೆಯ ಶಾನಿವಾರ್ವಾಡದಲ್ಲಿ 2017ರ ಡಿಸೆಂಬರ್‌ 31ರಂದು ಎಲ್ಗರ್‌ ಪರಿಷತ್‌ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ಆಯೋಜನೆಗೆ ಮಾವೋವಾದಿಗಳು ಹಣಕಾಸು ನೆರವು ನೀಡಿದ್ದಾರೆ ಎಂಬ ಆರೋಪವಿದೆ. ಹಾಗೆಯೇ, ಸಮಾವೇಶದ ವೇಳೆ ಹಲವು ಹೋರಾಟಗಾರರು ಪ್ರಚೋದನಕಾರಿ ಭಾಷಣ ಮಾಡಿದ ಕಾರಣ ಹಿಂಸಾಚಾರ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 16 ಆರೋಪಿಗಳನ್ನು ಬಂಧಿಸಲಾಗಿದ್ದು, ಎನ್‌ಐಎ ತನಿಖೆ ನಡೆಸುತ್ತಿದೆ. ಗೌತಮ್‌ ನವ್ಲಾಖಾ ಕೂಡ ಈ ಪ್ರಕರಣದ ಆರೋಪಿಯಾಗಿದ್ದು, ನವಿ ಮುಂಬೈ ಜೈಲಿನಲ್ಲಿ ಮೂರು ವರ್ಷ ಇದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಗೃಹಬಂಧನದಲ್ಲಿರಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.

ಇದನ್ನೂ ಓದಿ: Amitabh Bachchan: ಕಚೇರಿ ಬಾಡಿಗೆಗೆ ನೀಡಿದ ಬಿಗ್‌ ಬಿ; ತಿಂಗಳ ರೆಂಟ್‌ ಇಷ್ಟೊಂದಾ?

Exit mobile version