Site icon Vistara News

Cheetah deaths: ಚೀತಾಗಳಿಗೆ ಮೃತ್ಯು ಕುಣಿಕೆಯಾಯಿತೇ ರೇಡಿಯೋ ಕಾಲರ್?

project cheetah

ಭೋಪಾಲ್:‌ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ವನ್ಯಜೀವಿ ಅರಣ್ಯದಲ್ಲಿ (Kuno national park) ಒಂದರ ನಂತರ ಒಂದರಂತೆ ಆಗುತ್ತಿರುವ ಚೀತಾಗಳ ಸಾವು (Cheetah deaths) , ಅವುಗಳಿಗೆ ಅಳವಡಿಸಿದ ರೇಡಿಯೋ ಕಾಲರ್‌ಗಳಿಂದಲೇ ಆಗುತ್ತಿರಬಹುದು ಎಂದು ತಜ್ಞರು ಅನುಮಾನಿಸಿದ್ದಾರೆ.

ಇದುವರೆಗೆ ಭಾರತಕ್ಕೆ ತಂದಿರುವ 20 ಚೀತಾಗಳಲ್ಲಿ 8 ಚೀತಾಗಳು ಸತ್ತಿವೆ. ಇವುಗಳಲ್ಲಿ ಮೂರು, ಮಾರ್ಚ್‌ನಲ್ಲಿ ಜನಿಸಿದ ಮರಿಗಳು. ಈ ಸಾವುಗಳಲ್ಲಿ ಕೆಲವು ಹೃದಯವೈಫಲ್ಯ, ಲೈಂಗಿಕ ಕ್ರಿಯೆಯ ವೇಳೆ ಉಂಟಾದ ಗಾಯ, ಒತ್ತಡ ಇತ್ಯಾದಿ ಅನಿವಾರ್ಯ ಸಂಗತಿಗಳಿಂದ ಆಗಿವೆ.

ಆದರೆ ಕಳೆದ ವಾರ ಸಂಭವಿಸಿದ ಎರಡು ಚೀತಾಗಳ ಮರಣಕ್ಕೆ ಅವುಗಳಿಗೆ ಅಳವಡಿಸಿದ ರೇಡಿಯೋ ಕಾಲರ್‌ ಕಾರಣ ಆಗಿರಬಹುದು ಎಂದು ತಜ್ಞರು ಅನುಮಾನಿಸುತ್ತಿದ್ದಾರೆ. ಇವುಗಳ ಚಲನವಲನದ ಮೇಲೆ ನಿಗಾ ಇಟ್ಟು ರಕ್ಷಿಸುವುದಕ್ಕಾಗಿಯೇ ರೇಡಿಯೋ ಕಾಲರ್‌ ಅಳವಡಿಸಲಾಗಿದೆ. ಆದರೆ ಇವುಗಳಿಂದ ಚೀತಾಗಳ ಕುತ್ತಿಗೆ ಸುತ್ತ ಗಾಯವಾಗಿ ಹುಣ್ಣಾಗಿದ್ದು, ಅದರಿಂದ ಹುಳುಗಳಾಗಿ ಚೀತಾಗಳು ಬವಣೆ ಅನುಭವಿಸಿ ಸತ್ತಿವೆ ಎಂದು ಹೇಳಲಾಗಿದೆ.

ಆದರೆ ಈ ತರ್ಕವನ್ನು ಪರಿಸರ ಮತ್ತು ಅರಣ್ಯ ಇಲಾಖೆ ಬಲವಾಗಿ ಅಲ್ಲಗಳೆದಿದೆ. ಎಲ್ಲ ಚೀತಾಗಳು ನೈಸರ್ಗಿಕ ಕಾರಣಗಳಿಂದಾಗಿ ಸತ್ತಿವೆ. ರೇಡಿಯೋ ಕಾಲರ್‌ ಕಾರಣ ಎನ್ನುವ ಮಾತು ನಿರಾಧಾರ ಎಂದು ಇಲಾಖೆ ಹೇಳಿದೆ. ʼʼಚೀತಾಗಳು ಯಾತನಾದಾಯಕ ಆಘಾತದಿಂದ ಸತ್ತಿವೆʼʼ ಎಂದು ಇಲಾಖೆಯ ಸಹಾಯಕ ಸಚಿವ ಅಶ್ವಿನಿ ಕುಮಾರ್‌ ಚೌಬೆ ಅವರು ರಾಜ್ಯಸಭೆಯಲ್ಲಿ ತಿಳಿಸಿದ್ದರು.

ಭಾರತದ ತೇವಾಂಶಭರಿತ ಮಳೆಗಾಲದಲ್ಲಿ ಇಂಥ ಗಾಯಗಳು ಹುಲಿ- ಚಿರತೆಯಂಥ ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿಗಳಲ್ಲಿ ಕಂಡುಬರುವುದು ಸಾಮಾನ್ಯ. ತೇವಾಂಶದ ಕಾರಣದಿಂದ ರೇಡಿಯೋ ಕಾಲರ್‌ ಧರಿಸಿದ ಪ್ರಾಣಿ ಕತ್ತಿನ ಸುತ್ತ ತುರಿಸಿಕೊಳ್ಳುತ್ತದೆ. ಅದು ಗಾಯವಾಗುತ್ತದೆ. ಚೀತಾಗಳು ಎದುರಿಸುತ್ತಿರುವ ಮೊದಲ ಭಾರತದ ಮಳೆಗಾಲ ಇದಾಗಿದೆ. ಆಫ್ರಿಕದಂಥ ಒಣಭೂಮಿಯಿಂದ ಬಂದ ಅವುಗಳಿಗೆ ಇಲ್ಲಿನ ಮಾನ್ಸೂನ್‌ನ ಒದ್ದೆ ವಾತಾವರಣ ಇನ್ನಷ್ಟೇ ಅಭ್ಯಾಸವಾಗಬೇಕಿದೆ.

ಕತ್ತಿನ ಸುತ್ತ ಚೀತಾಗಳ ತುಪ್ಪಳ ದಪ್ಪವಾಗಿದೆ. ಒದ್ದೆ ಹವಾಮಾನದಲ್ಲಿ ಇದು ಮೃದುವಾಗಿ, ತುರಿಕೆಯಾಗುವುದು ಸಾಧ್ಯ. ತುರಿಕೆಯಿಂದ ಚರ್ಮ ಬಿರಿದರೆ, ನೊಣಗಳು ಆ ಗಾಯದಲ್ಲಿ ಮೊಟ್ಟೆ ಇಟ್ಟು ಕ್ರಿಮಿಗಳು ಸೃಷ್ಟಿಯಾಗುತ್ತವೆ. ಬ್ಯಾಕ್ಟೀರಿಯಾಗಳು ದಾಳಿ ಮಾಡಿ, ಸೆಪ್ಟಿಸೇಮಿಯಾ ಕಾಣಿಸಿಕೊಳ್ಳುತ್ತದೆ. ಇದು ಸಾವಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಎಂಟು ಚೀತಾಗಳನ್ನು ನಮೀಬಿಯಾದಿಂದ, 12ನ್ನು ದಕ್ಷಿಣ ಆಫ್ರಿಕಾದಿಂದ ತರಿಸಿಕೊಳ್ಳಲಾಗಿತ್ತು. ಮಾರ್ಚ್‌ನಲ್ಲಿ ಇಲ್ಲಿ ಜನಿಸಿದ ಮರಿಗಳಲ್ಲಿ ಮೂರು ಅಪೌಷ್ಟಿಕತೆ, ನಿರ್ಜಲೀಕರಣದಿಂದ ಸತ್ತಿದ್ದವು. ಇತ್ತೀಚೆಗಿನ ಮೂರು ಚೀತಾಗಳ ಸಾವಿಗೆ ರೇಡಿಯೋ ಕಾಲರ್‌ ಕಾರಣವಿರಬಹುದು ಎಂದು ತಜ್ಞರು ಶಂಕಿಸಿದ್ದು, ಇತರ ಚೀತಾಗಳನ್ನು ಉಳಿಸಿಕೊಳ್ಳಲು ಕ್ಷಿಪ್ರವಾಗಿ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಕುನೊ ಅರಣ್ಯದಲ್ಲಿ ಮುಕ್ತವಾಗಿ ತಿರುಗಾಡಲು ಬಿಟ್ಟಿದ್ದ 5 ಚೀತಾಗಳನ್ನು ಮತ್ತೆ ಅವುಗಳ ಸುರಕ್ಷಿತ ಆವರಣಕ್ಕೆ ತಂದು, ಅವುಗಳ ರೇಡಿಯೋ ಕಾಲರ್‌ ಕಳಚಿಬಿಡಲಾಗಿದೆ.

ಇದನ್ನೂ ಓದಿ: Cheetah Dies: ಕುನೊದಲ್ಲಿ 8ನೇ ಚೀತಾ ಸಾವು; ಕೇಂದ್ರದ ಯೋಜನೆಗೆ ಹಿನ್ನಡೆ?

Exit mobile version