Site icon Vistara News

Cheetah in India: 12 ಚೀತಾಗಳು ಇಂದು ಭಾರತಕ್ಕೆ; ಈ 10 ಅಂಶ ತಿಳಿದಿರಲಿ

cheetah transfer

ನವ ದೆಹಲಿ: ದಕ್ಷಿಣ ಆಫ್ರಿಕದಿಂದ 12 ಚಿರತೆಗಳು ವಿಶೇಷ ವಿಮಾನದಲ್ಲಿ ಇಲ್ಲಿ ಭಾರತಕ್ಕೆ ಆಗಮಿಸಲಿವೆ. ಕಳೆದ ವರ್ಷ ನಮೀಬಿಯಾದಿಂದ ತರಿಸಲಾದ 8 ಚೀತಾಗಳನ್ನು ಇವು ಸೇರಿಕೊಳ್ಳಲಿವೆ. ದಕ್ಷಿಣ ಆಫ್ರಿಕಾದಿಂದ ಇವು ಶುಕ್ರವಾರ ಪ್ರಯಾಣ ಬೆಳೆಸಿವೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಈ ಚೀತಾಗಳ ಸ್ಥಳಾಂತರದ ಬಗ್ಗೆ ಈ ಹತ್ತು ಸಂಗತಿಗಳು ನಿಮಗೆ ತಿಳಿದಿರಲಿ:

೧.. ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ಕಾರ್ಗೋ ವಿಮಾನವು ಹನ್ನೆರಡು ಚೀತಾಗಳನ್ನು ತರಲಿದ್ದು, ಇವುಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗುತ್ತದೆ.

೨. ಶುಕ್ರವಾರ 12 ಚಿರತೆಗಳ ಪ್ರಜ್ಞೆ ತಪ್ಪಿಸಿ ವಿಶೇಷ ಕ್ರೇಟ್‌ಗಳಲ್ಲಿ ಸೇರಿಸಲಾಗಿದೆ. ಜೋಹಾನ್ಸ್‌ಬರ್ಗ್‌ನ ಟ್ಯಾಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇವು ಹೊರಟಿವೆ.

೩. ದಕ್ಷಿಣ ಆಫ್ರಿಕಾ ಒದಗಿಸುವುದಾಗಿ ಭರವಸೆ ನೀಡಿರುವ ಚೀತಾಗಳ ಸಂಖ್ಯೆಯಲ್ಲಿ ಇದು ಮೊದಲ ಕಂತು. ಇದರಲ್ಲಿ 7 ಗಂಡು ಮತ್ತು 5 ಹೆಣ್ಣು ಚೀತಾಗಳಿವೆ.

೪. ಆಫ್ರಿಕನ್ ಚೀತಾವನ್ನು ಹೋಲುವ, ಆದರೆ ಪ್ರತ್ಯೇಕವಾದ ಚೀತಾ ಉಪಜಾತಿ ಭಾರತದಲ್ಲಿತ್ತು. 1952ರಲ್ಲಿ ಭಾರತೀಯ ಉಪಖಂಡದಲ್ಲಿ ಅದು ನಿರ್ನಾಮವಾಯಿತು.

೫. ದಕ್ಷಿಣ ಆಫ್ರಿಕಾ ಮತ್ತು ಭಾರತ ಸರ್ಕಾರಗಳು ಭಾರತಕ್ಕೆ ಚೀತಾಗಳನ್ನು ಮರುಪರಿಚಯಿಸುವ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿವೆ.

೬. ಫೆಬ್ರವರಿಯಲ್ಲಿ 12 ಚಿರತೆಗಳನ್ನು ಆಮದು ಮಾಡಿಕೊಂಡ ನಂತರ, ಮುಂದಿನ ಎಂಟರಿಂದ 10 ವರ್ಷಗಳವರೆಗೆ ವಾರ್ಷಿಕವಾಗಿ ಇನ್ನೂ 12 ಚಿರತೆಗಳನ್ನು ತರುವ ಯೋಜನೆ ಇದೆ. ನಿಯತಕಾಲಿಕವಾಗಿ ಇವುಗಳ ವೈಜ್ಞಾನಿಕ ಮೌಲ್ಯಮಾಪನ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: Kuno Cheetah Health Update: ನಮೀಬಿಯಾದಿಂದ ತರಲಾದ ಚೀತಾಗೆ ಅನಾರೋಗ್ಯ, ಕಿಡ್ನಿಗೆ ಸೋಂಕು

೭. ಎಂಟು ನಮೀಬಿಯಾದ ಚೀತಾಗಳು ಈಗ ಬೇಟೆಯಾಡುವ ಆವರಣಗಳಲ್ಲಿವೆ. ಆರು ಚದರ ಕಿಮೀ ಪ್ರದೇಶದಲ್ಲಿ ಅವು ನೆಲೆಸಿವೆ. ಅವುಗಳು ಪ್ರತಿ ಮೂರು-ನಾಲ್ಕು ದಿನಗಳಿಗೊಮ್ಮೆ ಒಂದು ಬೇಟೆಯನ್ನು ಕೊಲ್ಲುತ್ತಿವೆ. ಉತ್ತಮ ಆರೋಗ್ಯವನ್ನು ಹೊಂದಿವೆ.

೮. ಈ ಬರುತ್ತಿರುವ ಎಲ್ಲಾ 12 ಚೀತಾಗಳು ಕಾಡಿನಲ್ಲೇ ಹುಟ್ಟಿವೆ. ಸಿಂಹಗಳು, ಚಿರತೆಗಳು, ಹೈನಾಗಳು ಮತ್ತು ಕಾಡು ನಾಯಿಗಳ ಮಧ್ಯೆ ಪೈಪೋಟಿಯ ನಡುವೆ ಬೆಳೆದಿವೆ.

೯. ಇವುಗಳನ್ನು ಫಿಂಡಾ ಗೇಮ್ ರಿಸರ್ವ್ (3), ತ್ಸ್ವಾಲು ಕಲಹರಿ ರಿಸರ್ವ್ (3), ವಾಟರ್‌ಬರ್ಗ್ ಬಯೋಸ್ಫಿಯರ್ (3), ಕ್ವಾಂಡ್ವೆ ಗೇಮ್ ರಿಸರ್ವ್ (2) ಮತ್ತು ಮಾಪೆಸು ಗೇಮ್ ರಿಸರ್ವ್ (1) ಗಳಿಂದ ಪಡೆಯಲಾಗಿದೆ. ಇವುಗಳ ಸ್ಥಳಾಂತರವು ಅಂತಾರಾಷ್ಟ್ರೀಯ ವನ್ಯಜೀವಿ, ಪಶುವೈದ್ಯಕೀಯ ಮಾನದಂಡಗಳಿಗೆ ಅನುಗುಣವಾಗಿವೆ.

೧೦. ವಿಶ್ವಾದ್ಯಂತ, ಪ್ರೌಢ ಚೀತಾಗಳ ಸಂಖ್ಯೆ 1975ರಲ್ಲಿ ಅಂದಾಜು 15,000 ಇದ್ದರೆ, ಇಂದು 7,000ಕ್ಕಿಂತ ಕಡಿಮೆಗೆ ಕುಸಿದಿದೆ.

ಇದನ್ನೂ ಓದಿ: ಮತ್ತೆ ಭಾರತಕ್ಕೆ ಬರಲಿವೆ 12 ಚೀತಾಗಳು; ಕರೆತರಲು ದಕ್ಷಿಣ ಆಫ್ರಿಕಾಕ್ಕೆ ಹೊರಟ ಪ್ರಮುಖ ಅಧಿಕಾರಿಗಳು

Exit mobile version