7 ದಶಕಗಳ ಹಿಂದೆ ಭಾರತದಲ್ಲಿ ಚೀತಾಗಳು ಓಡಾಡಿದ್ದವು. ಜಗತ್ತಿನ ಅತಿ ವೇಗದ ಓಟದ ಪ್ರಾಣಿ ಎನಿಸಿಕೊಂಡ ಈ ಭವ್ಯ ಮೃಗ ಕೊನೆಯದಾಗಿ ಭಾರತದಲ್ಲಿ ಕಂಡದ್ದು 1952ರಲ್ಲಿ. ಇವನ್ನು ಬೇಟೆಯಾಡಿ ಕೊಂದೇ ಹಾಕಲಾಗಿತ್ತು. ಇದೀಗ ಉಭಯ ದೇಶಗಳ ನಡುವಿನ ಒಪ್ಪಂದದಂತೆ ನಮೀಬಿಯಾದಿಂದ ಚೀತಾಗಳನ್ನು ಅಧಿಕೃತವಾಗಿ ತರಿಸಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೊ ವನ್ಯಧಾಮದಲ್ಲಿ ಈ ಚೀತಾಗಳನ್ನು ರಿಲೀಸ್ ಮಾಡಿದ್ದಾರೆ. ಇದೊಂದು ಐತಿಹಾಸಿಕ ಕ್ಷಣ.
ಮೊದಲ ಹಂತದಲ್ಲಿ ಬಂದಿರುವ ಚೀತಾಗಳು 8. ಇನ್ನೂ 12 ಚೀತಾಗಳು ಬರಲಿವೆ. ಇದರಲ್ಲಿ 3 ಗಂಡು, 5 ಹೆಣ್ಣು. ಮುಂದಿನ ಹಂತದಲ್ಲಿ ಈ ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಆಗಮಿಸಲಿವೆ.
ಈಗ ಬಂದಿರುವ ಚೀತಾಗಳಲ್ಲಿ ಎರಡು ಸಹೋದರರು- 5.5 ವರ್ಷದವು. ನಮೀಬಿಯಾದ ಒಜಿವರಾಂಗೊ (Otjiwarongo) ಖಾಸಗಿ ವನ್ಯಧಾಮದಿಂದ ಬಂದಿವೆ. ಇನ್ನೊಂದು ಎರಿಂಡಿ ಖಾಸಗಿ ಗೇಮ್ ರಿಸರ್ವ್‌ನಿಂದ ಬಂದ 4.5 ವರ್ಷದ ಗಂಡು ಚೀತಾ. ಹೆಣ್ಣು ಚೀತಾಗಳಲ್ಲಿ 5 ವರ್ಷದ ಒಂದು 2017ರಲ್ಲಿ ನಮೀಬಿಯಾದ ಒಂದು ಹೊಲದ ಸಮೀಪ ಪತ್ತೆಯಾಗಿದ್ದು. ಅಷ್ಟೇ ಪ್ರಾಯದ ಇನ್ನೊಂದು ಕಂಜಾಬ್ ಗ್ರಾಮದ ಬಳಿ ದೊರೆಯಿತು. 2.5 ವರ್ಷದ ಹೆಣ್ಣು ಎರಿಂಡಿ ವನ್ಯಧಾಮದ್ದು. ಗೊಬಾಬಿಸ್‌ನ ನೀರಿನ ಝರಿಯ ಬಳಿ ದೊರೆತ 2 ವರ್ಷದ ಹೆಣ್ಣು ಹಾಗೂ ಪಂಜರದಲ್ಲಿ ಸಿಕ್ಕಬಿದ್ದ 3 ವರ್ಷದ ಹೆಣ್ಣು ಜತೆಗಿವೆ.
ನಮೀಬಿಯಾದಿಂದ ಬೋಯಿಂಗ್ 747 ವಿಮಾನದಲ್ಲಿ ಈ ಚೀತಾಗಳನ್ನು ನೇರವಾಗಿ, ಗಾಳಿಯಾಡುವ ಮರದ ಪೆಟ್ಟಿಗೆಗಳಲ್ಲಿ ಇರಿಸಿ ತರಲಾಗಿದೆ. ಇಂಧನ ಮರುಪೂರಣಕ್ಕೂ ಎಲ್ಲೂ ನಿಲ್ಲಿಸಿಲ್ಲ. ಈ ಬೋಯಿಂಗ್‌ನ ಮುಖವನ್ನು ಚೀತಾದ ಮುಖದಂತೆ ಪೇಂಟ್ ಮಾಡಿರುವುದು ವಿಶೇಷ.
ಇದನ್ನೂ ಓದಿ | Video | ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಪಂಜರದಿಂದ ಹೊರಬಿದ್ದು ಮೈಮುರಿದ ಚೀತಾಗಳು !