Site icon Vistara News

Cheetah in India | ಭಾರತದ ಕೊನೆಯ ಚೀತಾವನ್ನು ಕೊಂದವರು ಯಾರು?

cheetah in india

ಭಾರತದಲ್ಲಿ 1947ರವರೆಗೂ ಚೀತಾಗಳು ಇದ್ದವು. 1952ರಲ್ಲಿ ನೆಹರೂ ಸರ್ಕಾರ, ಭಾರತದಲ್ಲಿ ಚೀತಾಗಳು ಅಳಿದಿವೆ ಎಂದು ಘೋಷಿಸಿತು. ಇಲ್ಲಿ ಚೀತಾಗಳ ಅಳಿವಿಗೆ ಹಲವು ಕಾರಣಗಳಿದ್ದವು. ಮುಖ್ಯ ಕಾರಣ ಬೇಟೆ.

ಭಾರತಕ್ಕೆ ಬ್ರಿಟಿಷರ ಮೂಲಕ ಬಂದೂಕುಗಳು ಬಂದ ಬಳಿಕ, ಚೀತಾಗಳ ಬೇಟೆ ಸುಲಭವಾಯಿತು. ಆದರೆ ಇವುಗಳ ಬೇಟೆಯಾಡುತ್ತಿದ್ದವರು ಜನಸಾಮಾನ್ಯರಲ್ಲ, ಇಲ್ಲಿನ ರಾಜ ಮಹಾರಾಜರುಗಳು ಬ್ರಿಟಿಷ್‌ ಅಧಿಕಾರಿಗಳು. ಬ್ರಿಟಿಷ್‌ ದೊರೆಗಳನ್ನು ಸಂತೃಪ್ತಿಪಡಿಸಲೆಂದು ನಮ್ಮ ಮಹಾರಾಜರುಗಳು ಇವರನ್ನು ನಮ್ಮ ಕಾಡುಗಳಿಗೆ ಕರೆದೊಯ್ದು, ಅಲ್ಲಿದ್ದ ಹುಲಿ- ಸಿಂಹ- ಚೀತಾಗಳನ್ನು ತೋರಿಸುತ್ತಿದ್ದರು. ಕೊಂದ ಮೃಗದ ಚರ್ಮ ಅವರ ದಿವಾನಖಾನೆಗಳನ್ನು ಅಲಂಕರಿಸುತ್ತಿತ್ತು. ಆನೆಗಳನ್ನು ದಂತಕ್ಕಾಗಿ, ಹುಲಿಗಳನ್ನು ಚರ್ಮ ಹಾಗೂ ಉಗುರಿಗಾಗಿ, ಚೀತಾಗಳನ್ನು ಚರ್ಮಕ್ಕಾಗಿ ಬೇಟೆಯಾಡಲಾಗುತ್ತಿತ್ತು.

ಬ್ರಿಟಿಷರ ಈ ದುಷ್ಟ ಹವ್ಯಾಸ ನಮ್ಮ ಮಹಾರಾಜರನ್ನೂ ವ್ಯಾಪಕವಾಗಿ ಆವರಿಸಿತು. ಸ್ವಾತಂತ್ರ್ಯಪೂರ್ವದಲ್ಲಿ ಎಗ್ಗಿಲ್ಲದೆ ನಡೆದ ಈ ವನ್ಯದರೋಡೆ ಸ್ವಾತಂತ್ರ್ಯಾನಂತರವೂ ಮುಂದುವರಿಯಿತು. 1972ರಲ್ಲಿ ಇದನ್ನು ತಡೆಯಲು ಭಾರತ ಸರ್ಕಾರ ಕಠಿಣವಾದ ಕಾನೂನು ರೂಪಿಸಿತು. ಅಷ್ಟರಲ್ಲಿ ತಡವಾಗಿತ್ತು.

ಅನೇಕ ಹಿಂದಿನ ಚಿತ್ರಪಟಗಳು ತೋರಿಸುವಂತೆ, ಚೀತಾಗಳನ್ನು ಸಾಕಿ ಪಳಗಿಸಿ ಬೇಟೆಗಾಗಿಯೂ ಬಳಸಿಕೊಳ್ಳಲಾಗುತ್ತಿತ್ತು. ಇವುಗಳನ್ನು ಜಿಂಕೆ ಬೇಟೆಗೆ ಬಳಸಿಕೊಳ್ಳುತ್ತಿದ್ದರು. ದಾಖಲೆಗಳ ಪ್ರಕಾರ, ಭಾರತದಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಬಿಹಾರದ ಬಯಲುಸೀಮೆಗಳಲ್ಲಿ ಚೀತಾಗಳು ಹೇರಳವಾಗಿದ್ದವು.

ಬ್ರಿಟಿಷರಿಗೂ ಹಿಂದಿನ ರಾಜಮಹಾರಾಜರು, ಮೊಗಲ್‌ ಸುಲ್ತಾನರು ಕೂಡ ಬೇಟೆಯಲ್ಲಿ ಹಿಂದಿ ಬಿದ್ದಿರಲಿಲ್ಲ. ಇತಿಹಾಸಜ್ಞರ ಪ್ರಕಾರ, 1556ರಿಂದ 1605 ಆಳಿದ ಮೊಗಲ್‌ ಸುಲ್ತಾನ ಅಕ್ಬರ್‌ನ ಬಳಿ 1000 ಚೀತಾಗಳಿದ್ದವಂತೆ! ಇದನ್ನು ಅವನು ಜಿಂಕೆ ಬೇಟೆಗಾಗಿ ಸಾಕಿದ್ದ.

ಇದನ್ನೂ ಓದಿ | Cheetah in India | ನಮೀಬಿಯಾದಿಂದ ಬಂದ ಚೀತಾಗಳ ಡೀಟೇಲ್ಸ್!

ಚೀತಾಗಳ ಒಂದು ಗುಣ ಎಂದರೆ ಇವುಗಳಿಗೆ ಬೇಟೆ ಪ್ರಾಣಿಗಳು ಸಾಕಷ್ಟಿದ್ದರೆ, ತಿರುಗಾಡಲು ಮೈಲುಗಟ್ಟಲೆ ಹುಲ್ಲುಗಾವಲು ಇದ್ದರೆ ಮಾತ್ರ ಇವು ಪ್ರಜನನ ಮಾಡುತ್ತವೆ. ನಿರ್ಬಂಧಿತ ಪ್ರದೇಶದಲ್ಲಿ ಇದ್ದರೆ ಇವು ಸಂತಾನೋತ್ಪಾದನೆ ಮಾಡುವುದೇ ಇಲ್ಲ. ಇವುಗಳ ಈ ಗುಣವೂ ಇವುಗಳ ಅಳಿವಿಗೆ ಇನ್ನೊಂದು ಕಾರಣವಾಯ್ತು.

ದಾಖಲೆಗಳು ತೋರಿಸುವಂತೆ, ಭಾರತದ ಕೊಟ್ಟ ಕೊನೆಯ ಚೀತಾಗಳು ಸಾವು ಕಂಡದ್ದು 1947ರಲ್ಲಿ. ಇವುಗಳನ್ನು ಬೇಟೆಯಾಡಿದವನು ಮಧ್ಯಪ್ರದೇಶದ ಕೊರಯಾ ಸಂಸ್ಥಾನದ ಮಹಾರಾಜಾ ರಾಮಾನುಜ ಪ್ರತಾಪ ಸಿಂಗ್‌ ದೇವ್.‌ ಅವನು ಒಂದೇ ರಾತ್ರಿಯಲ್ಲಿ ಮೂರು ಚೀತಾಗಳನ್ನು ಹೊಡೆದುರುಳಿಸಿದ್ದ. ಇದರ ಫೋಟೋ ಲಭ್ಯವಿದೆ. ಇದಾದ ಬಳಿಕ ಭಾರತದಲ್ಲಿ ಎಲ್ಲೂ ಚೀತಾಗಳು ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ | Video | ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಪಂಜರದಿಂದ ಹೊರಬಿದ್ದು ಮೈಮುರಿದ ಚೀತಾಗಳು!

Exit mobile version