Site icon Vistara News

Chenab Bridge: ಐಫೆಲ್ ಟವರ್‌ಗಿಂತ ಎತ್ತರದ ಚೆನಾಬ್ ಸೇತುವೆ ಆಗಸ್ಟ್ 15ರಂದು ಉದ್ಘಾಟನೆಗೆ ಸಜ್ಜು!

UdhampurSrinagar-Baramulla Rail Link

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ (Udhampur Srinagar-Baramulla Rail Link) ಜಮ್ಮು ಮತ್ತು ಕಾಶ್ಮೀರದಲ್ಲಿ (jammu and kashmir) ಭಾರತೀಯ ರೈಲ್ವೇ (Indian Railways) ನಿರ್ಮಿಸಿರುವ ಚೆನಾಬ್ ಸೇತುವೆ (Chenab Bridge) ಆಗಸ್ಟ್ 15ರಂದು ಉದ್ಘಾಟನೆಗೊಳ್ಳಲು ಸಜ್ಜಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಜಮ್ಮು ಕಾಶ್ಮೀರದಲ್ಲಿ ಸಂಪರ್ಕವನ್ನು ಸುಧಾರಿಸಲು ಭಾರತೀಯ ರೈಲ್ವೇಯು ಚೆನಾಬ್ ಸೇತುವೆಯ ಮೇಲೆ ರೈಲು ಕಾರ್ಯಾಚರಣೆಯನ್ನು ಸ್ವಾತಂತ್ರ್ಯ ದಿನದಂದು (independence day) ಪ್ರಾರಂಭಿಸಲಿದೆ.

ಪ್ರಾರಂಭದಲ್ಲಿ ರೈಲು ಸೇವೆಗಳು ಜಮ್ಮುವಿನ ರಿಯಾಸಿಯಿಂದ ಕಾಶ್ಮೀರದ ಸಂಗಲ್ದಾನ್‌ವರೆಗೆ ಸಂಚರಿಸಲಿದ್ದು, ಬಳಿಕ ಈ ಸೇವೆಗಳನ್ನು ಇತರ ಪ್ರದೇಶಗಳಿಗೆ ವಿಸ್ತರಿಸಲಾಗುವುದು.


ಭಾರತೀಯ ರೈಲ್ವೇಯ ಮಹತ್ವಾಕಾಂಕ್ಷೆಯ ಉಧಂಪುರ್ ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (UdhampurSrinagar-Baramulla Rail Link) ಯೋಜನೆಯನ್ನು ಸಂಪರ್ಕಿಸುವ ಉದ್ದೇಶದಿಂದ ಚೆನಾಬ್ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಯೋಜನೆಯ ಒಂದು ಭಾಗವಾಗಿದೆ. ಉಧಂಪುರ್ ಶ್ರೀನಗರ- ಬಾರಾಮುಲ್ಲಾ ರೈಲು ಸಂಪರ್ಕ ಜಾಲದ (USBRL) ಒಟ್ಟು ಉದ್ದ 272 ಕಿ.ಮೀ.ಗಳಾಗಿದೆ.


ಹೊಸದಾಗಿ ನಿರ್ಮಿಸಲಾದ ಚೆನಾಬ್ ಸೇತುವೆಯ ಮೇಲೆ ಕಳೆದ ಕೆಲವು ದಿನಗಳಿಂದ ಪ್ರಾಯೋಗಿಕವಾಗಿ ರೈಲು ಓಡಾಟವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಸೇತುವೆ ಮೇಲೆ ಆಗಸ್ಟ್ 15ರಿಂದ ರೈಲುಗಳ ಓಡಾಟ ನಡೆಸಲಿದ್ದು, ಪ್ರಯಾಣಿಕರು ಪ್ರಯಾಣ ನಡೆಸಬಹುದಾಗಿದೆ.


ಚೆನಾಬ್ ಸೇತುವೆಯ ಮೇಲೆ ರೈಲುಗಳ ಸಂಚಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಪರ್ಯಾಯ ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಉದೇಶದ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ.


ಯುಎಸ್‌ಬಿಆರ್‌ಎಲ್ ಯೋಜನೆ ಹೇಗಿದೆ?

ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (USBRL) ಯೋಜನೆ ಪೂರ್ಣಗೊಂಡ ಅನಂತರ ಈ ಯೋಜನೆಯಡಿಯಲ್ಲಿ ಸಂಪೂರ್ಣ ರೈಲು ಜಾಲವು ಬಾರಾಮುಲ್ಲಾದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಧಮ್‌ಪುರದವರೆಗೆ ವಿಸ್ತರಿಸಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ರೈಲು ಜಾಲವನ್ನು ನಿರ್ಮಿಸಲಾಗುತ್ತಿದೆ. ಇದು ಪ್ರಯಾಣಿಕರಿಗೆ ಎಲ್ಲಾ ಹವಾಮಾನದ ಪ್ರಯಾಣಕ್ಕೆ ಸೂಕ್ತವಾಗಿರುತ್ತದೆ.

ಸಂಪೂರ್ಣ ವ್ಯವಸ್ಥೆಯಲ್ಲಿ ರೈಲ್ವೇ ಅತ್ಯಂತ ಸುರಕ್ಷತಾ ಕ್ರಮಗಳಿಗೆ ಗಮನ ನೀಡಿದೆ. ಸಂಪೂರ್ಣ ಜಾಲವು ಸಿಸಿಟಿವಿ ಮಾನಿಟರಿಂಗ್, ಸುಧಾರಿತ ಸುರಂಗ ಸುರಕ್ಷತೆ ತಂತ್ರಜ್ಞಾನ ಮತ್ತು ಹವಾನಿಯಂತ್ರಿತ ವ್ಯವಸ್ಥೆಗಳೊಂದಿಗೆ ಸುಸಜ್ಜಿತಗೊಂಡಿದೆ.


ಈ ಜಾಲವು ಹಲವಾರು ಸುರಂಗಗಳು ಮತ್ತು ಸೇತುವೆಗಳ ಮೂಲಕ ಹಾದುಹೋಗುತ್ತದೆ. ಇದು ಪ್ರಯಾಣಿಕರಿಗೆ ಜಮ್ಮು ಮತ್ತು ಕಾಶ್ಮೀರದ ರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡುತ್ತದೆ. ಈಗಾಗಲೇ ಯೋಜನೆಯು ಪೂರ್ಣಗೊಳ್ಳಬೇಕಿತ್ತು. ಆದರೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಯೋಜನೆ ಪೂರ್ಣಗೊಳ್ಳಲು ಹೆಚ್ಚು ಕಾಲಾವಕಾಶ ಬೇಕಾಯಿತು. ಈ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಭಾರತೀಯ ರೈಲ್ವೇಯು ಸರಕಾರಕ್ಕೆ ಭರವಸೆ ನೀಡಿದೆ.

ಇದನ್ನೂ ಓದಿ: Doda Encounter: ಜಮ್ಮು ದಾಳಿ ಹಿಂದೆ ಇದ್ಯಾ ಪಾಕ್‌ ಮಾಜಿ ಸೈನಿಕರ ಕೈವಾಡ? ಉಗ್ರರಿಗಿದ್ಯಾ ಸೇನಾ ತರಬೇತಿ?

ಐಫೆಲ್ ಟವರ್‌ಗಿಂತ ಎತ್ತರದಲ್ಲಿದೆ!

ಭಾರತೀಯ ರೈಲ್ವೇಯ ಎಂಜಿನಿಯರ್‌ಗಳ ಕೌಶಲ ಚೆನಾಬ್ ಸೇತುವೆ ನಿರ್ಮಾಣದಲ್ಲಿ ಎದ್ದು ಕಾಣುತ್ತಿದೆ. ಇದು ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ. 359 ಮೀಟರ್ ಎತ್ತರದ ಸೇತುವೆಯು ಅತಿ ಹೆಚ್ಚು ತೀವ್ರತೆಯ ಭೂಕಂಪನ ಶಕ್ತಿಗಳನ್ನು ತಡೆದುಕೊಳ್ಳಬಲ್ಲದು.

Exit mobile version