ಜಮ್ಮು: ಐಫೆಲ್ ಟವರ್‌ಗಿಂತಲೂ 35 ಮೀಟರ್ ಅಧಿಕ ಎತ್ತರದ, ಏಕ-ಕಮಾನಿನ ರೈಲ್ವೇ ಸೇತುವೆ ಜಮ್ಮು- ಕಾಶ್ಮೀರದಲ್ಲಿ ನಿರ್ಮಾಣದ ಅಂತಿಮಗೊಂಡಿದೆ. ಇಂಜಿನಿಯರಿಂಗ್ ವಿಸ್ಮಯ ಎನಿಸಿಕೊಳ್ಳಲಿರುವ ಈ ಸೇತುವೆ ಕುತುಬ್ ಮಿನಾರ್ ಅನ್ನೂ ಮೀರಿಸಲಿದ್ದು, ಜಗತ್ತಿನ ಅತ್ಯಂತ ಎತ್ತರದ ರೈಲ್ವೆ ಸೇತುವೆ ಎಂದೂ ಕರೆಸಿಕೊಳ್ಳಲಿದೆ. ಈ ವರ್ಷದ ಕೊನೆಯಲ್ಲಿ ಲೋಕಾರ್ಪಣೆಯಾಗಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ರೈಲ್ವೇ ಮಾರ್ಗಕ್ಕೆ ಅಡ್ಡಲಾಗಿರುವ ಚೆನಾಬ್ ನದಿಗೆ ಕಟ್ಟಲಾಗುತ್ತಿರುವ ಈ ಭವ್ಯ ಸೇತುವೆಯ ಫೋಟೋಗಳನ್ನು ಈ ಹಿಂದೆ ರೈಲ್ವೇ ಇಲಾಖೆ ಟ್ವಿಟರ್‌ನಲ್ಲಿ ಹಂಚಿಕೊಂಡಿತ್ತು. ಇದೀಗ ಕೇಂದ್ರ ರೈಲ್ವೇ ಸಚಿವರು ಈ ಬಗ್ಗೆ ಇನ್ನಷ್ಟು ವಿವರ ನೀಡಿದ್ದಾರೆ.
”ಹಿಮಾಲಯ ಪರ್ವತ ಪ್ರಾಂತ್ಯಗಳು ನೂತನವಾಗಿದ್ದು, ಇಲ್ಲಿನ ಸೇತುವೆಗಳಿಗೆ ಹೆಚ್ಚಿನ ಬಲಿಷ್ಠತೆಯ ತಳಹದಿ ಅಗತ್ಯವಿದೆ. ಈ ಅವಶ್ಯಕತೆ ಅನುಸರಿಸಿ ಇದನ್ನು ಕಟ್ಟಲಾಗಿದೆ. ಸೇತುವೆಯ ನಿರ್ಮಾಣ ಕಾರ್ಯ ಮುಗಿದಿದ್ದು, ಇದುವರೆಗೆ ಎಲ್ಲ ಅವಶ್ಯಕ ಪರೀಕ್ಷೆಗಳನ್ನೂ ನಡೆಸಲಾಗಿದೆ. ಇಲ್ಲಿ ರಿಕ್ಟರ್ ಮಾಪಕದಲ್ಲಿ 8.5ರಷ್ಟು ಪ್ರಮಾಣದ ಭೂಕಂಪವನ್ನೂ ತಡೆದುಕೊಳ್ಳುವಂತೆ ಇದನ್ನು ಕಟ್ಟಲಾಗಿದೆ. ಅತ್ಯಧಿಕ ವೇಗದ ಗಾಳಿ, ಅತಿಯಾದ ಉಷ್ಣತೆ, ನೀರಿನ ಮಟ್ಟದ ಪರೀಕ್ಷೆ ಎಲ್ಲವನ್ನೂ ನಡೆಸಲಾಗಿದೆʼʼ ಎಂದು ಅಶ್ವಿನಿ ವೈಷ್ಣವ್ ವಿವರ ನೀಡಿದರು.
ಸೇತುವೆಯ ಸಂಪೂರ್ಣ ನಿರ್ಮಾಣ ಕಾರ್ಯ ಮುಗಿದಿದೆ. ʼಗೋಲ್ಡನ್ ಜಾಯಿಂಟ್ʼ ಎಂದು ಕರೆಯಲಾಗುವ ಅಂತಿಮ ಹಂತದ ಜಾಯಿಂಟ್ ಅನ್ನೂ ಸೇರಿಸಲಾಗಿದೆ. ಇದರ ಮೂಲ ತಳಹದಿಯೇ ಕುತುಬ್ ಮಿನಾರ್‌ಗಿಂತ (73 ಮೀಟರ್) ಎತ್ತರದಲ್ಲಿದೆ. ಮಧ್ಯದಲ್ಲಿ ಸ್ಟೀಲ್ ಕಮಾನನ್ನು ಬಳಸಿ ಕಟ್ಟಲಾಗಿದೆ. ಐಫೆಲ್ ಟವರ್ ಕೂಡ ಸ್ಟೀಲ್‌ನಿಂದ ನಿರ್ಮಿತವಾದುದು.
ಐತಿಹಾಸಿಕ, ಭವ್ಯ ಎನಿಸಿಕೊಳ್ಳಲಿರುವ ಈ ಸೇತುವೆಯ ನಿರ್ಮಾಣ ಕಾರ್ಯ ಕ್ಲಿಷ್ಟ ಎಂಜಿಯರಿಂಗ್‌ಗೆ ಉದಾಹರಣೆಯಾಗಿದೆ. ನಿರ್ಮಾಣ ಹಂತದಲ್ಲಿ ಸಾಕಷ್ಟು ಅಡೆತಡೆಗಳನ್ನೂ ಎದುರಿಸಿದೆ. ಭೌಗೋಳಿಕ ಸನ್ನಿವೇಶ, ವಾತಾವರಣ ಎಲ್ಲವೂ ಎಂಜಿನಿಯರ್‌ಗಳಿಗೆ ಸವಾಲು ಎಸೆದಿದ್ದವು. ಅಂತಿಮಗೊಂಡ ಬಳಿಕ ಇದು ಬಂಗೀ ಜಂಪಿಂಗ್ ಮುಂತಾದ ಸಾಹಸ ಕ್ರೀಡೆಗಳಿಗೂ ನೆಲೆಯಾಗಲಿದೆ ಎಂದು ಹೇಳಲಾಗಿದೆ.
ಈ ಸೇತುವೆಯ ನಿರ್ಮಾಣ ವೆಚ್ಚ ಸುಮಾರು 1400 ಕೋಟಿ ರೂ.ಗಳು. ಇದು ಗಂಟೆಗೆ 260 ಕಿಲೋಮೀಟರ್ ವೇಗದ ಗಾಳಿಯನ್ನು ತಡೆದುಕೊಳ್ಳಬಲ್ಲದು. ಇದರ ನಿರೀಕ್ಷಿತ ಜೀವಿತಾವಧಿ ಕನಿಷ್ಠ 120 ವರ್ಷ.
ಮುಂಬಯಿ ಮೂಲದ ಆಫ್ಕಾನ್ಸ್ ಸಂಸ್ಥೆ (Afcons Infrastructure Ltd) ಈ ಸೇತುವೆಯ ನಿರ್ಮಾಣ ಮಾಡುತ್ತಿದೆ. ಇದಲ್ಲದೆ ಕೊಂಕಣ ರೈಲ್ವೆಗೂ ಇತರ 16 ಸೇತುವೆಗಳನ್ನು ಈ ಸಂಸ್ಥೆ ನಿರ್ಮಿಸಿ ಕೊಟ್ಟಿದೆ. ಉತ್ತರ ಭಾರತದ ಹಲವು ರೈಲ್ವೇ ಸೇತುವೆಗಳನ್ನೂ ಕಟ್ಟಿಕೊಟ್ಟಿದೆ. ಪ್ರಸ್ತುತ ಸೇತುವೆ ಉಧಂಪುರ- ಶ್ರೀನಗರ- ಬಾರಾಮುಲ್ಲಾ- ರೈಲ್ ಲಿಂಕ್ ಪ್ರಾಜೆಕ್ಟ್ ಅಡಿಯಲ್ಲಿ ನಿರ್ಮಿಸಲಾಗಿದೆ. ಸಂಗ್ಲಾದನ್ ಪರ್ವತಪ್ರಾಂತ್ಯದಲ್ಲಿ ಕಟ್ಟಲಾಗುತ್ತಿರುವ ಈ ಸೇತುವೆಯ ಮುಖ್ಯ ಡೆಕ್ ಸ್ಲಾಬ್ ಕೂಡ ಕುತುಬ್ ಮಿನಾರ್‌ಗಿಂತ ಎತ್ತರದಲ್ಲಿದೆ.
ಸೇತುವೆಯ ಒಟ್ಟಾರೆ ಎತ್ತರವು ನದಿಯ ನೆಲದ ಮಟ್ಟಕ್ಕಿಂತ 359 ಮೀಟರ್ ಎತ್ತರದಲ್ಲಿರಲಿದೆ. ಇದು ಐಫೆಲ್ ಟವರ್‌ಗಿಂತಲೂ 35 ಮೀಟರ್ ಎತ್ತರ. ಸೇತುವೆಯ ಉದ್ದ 1315 ಮೀಟರ್. ರೀಸಿ ಜಿಲ್ಲೆಯ ಬಕ್ಕಾಲ್ ಮತ್ತು ಕೌರಿ ಗುಡ್ಡಗಳ ನಡುವೆ ಈ ಸೇತುವೆ ಇದೆ. 2004ರಲ್ಲಿ ಸೇತುವೆಯ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಮಧ್ಯೆ ಮಧ್ಯೆ ಅನೇಕ ಸಲ ನನೆಗುದಿಗೆ ಬಿದ್ದಿತ್ತು.
ಇದನ್ನೂ ಓದಿ: Heavy Rain | ಉಕ್ಕಿ ಹರಿಯುವ ಸೇತುವೆ ದಾಟಲು ಜೆಸಿಬಿ ಮೊರೆ ಹೋದ ಶಾಲಾ ಮಕ್ಕಳು!