Site icon Vistara News

ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ತನ್ನ ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಮೋದಿ ‘ಭಕ್ತ’!

Narendra Modi

Chhattisgarh Man Chops Off Finger, Offers It For Goddess At Temple Following NDA’s Victory

ರಾಯ್‌ಪುರ: ಜಗತ್ತಿನಲ್ಲೇ ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ಅನುಯಾಯಿಗಳು, ಹಿಂಬಾಲಕರು ಭಾರತದಲ್ಲಿಯೇ ಇರಬಹುದೇನೋ! ಅದರಲ್ಲೂ, ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ, ಆರಾಧಿಸುವ, ಅವರ ಪರವಾಗಿ ವಾದ ಮಾಡುವ, ಸಮಯ ಬಂದರೆ ಜಗಳಕ್ಕೂ ನಿಲ್ಲುವ ‘ಭಕ್ತರು’ ಇದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಛತ್ತೀಸ್‌ಗಢದಲ್ಲಿ (Chhattisgarh) ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ದೇವರಿಗೆ ತನ್ನ ಬೆರಳನ್ನೇ ಅರ್ಪಿಸಿದ್ದಾನೆ. ಆ ಮೂಲಕ ಆತ ಅಭಿಮಾನ ಮೆರೆದಿದ್ದಾನೆ.

ಹೌದು, ಛತ್ತೀಸ್‌ಗಢದ ಬಲರಾಮ್‌ಪುರದಲ್ಲಿ ದುರ್ಗೇಶ್‌ ಪಾಂಡೆ ಎಂಬ 30 ವರ್ಷದ ವ್ಯಕ್ತಿಯು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಬಹುಮತ ಪಡೆದ ಹಿನ್ನೆಲೆಯಲ್ಲಿ ದೇವಾಲಯ ತೆರಳಿ, ಕಾಳಿ ದೇವಿಗೆ ತನ್ನ ಬೆರಳನ್ನೇ ಅರ್ಪಿಸಿದ್ದಾನೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಜೂನ್‌ 4ರಂದೇ ಆತನು ಕಾಳಿ ದೇವಸ್ಥಾನಕ್ಕೆ ತೆರಳಿ, ತನ್ನ ಎಡಗೈ ಬೆರಳನ್ನು ಕತ್ತರಿಸಿ ದೇವತೆಗೆ ಅರ್ಪಿಸಿದ್ದಾನೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 290 ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರ ಖುಷಿ ತಾಳದೆ ಆತ ಬೆರಳು ಕತ್ತರಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ದೇವಸ್ಥಾನದಲ್ಲಿ ಬೆರಳು ಕತ್ತರಿಸಿಕೊಂಡ ಬಳಿಕ ವಿಪರೀತ ರಕ್ತಸ್ರಾವ ಉಂಟಾಗಿದೆ. ಇದರಿಂದ ಆತಂಕಕ್ಕೀಡಾದ ಕುಟುಂಬಸ್ಥರು ವ್ಯಕ್ತಿಯನ್ನು ಸಮಾರಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಕೂಡಲೇ ಅಂಬಿಕಾಪುರ ಮೆಡಿಕಲ್‌ ಕಾಲೇಜಿಗೆ ಹೋಗಿ ಎಂದು ಸೂಚಿಸಿದ್ದಾರೆ. ಅದರಂತೆ, ದುರ್ಗೇಶ್‌ ಪಾಂಡೆ ಅವರನ್ನು ಅಂಬಿಕಾಪುರ ಮೆಡಿಕಲ್‌ ಕಾಲೇಜಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ರಕ್ತಸ್ರಾವವನ್ನು ನಿಲ್ಲಿಸಿದ್ದಾರೆ. ಸದ್ಯ, ದುರ್ಗೇಶ್‌ ಪಾಂಡೆ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ನಾಳೆ ಮೋದಿ ಪ್ರಮಾಣವಚನ

ನರೇಂದ್ರ ಮೋದಿ ಅವರು ಭಾನುವಾರ (ಜೂನ್‌ 9) ಸಂಜೆ 7.15ಕ್ಕೆ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: Mamata Banerjee: 15 ದಿನಗಳಲ್ಲೇ ಮೋದಿ ಸರ್ಕಾರ ಪತನ; ಸ್ಫೋಟಕ ಭವಿಷ್ಯ ನುಡಿದ ಮಮತಾ ಬ್ಯಾನರ್ಜಿ!

Exit mobile version