Site icon Vistara News

Child Marriages | ಹೆಚ್ಚುತ್ತಿರುವ ಜನ ಜಾಗೃತಿ, ಭಾರತದಲ್ಲಿ ಬಾಲ್ಯ ವಿವಾಹ ಕುಸಿತ

Child Marriages

ಪ್ರಜನನ ಮತ್ತು ತಾಯ್ತನದ ಕುರಿತಾಗಿ ಕೆಲಸ ಮಾಡುವ ಯುಎನ್‌ಎಫ್‌ಪಿಎ (UNAFPA) ಮತ್ತು ಮಕ್ಕಳ ಹಿತಾಸಕ್ತಿಗೆ ಕಾರ್ಯತತ್ಪರವಾಗಿರುವ ಯುನಿಸೆಫ್‌ (UNICEF) ಸಂಸ್ಥೆಗಳು, ತಾವು ಜಂಟಿಯಾಗಿ ನಡೆಸುತ್ತಿರುವ ಬಾಲ್ಯವಿವಾಹ (Child Marriages) ತಡೆ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ನೀಡಿವೆ. ಈ ಪ್ರಕಾರ, ೨೦೦೫ನೇ ಸಾಲಿನಲ್ಲಿದ್ದ ಶೇ. ೪೭.೪ರಷ್ಟಿದ್ದ ಬಾಲ್ಯವಿವಾಹದ ಪ್ರಮಾಣ ೨೦೨೧ರಲ್ಲಿ ಶೇ. ೨೩.೩ಕ್ಕೆ ಕುಸಿದಿದೆ. ಇದರಿಂದಾಗಿ ದಕ್ಷಿಣ ಏಷ್ಯಾದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಗಳ ಪ್ರಮಾಣದಲ್ಲಿ ಶೇ. ೫೦ರಷ್ಟು ಇಳಿಕೆ ದಾಖಲಾಗಿದೆ. ಈ ಸಂಸ್ಥೆಗಳು ಜಂಟಿಯಾಗಿ ನಡೆಸುತ್ತಿರುವ ಈ ಕಾರ್ಯಕ್ರಮ ಇದೀಗ ಎರಡನೇ ಹಂತದಲ್ಲಿದೆ. ದೇಶದ ೧೫ ರಾಜ್ಯಗಳ ಸುಮಾರು ೧೭೫ ಜಿಲ್ಲೆಗಳಲ್ಲಿ ಕುರಿತು ಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಶಿಕ್ಷಣ ಮತ್ತು ಜೀವನ ಕೌಶಲ್ಯಗಳನ್ನು ಒದಗಿಸುವ ಮೂಲಕ ಸುಮಾರು ೨೦ ಲಕ್ಷ ಹದಿಹರೆಯದ ಬಾಲಕಿಯರ ಬದುಕಿನಲ್ಲಿ ಬದಲಾವಣೆಯನ್ನು ತರಲಾಗಿದೆ. ಇದಕ್ಕಾಗಿ ಈ ಮಕ್ಕಳ ಪೋಷಕರು, ಸಮುದಾಯಗಳು, ಸಾಮಾಜಿಕ, ಸಾಂಸ್ಕೃತಿ ಮತ್ತು ಧಾರ್ಮಿಕ ಮುಖಂಡರನ್ನೂ ಇಂಥ ಕಾರ್ಯಕ್ರಮಗಳು ತಲುಪಬೇಕಿದೆ ಎಂಬುದು ಈ ಸಂಸ್ಥೆಗಳ ಪ್ರತಿನಿಧಿಗಳ ಮಾತು.

ಕಳೆದೆರಡು ವರ್ಷಗಳಲ್ಲಿ ಕೋವಿಡ್-‌೧೯ರ ಸಂಕಷ್ಟದಿಂದಾಗಿ ಈ ಕಾರ್ಯಕ್ರಮ ನಿಧಾನಗತಿಗೆ ತಲುಪಿದೆ. ಸಾಮಾಜಿಕ, ರಾಜಕೀಯ, ಆರೋಗ್ಯ ಮತ್ತು ಆರ್ಥಿಕ ಸಂಕಷ್ಟಗಳು ಒಟ್ಟಾರೆಯಾಗಿ ಲಿಂಗ ಸಮಾನತೆಯ ಮೇಲೆ ಘೋರ ಪರಿಣಾಮ ಬೀರುವ ಭೀತಿಯಿದೆ. ವಿಶ್ವದೆಲ್ಲೆಡೆಯಲ್ಲಿ ಅಂದಾಜು ಒಂದು ಕೋಟಿ ಹೆಣ್ಣು ಮಕ್ಕಳು ಬಾಲವಧುವಾಗುವಂಥ ಸಂಕಷ್ಟ ಎದುರಾಗಬಹುದು ಎನ್ನುತ್ತವೆ ಈ ಸಂಸ್ಥೆಯ ಮೂಲಗಳು.

“ಬಡತನ, ಶಿಕ್ಷಣ ಮತ್ತು ಅರಿವಿನ ಕೊರತೆ, ಮೂಲ ಸೌಕರ್ಯಗಳು ದೊರೆಯದಿರುವ ಕಾರಣಗಳಿಂದ ಬಾಲ್ಯ ವಿವಾಹವು ನೇರವಾಗಿ ಹದಿಹರೆಯದ ತಾಯ್ತನ ಮತ್ತು ತಾಯಿ-ಶಿಶುಗಳ ಮರಣಕ್ಕೆ ಸಂಬಂಧಪಡುತ್ತದೆ. ಹಾಗಾಗಿ ಅತ್ಯಂತ ಹಿಂದುಳಿದ ಸ್ಥಳದಲ್ಲಿರುವ ಹದಿಹರೆಯದ ಮಕ್ಕಳನ್ನೂ ತಲುಪಬೇಕಾಗಿರುವುದು ಅಗತ್ಯ. ಈ ಕಾರ್ಯಕ್ರಮ ಈವರೆಗೆ ಪಡೆದಿರುವ ವೇಗ ಮತ್ತು ಸಾಧಿಸಿರುವ ಸುಧಾರಣೆಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳುವುದು ಸರಿಯಲ್ಲ” ಎನ್ನುವ ಅವರ ಮಾತುಗಳಲ್ಲಿ ಹುರುಳಿಲ್ಲದಿಲ್ಲ.

ಯುನಿಸೆಫ್‌ ಇಂಡಿಯಾದ ಪ್ರತಿನಿಧಿ ಸಿಂಥಿಯಾ ಮೆಕ್‌ಕೆಫ್ರೆ ಹೇಳುವಂತೆ, “ಬಾಲ್ಯವಿವಾಹ ಮಕ್ಕಳ ಬಾಲ್ಯವನ್ನು ಮೊಟಕುಗೊಳಿಸಿ, ಅವರ ಹಕ್ಕುಗಳಿಂದ ವಂಚಿತರನ್ನಾಗಿಸಿ, ಇಡೀ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಡೀ ವಿಶ್ವದಲ್ಲಿ ಬಾಲ್ಯ ವಿವಾಹ ಕಡಿಮೆಯಾಗುವಲ್ಲಿ ಭಾರತದಲ್ಲಿ ಈ ಪ್ರಮಾಣ ಕಡಿತಗೊಳ್ಳುವುದು ಮಹತ್ವದ್ದು”.

ಈ ಜಂಟಿ ಸಹಭಾಗಿತ್ವದ ಕಾರ್ಯಕ್ರಮ ಶೀಘ್ರದಲ್ಲೇ ತನ್ನ ಮೂರನೇ ಹಂತಕ್ಕೆ ಕಾಲಿಡಲಿದೆ. ಈ ಹಂತದಲ್ಲಿ ಹದಿಹರೆಯದ ಬಾಲಕ-ಬಾಲಕಿಯರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೆಚ್ಚಿಸುವ ಮತ್ತು ಲಿಂಗ ಸಮಾನತೆಯ ಪರಿಕಲ್ಪನೆಗಳನ್ನು ಹೆಚ್ಚಾಗಿ ಹರಡುವ ದೀರ್ಘಕಾಲೀನ ಉದ್ದೇಶವನ್ನು ಕಾರ್ಯಕ್ರಮ ಹೊಂದಿದೆ. ಈ ಮೂಲಕ ಅಕಾಲದಲ್ಲಿ ಒತ್ತಾಯದಿಂದ ಹೇರಲಾಗುವ ಬಾಲ್ಯ ವಿವಾಹದ ಕಪಿಮುಷ್ಟಿಯಿಂದ ಸಮಾಜವನ್ನು ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ | Karnataka Highcourt | ಮುಸ್ಲಿಮ್ ಆದರೂ ಅಷ್ಟೇ, ಬಾಲಕಿಯನ್ನು ಮದ್ವೆಯಾದ್ರೆ ಅದು ಅಸಿಂಧು, ಪೋಕ್ಸೊ ಕೇಸ್‌ ಎದುರಿಸಲೇಬೇಕು

Exit mobile version