Site icon Vistara News

ಕುತಂತ್ರಿ ಡ್ರ್ಯಾಗನ್ ರಾಷ್ಟ್ರ​​; ಅರುಣಾಚಲ ಪ್ರದೇಶದಲ್ಲಿ 11 ಸ್ಥಳಗಳ ಹೆಸರು ಬದಲಿಸಿ, ಇದು ದಕ್ಷಿಣ ಟಿಬೆಟ್​ ಎಂದ ಚೀನಾ!

China Government renames 11 places In Arunachal Pradesh

#image_title

ನವ ದೆಹಲಿ: ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಚೀನಾ (China Government)ಮರುನಾಮಕರಣ ಮಾಡಿದೆ. ಇಷ್ಟು ದಿನ ಇದ್ದ ಹೆಸರಿನ ಬದಲಿಗೆ ಬೇರೆ ಹೆಸರನ್ನು ಇಟ್ಟಿದೆ. ಭಾರತ-ಚೀನಾ ಸಂಬಂಧ ಹಳಸಿದೆ. 2020ರ ಗಲ್ವಾನ್​ ಸಂಘರ್ಷದ ಬಳಿಕ ಅದು ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಲಡಾಖ್​ ಮತ್ತು ಅರುಣಾಚಲ ಪ್ರದೇಶದ ವಾಸ್ತವ ಗಡಿ ರೇಖೆ ಬಳಿ ಇತ್ತೀಚಿನ ವರ್ಷಗಳಲ್ಲಿ ಚೀನಾ ಸದಾ ಉಪಟಳ ನೀಡುತ್ತಲೇ ಇದೆ. ಹಳ್ಳಿಗಳನ್ನು ನಿರ್ಮಿಸುವುದು, ಅತಿಕ್ರಮಣದಂಥ ನಿಯಮ ಬಾಹಿರ ಚಟುವಟಿಕೆಗಳನ್ನು ನಡೆಸುತ್ತಲೇ ಇದೆ. ಭಾರತ-ಚೀನಾ ದ್ವಿಪಕ್ಷೀಯ ಸಂಬಂಧ ದಶಕದಿಂದಲೂ ಹಳಸಿದ ಸ್ಥಿತಿಯಲ್ಲೇ ಇದ್ದು, ಈಗೀಗ ಅದರ ತೀವ್ರತೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಚೀನಾ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರನ್ನೇ (China has renamed 11 places) ಬದಲಿಸಿದೆ.

ಅರುಣಾಚಲ ಪ್ರದೇಶದಲ್ಲಿ ಈಗ ಹೆಸರು ಬದಲಿಸಿದ 11 ಸ್ಥಳಗಳು ಇರುವ ಒಟ್ಟಾರೆ ಪ್ರದೇಶವನ್ನು ಚೀನಾ ದಕ್ಷಿಣ ಟಿಬೆಟ್​ ಎಂದು ಕರೆದಿದೆ. ಪರ್ವತ ಶ್ರೇಣಿಗಳು, ನದಿಗಳು, ಜನವಸತಿ ಪ್ರದೇಶಗಳ ಹೆಸರುಗಳ ಬದಲಾವಣೆ ಮಾಡಿರುವ ಆ ದೇಶ, ಇಷ್ಟು ದಿನ ಇದ್ದ ಹೆಸರನ್ನು ತೆಗೆದುಹಾಕಿ ಚೀನಿ ಭಾಷೆಯ ನಾಮಕರಣ ಮಾಡಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ದೇಶ ಹೀಗೆ ಹೆಸರು ಬದಲಾವಣೆಯ ಅಧಿಕಪ್ರಸಂಗತನ ತೋರುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ 2017ರ ಏಪ್ರಿಲ್​​ನಲ್ಲಿ 6 ಮತ್ತು 2021ರ ಡಿಸೆಂಬರ್​ನಲ್ಲಿ 15 ಪ್ರದೇಶಗಳ ಹೆಸರನ್ನು ಏಕಪಕ್ಷೀಯವಾಗಿ ನಿರ್ಣಯ ಮಾಡಿ ಬದಲಿಸಿತ್ತು. ಈ ಸಲ ಎರಡು ಭೂಪ್ರದೇಶಗಳು, ಎರಡು ವಸತಿ ಪ್ರದೇಶಗಳು, ಐದು ಗುಡ್ಡಪ್ರದೇಶ ಮತ್ತು ಎರಡು ನದಿಗಳಿಗೆ ಮರುನಾಮಕರಣ ಮಾಡಿದೆ.

ಇದನ್ನೂ ಓದಿ: Narendra Modi: ಚೀನಾ ಜಾಲತಾಣಗಳಲ್ಲೂ ಮೋದಿ ಜನಪ್ರಿಯ, ‘ಮೋದಿ ಅಮರ’ ಎಂಬ ಅಡ್ಡಹೆಸರಿಂದಲೇ ಖ್ಯಾತಿ

ಈ ಹಿಂದಿನ ವರ್ಷಗಳಲ್ಲಿ ಅರುಣಾಚಲ ಪ್ರದೇಶದಲ್ಲಿ ಚೀನಾ ಹೆಸರು ಬದಲಾವಣೆ ಮಾಡಿದ ವರದಿಯಾದಾಗ ಭಾರತ ಸರ್ಕಾರ ಖಡಾಖಂಡಿತವಾಗಿ ಅದನ್ನು ನಿರಾಕರಿಸಿತ್ತು. ಯಾವ ಪ್ರದೇಶವೂ ಚೀನಾದ ಭಾಗವಾಗಿಲ್ಲ. ಅರುಣಾಚಲ ಪ್ರದೇಶದ ಎಲ್ಲ ಸ್ಥಳಗಳೂ ಭಾರತದ ಭಾಗವೇ ಆಗಿವೆ. ಚೀನಾ ಅದ್ಯಾವುದೋ ಹೊಸ ಹೆಸರುಗಳನ್ನು ಆವಿಷ್ಕಾರ ಮಾಡಿ, ಅದನ್ನು ಇಟ್ಟಾಕ್ಷಣ ಅದು ಮಾನ್ಯವಾಗುವುದಿಲ್ಲ ಎಂದಿತ್ತು. ಈ ಬಾರಿಯೂ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಅದೇ ಪ್ರತಿಕ್ರಿಯೆ ನೀಡಿದೆ. ಇನ್ನೊಂದೆಡೆ, ಚೀನಾದ ತಜ್ಞರು, ’ಭೌಗೋಳಿಕ ಸನ್ನಿವೇಶವನ್ನು ಆಧರಿಸಿ ಚೀನಾ ಹೆಸರು ಬದಲಾವಣೆ ಮಾಡಿದ್ದು ಸರಿ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಚೀನಾದ ಸಿಸಿಟಿವಿ ಕ್ಯಾಮೆರಾಗಳನ್ನು ಭಾರತದಲ್ಲಿ ನಿಷೇಧಿಸಿ, ಅವು ಬೀಜಿಂಗ್​​ನ ಕಣ್ಣುಗಳು; ಪ್ರಧಾನಿಗೆ ಪತ್ರ ಬರೆದ ಕಾಂಗ್ರೆಸ್ ಶಾಸಕ​

Exit mobile version