Site icon Vistara News

China: ಮತ್ತೆ ಚೀನಾ ಕ್ಯಾತೆ; ಅರುಣಾಚಲ ಪ್ರದೇಶ, ಆಕ್ಸಾಯ್ ಚಿನ್ ಎಲ್ಲಾ ಅದರ ಮ್ಯಾಪ್‌ನೊಳಗೆ!

india china border

ಹೊಸದಿಲ್ಲಿ: ಚೀನಾ (china) ಸರ್ಕಾರ ಆಗಸ್ಟ್ 28ರಂದು “ಚೀನಾದ ಸ್ಟ್ಯಾಂಡರ್ಡ್ ಮ್ಯಾಪ್‌ʼನ 2023ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಭಾರತದ ಅರುಣಾಚಲ ಪ್ರದೇಶವನ್ನು (Arunachal pradesh) ಮತ್ತು ಅಕ್ಸಾಯ್ ಚಿನ್ (Aksai chin) ಪ್ರದೇಶಗಳನ್ನೂ ಸಂಪೂರ್ಣವಾಗಿ ಸೇರಿಸಿಕೊಂಡಿದೆ.

2023ರ ನಕ್ಷೆಯನ್ನು ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯ ಬಿಡುಗಡೆ ಮಾಡಿದೆ. ಅದರಲ್ಲಿ ಚೀನಾದ ಪಶ್ಚಿಮ ಗಡಿಯಲ್ಲಿ ಸಂಪೂರ್ಣ ದಕ್ಷಿಣ ಚೀನಾ ಸಮುದ್ರವನ್ನು ಒಳಗೊಂಡಿದೆ. ತೈವಾನ್‌ನ ಪೂರ್ವಕ್ಕೆ ಟೆಂತ್‌ ಡ್ಯಾಶ್ ರೇಖೆಯನ್ನು ಇರಿಸಿ ತೈವಾನ್‌ ದ್ವೀಪ ಕೂಡ ತನ್ನದೆಂದೇ ಬೀಜಿಂಗ್‌ ಹೇಳಿದೆ.

ಇದು ಈ ವರ್ಷದ ಏಪ್ರಿಲ್‌ನ ನಕ್ಷೆ. ಇದು ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರುಗಳನ್ನು ಬದಲಿಸಿ ಇಟ್ಟುಕೊಂಡಿದೆ. ಇದರಲ್ಲಿ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರಕ್ಕೆ ಸಮೀಪದ ಪಟ್ಟಣವೂ ಸೇರಿದೆ. ಇದು ಅರುಣಾಚಲ ಪ್ರದೇಶವನ್ನು ಮರು ಹೆಸರಿಸುತ್ತಿರುವ ಮೂರನೇ ಪಟ್ಟಿ. G-20 ಶೃಂಗಸಭೆಯ ಪೂರ್ವದಲ್ಲಿ ಭಾರತ ಇಲ್ಲಿ ಕೆಲವು ಕಾರ್ಯಕ್ರಮಗಳನ್ನು ನಡೆಸಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ಈ ಕೃತ್ಯ ಎಸಗಿದೆ ಎನ್ನಲಾಗುತ್ತಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೆಪ್ಟೆಂಬರ್ 9-10ರಂದು ನವದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

2023ರ ನಕ್ಷೆಯನ್ನು ಚೀನಾದಲ್ಲಿ “ನ್ಯಾಷನಲ್ ಮ್ಯಾಪಿಂಗ್ ಅವೇರ್ನೆಸ್ ಪಬ್ಲಿಸಿಟಿ ವೀಕ್” ಎಂದು ಕರೆಯುವ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.

ಸಾರ್ವಜನಿಕ ಬಳಕೆಗಾಗಿ ಪ್ರಮಾಣಿತ ನಕ್ಷೆಯನ್ನು ಬಿಡುಗಡೆ ಮಾಡಿದ ನಂತರ, ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯ ಸ್ಥಳ-ಆಧಾರಿತ ಸೇವೆಗಳು, ಕೃಷಿ, ಮತ್ತಿತರ ವಿವಿಧ ಕ್ಷೇತ್ರಗಳಲ್ಲಿ ಬಳಸಲು ʼಡಿಜಿಟಲ್ ನಕ್ಷೆಗಳು ಮತ್ತು ನ್ಯಾವಿಗೇಷನ್ʼ ನಕ್ಷೆಗಳನ್ನು ಬಿಡುಗಡೆ ಮಾಡಲಿರುವುದಾಗಿ ಹೇಳಿದೆ. ಈ ವರ್ಷವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸರ್ವೇಯಿಂಗ್ ಮತ್ತು ಮ್ಯಾಪಿಂಗ್ ಕಾನೂನಿನ 30ನೇ ವಾರ್ಷಿಕೋತ್ಸವ. “ಸರ್ವೇಯಿಂಗ್ ಮತ್ತು ಮ್ಯಾಪಿಂಗ್ ಉದ್ಯಮವನ್ನು ಬಲಪಡಿಸಲುʼ ಇದನ್ನು ಮಾಡಲಾಗುತ್ತಿದೆ.

ಬೀಜಿಂಗ್ ಗಡಿ ಪ್ರದೇಶಗಳ ನಿರ್ವಹಣೆಯನ್ನು ಬಿಗಿಗೊಳಿಸಿದೆ. 2022ರಲ್ಲಿ ಹೊಸ ಗಡಿ ಕಾನೂನನ್ನು ಅಂಗೀಕರಿಸಿದ್ದು, ಅದು “ರಾಷ್ಟ್ರೀಯ ಸಾರ್ವಭೌಮತ್ವವನ್ನು ರಕ್ಷಿಸುವ” ಕ್ರಮಗಳನ್ನು ತೆಗೆದುಕೊಳ್ಳಲು ಚೀನಾದಲ್ಲಿನ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳನ್ನು ನೀಡಿದೆ. ಹೊಸ ಹೆಸರುಗಳನ್ನು ನೀಡುವುದೂ ಈ ಕಾನೂನಿನಲ್ಲಿ ಒಂದು. ಅಲ್ಲಿನ ಸರ್ಕಾರ ಎಲ್ಲಾ ಹಂತಗಳಲ್ಲಿ ಗಡಿ ಕುರಿತ ಶಿಕ್ಷಣವನ್ನು ಉತ್ತೇಜಿಸುತ್ತಿದೆ. ಕಾನೂನಿನ ಆರ್ಟಿಕಲ್ 22ರ ಪ್ರಕಾರ ಚೀನೀ ಸೇನೆ ನಿಯಮಿತ ಗಡಿ ಡ್ರಿಲ್ಸ್‌ ನಡೆಸಬೇಕು; ʼಆಕ್ರಮಣಗಳು, ಅತಿಕ್ರಮಣಗಳು ಮತ್ತು ಪ್ರಚೋದನೆಗಳ”ನ್ನು “ದೃಢವಾಗಿ ತಡೆಯಬೇಕು, ಹೋರಾಡಬೇಕು” ಎಂದು ಕರೆ ನೀಡುತ್ತದೆ.

ಇದನ್ನೂ ಓದಿ: PM Narendra Modi: ತಿರಂಗಾ ತುಳಿಯದೆ ಎತ್ತಿ ಗೌರವಿಸಿದ ಮೋದಿ; ಚೀನಾ ಧ್ವಜ ತುಳಿದ ಕ್ಸಿ ಜಿನ್‌ಪಿಂಗ್!‌

Exit mobile version