ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ಸಂಘರ್ಷ ನಡೆದ ಬಳಿಕ ರಾಹುಲ್ ಗಾಂಧಿ (Rahul Gandhi) ಅವರು ಗಡಿ ಬಿಕ್ಕಟ್ಟಿನ ಕುರಿತು ನೀಡುತ್ತಿರುವ ಹೇಳಿಕೆಗಳು ವಿವಾದ ಸೃಷ್ಟಿಸುತಿದ್ದರೂ, ಅವರು ಅದೇ ಟೀಕೆ ಮುಂದುವರಿಸಿದ್ದಾರೆ. “ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಂತೆ, ಭಾರತದ ಮೇಲೆ ಚೀನಾ ಕೂಡ ದಾಳಿ ಮಾಡುವ ಸಾಧ್ಯತೆ ಇದೆ. ಉಕ್ರೇನ್ ಸ್ಥಿತಿಯೇ ನಮಗೂ ಬರಬಹುದು” ಎಂದು ರಾಹುಲ್ ಗಾಂಧಿ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ನಟ ಕಮಲ್ ಹಾಸನ್ ಜತೆ ಯುಟ್ಯೂಬ್ ಚಾನೆಲ್‌ನಲ್ಲಿ ಮಾತುಕತೆ ನಡೆಸುವಾಗ ರಾಹುಲ್ ಗಾಂಧಿ ಹೀಗೆ ಹೇಳಿದ್ದಾರೆ. “ರಷ್ಯಾ ಉಕ್ರೇನ್‌ಅನ್ನು ಹೇಗೆ ನೋಡುತ್ತಿದೆಯೋ, ಚೀನಾ ಕೂಡ ಭಾರತವನ್ನು ಹಾಗೆಯೇ ನೋಡುತ್ತಿದೆ. ಮುಂದೊಂದು ದಿನ ನಮಗೂ ಉಕ್ರೇನ್ ಸ್ಥಿತಿಯೇ ಬರಬಹುದು. ಭಾರತಕ್ಕೂ ಉಕ್ರೇನ್ ಪರಿಸ್ಥಿತಿಗೂ ಸಾಮ್ಯತೆ ಇದೆ” ಎಂದು ಹೇಳಿರುವ ವಿಡಿಯೊ ವೈರಲ್ ಆಗಿದೆ. ಹಾಗೆಯೇ, ಜನ ರಾಹುಲ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.
“ನಿಮ್ಮ ಚುಟುವಟಿಕೆಗಳ ಮೇಲೆ ನಿಗಾ ಇರಲಿ. ಹೀಗೆಯೇ ಆದರೆ, ನಾವು ಅರುಣಾಚಲ ಪ್ರದೇಶ, ಲಡಾಕ್‌ಅನ್ನು ಪ್ರವೇಶಿಸುತ್ತೇವೆ ಎಂಬುದಾಗಿ ಚೀನಾ ಎಚ್ಚರಿಕೆ ನೀಡುತ್ತಿದೆ. ಮುಂದೊಂದು ದಿನ, ಉಕ್ರೇನ್‌ಅನ್ನು ರಷ್ಯಾ ಪ್ರವೇಶಿಸಿದಂತೆ, ಚೀನಾ ಕೂಡ ಭಾರತವನ್ನು ಪ್ರವೇಶಿಸಬಹುದು” ಎಂದಿದ್ದಾರೆ. “ಗಡಿಯಲ್ಲಿ ಭಾರತದ ಸೈನಿಕರು ಪೆಟ್ಟು ತ್ತಿನ್ನುತ್ತಿದ್ದಾರೆ”, “ಯುದ್ಧ ನಡೆದರೆ ಭಾರತವು ಪಾಕಿಸ್ತಾನ ಹಾಗೂ ಚೀನಾವನ್ನು ಎದುರಿಸಬೇಕು” ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿಕೆ ನೀಡಿದ್ದು ಕೂಡ ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ | Rahul Gandhi On Army | ನಮ್ಮ ಸೈನಿಕರಿಗೆ ಪೆಟ್ಟು ಬೀಳುತ್ತಿವೆ, ದೇಶದ ಯೋಧರಿಗೆ ರಾಹುಲ್ ಗಾಂಧಿ ಅವಮಾನ